ಡಾ.ಸಯ್ಯದ್ ನಾಸೀರ್ ಹುಸೇನ್, ರಾಜ್ಯಸಭಾ ಸದಸ್ಯ
- ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಪ್ರಶ್ನೆ
- ಏಳು ವರ್ಷಗಳಲ್ಲಿ ಅನೇಕ ಬಾರಿ ಪ್ರಶ್ನೆಪತ್ರಿಕೆ ಸೋರಿಕೆ
- ನೀಟ್ ಅಕ್ರಮದ ಕುರಿತು ಸಂಪೂರ್ಣ ತನಿಖೆಗೆ ಆಗ್ರಹ
ಯುಪಿಎಸ್‌ಸಿ, ಐಐಟಿ, ಐಐಎಂ ಹಾಗೂ ಜೆಎನ್‌ಯು ಹಲವು ವರ್ಷದಿಂದ ರಾಷ್ಟ್ರೀಯ (national) ಮಟ್ಟದ ಪರೀಕ್ಷೆಗಳನ್ನು (exams) ಯಶಸ್ವಿಯಾಗಿ ನಡೆಸುತ್ತಿದ್ದರೂ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆದಿಲ್ಲ. ಆದರೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (agency) (ಎನ್‌ಟಿಎ) ಮೂಲಕ ನಡೆಯುವ ಪರೀಕ್ಷೆಗಳಲ್ಲಿ ಮಾತ್ರ ಮತ್ತೆ ಮತ್ತೆ ಅಕ್ರಮಗಳು ನಡೆಯುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಸಯ್ಯದ್ ನಾಸೀರ್ ಹುಸೇನ್ ಹೇಳಿದರು.
ಏಳು ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಅನೇಕ ಬಾರಿ ಸೋರಿಕೆಯಾಗಿರುವ ಮಾಹಿತಿ ಕಾಂಗ್ರೆಸ್ ಅಧ್ಯಯನದಿಂದ ಲಭ್ಯವಾಗಿದೆ. ಹೀಗಾಗಿ ಎನ್‌ಟಿಎ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎನ್‌ಟಿಎ ಸಂಸತ್ತಿನ ಕಾಯ್ದೆಯಡಿ ಸ್ಥಾಪಿತ ಸಂಸ್ಥೆಯಲ್ಲ. ಕೇಂದ್ರ ಸರ್ಕಾರದ ಆಡಳಿತಾತ್ಮಕ ಆದೇಶದ ಮೂಲಕ ರಚನೆಯಾದ ಸಂಸ್ಥೆ. ಇದರ ಕಾರ್ಯವೈಖರಿ, ಸಿಬ್ಬಂದಿ ನೇಮಕಾತಿ ಹಾಗೂ ಪರೀಕ್ಷಾ ಕೇಂದ್ರಗಳ ಆಯ್ಕೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕೆಳಹಂತದ ಸಿಬ್ಬಂದಿಯನ್ನು ಮಾತ್ರ ಅಮಾನತು ಅಥವಾ ವರ್ಗಾವಣೆ ಮಾಡುವುದರಿಂದ ಜವಾಬ್ದಾರಿ ನಿಭಾಯಿಸಿದಂತೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಪ್ರಮುಖರಾದ ಶಿವಕುಮಾರ್, ಕಲೀಂ ಪಾಷಾ, ಶಿವಣ್ಣ, ರಮೇಶ್ ಶಂಕರಘಟ್ಟ, ಶಿವಾನಂದ್ ಸುದ್ದಿಗೋಷ್ಠಿಯಲ್ಲಿದ್ದರು.
ಶಿಕ್ಷಣದಲ್ಲಿ ಬದಲಾವಣೆ ಅವಶ್ಯ
ದೇಶದ ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯ ಸಮಗ್ರ ಮರುರಚನೆ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಮುಕ್ತ ಚರ್ಚೆ ನಡೆಯಬೇಕು. ಪಾರದರ್ಶಕ, ವಿಶ್ವಾಸಾರ್ಹ ಹಾಗೂ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಶಿಕ್ಷಣ ವ್ಯವಸ್ಥೆ ನಿರ್ಮಾಣ ಆಗಬೇಕು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಸಂಪೂರ್ಣ ಪರೀಕ್ಷಾ ವ್ಯವಸ್ಥೆಯ ವೈಫಲ್ಯದ ಸಂಕೇತ. ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾ ಸಾಮರ್ಥ್ಯ, ವಿಮರ್ಶಾತ್ಮಕ ಚಿಂತನೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸುವ ಶಿಕ್ಷಣದ ಕೊರತೆಯಿದೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವಂತೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು. ದುಬಾರಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅವಲಂಬನೆ ಕಡಿಮೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಡಾ. ಸಯ್ಯದ್ ನಾಸೀರ್ ಹುಸೇನ್ ಹೇಳಿದರು.
ಚರ್ಚೆಗೆ ಅವಕಾಶ ನೀಡಿಲ್ಲ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಸುವಂತೆ ಕಾಂಗ್ರೆಸ್ ಹಲವು ಬಾರಿ ಮನವಿ ಮಾಡಿದ್ದರೂ ಚರ್ಚೆಗೆ ಅವಕಾಶ ನೀಡಿಲ್ಲ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರದ ಹುಂಡಿಯನ್ನು ಸಮರ್ಪಕವಾಗಿ ನಿರ್ವಹಿಸದ ಕೇಂದ್ರ ಸರ್ಕಾರ ದೇಶದ ಆಡಳಿತವನ್ನು ಹೇಗೆ ಸಮರ್ಥವಾಗಿ ನಡೆಸಲಿದೆ ಎಂದು ಡಾ. ಸಯ್ಯದ್ ನಾಸೀರ್ ಹುಸೇನ್ ಪ್ರಶ್ನಿಸಿದರು.
ಪೆಟ್ರೋಲ್‌ನಲ್ಲಿ ಇ-20 ಎಥನಾಲ್ ಮಿಶ್ರಣ ಬಳಕೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಮುಂಬರುವ ದಿನಗಳಲ್ಲಿ ಈ ವಿಷಯವನ್ನು ಕೈಗೆತ್ತಿಕೊಂಡು ರಾಷ್ಟ್ರವ್ಯಾಪಿ ಜನಾಂದೋಲನ ರೂಪಿಸಲಾಗುವುದು. ಸಂಸತ್‌ನೊಳಗೆ ಹಾಗೂ ಹೊರಗೆ ಇದರ ಬಗ್ಗೆ ಹೋರಾಟ ನಡೆಸಲಾಗುವುದು.
— ಡಾ. ಸಯ್ಯದ್ ನಾಸೀರ್ ಹುಸೇನ್ ರಾಜ್ಯಸಭಾ ಸದಸ್ಯ