ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ. 
ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ಗೆ ಸಾರಥಿ ಯಾರು? I shivamogga congress

ಪ್ರಮುಖ ಮುಖ್ಯಾಂಶಗಳು

  • ಆಯ್ಕೆಗೆ ಈ ಬಾರಿ ಎಐಸಿಸಿ ಎಂಟ್ರಿ
  • ನಾಳೆಯಿಂದ ಆರಂಭವಾಗಲಿದೆ ಪ್ರಕ್ರಿಯೆ
  • ಐವರು ವೀಕ್ಷಕರ ನೇಮಕ
  • ಅಧ್ಯಕ್ಷ ಸ್ಥಾನದ ಮೇಲೆ ಹಲವರ ಕಣ್ಣು
ಅರವಿಂದ ಅಕ್ಲಾಪುರ ಶಿವಮೊಗ್ಗ
ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಿರುವ ಕಾಂಗ್ರೆಸ್ (congress) ಹೈಕಮಾಂಡ್ ಜಿಲ್ಲಾ ಘಟಕಗಳಿಗೆ ಹೊಸ ಸಾರಥಿಗಳ ಹುಡುಕಾಟಕ್ಕೆ ಮುಂದಾಗಿದೆ. ಎಐಸಿಸಿ (aicc) ಹಾಗೂ ಕೆಪಿಸಿಸಿಯಿಂದ (kpcc) ಇದಕ್ಕಾಗಿ ವೀಕ್ಷಕರನ್ನೂ ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್‌ನೊಳಗೆ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಹಾಲಿ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಒಲವು ಹೊಂದಿದ್ದರೆ, ಇವರೊಂದಿಗೆ ಮತ್ತೊಂದಿಷ್ಟು ಮಂದಿ ರೇಸ್‌ನಲ್ಲಿದ್ದಾರೆ. ವೀಕ್ಷಕರೆದುರು ತಮ್ಮ ಪರವಾಗಿ ಅಭಿಪ್ರಾಯ ರೂಪುಗೊಳ್ಳುವಂತೆ ಬೆಂಬಲಿಗರ ತಂಡವನ್ನು ಸಿದ್ಧಪಡಿಸುತ್ತಿದ್ದಾರೆ. ತೆರೆಮರೆಯಲ್ಲಿ ಬಹಳಷ್ಟು ಕಸರತ್ತು ನಡೆಯುತ್ತಿದೆ.
ಎಂದಿನಂತೆಯೇ ಘಟಾನುಘಟಿ ಮುಖಂಡರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆಯಾದರೂ ಈ ಬಾರಿ ಅಧ್ಯಕ್ಷರ ಆಯ್ಕೆ ವಿಭಿನ್ನವಾಗಿ ನಡೆಯುತ್ತಿರುವುದರಿಂದ ಇಲ್ಲಿ ಬಣ ರಾಜಕೀಯ, ಪ್ರಭಾವ, ನಾಯಕರ ಕೃಪಾಕಟಾಕ್ಷಕ್ಕೆ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಕೆಲವರು ದಾರಿ ಕಾಣದ ಸ್ಥಿತಿಯಲ್ಲಿದ್ದಾರೆ. ಮೊದಲು ವೀಕ್ಷಕರು ಬರಲಿ ಆಮೇಲೆ ನೋಡಿಕೊಳ್ಳೋಣ ಎನ್ನುವ ಮನಸ್ಥಿತಿ ಕೆಲವರದು.
ಈ ಬಾರಿಯೂ ಶಿವಮೊಗ್ಗ ನಗರದವರೇ ಜಿಲ್ಲಾ ಕಾಂಗ್ರೆಸ್‌ನ ನೇತೃತ್ವ ವಹಿಸುತ್ತಾರೋ ಅಥವಾ ಬೇರೆ ತಾಲೂಕಿನವರಿಗೆ ಅವಕಾಶ ಸಿಗುತ್ತದೋ ಎಂಬ ಕುತೂಹಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನೆಮಾಡಿದೆ. ಏಕೆಂದರೆ ಈ ಹಿಂದೆ ಹೆಚ್ಚಿನ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನೆಲೆಸಿದವರೇ
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಏನೇ ಆದರೂ ಶಿವಮೊಗ್ಗ ಜಿಲ್ಲೆಯಲ್ಲಿ ಸೂಕ್ಷ್ಮವಾಗಿರುವ ಕಾಂಗ್ರೆಸ್ ವಾತಾವರಣಕ್ಕೆ ಸೂಕ್ತವಾದ ಅಭ್ಯರ್ಥಿಯನ್ನು ಶಿಫಾರಸು ಮಾಡುವ, ಇಲ್ಲಿನ ಕಾರ್ಯಕರ್ತರು, ಮುಖಂಡರ ಅನಿಸಿಕೆಯನ್ನು ಹೈಕಮಾಂಡ್‌ಗೆ ತಲುಪಿಸುವ ವೀಕ್ಷಕರ ಜವಾಬ್ದಾರಿ ದೊಡ್ಡದಿದೆ. ಮುಂದಿನ ತಿಂಗಳ ಆರಂಭದಲ್ಲಿ ಇಲ್ಲಿಗೆ ಆಗಮಿಸಲಿರುವ ವೀಕ್ಷಕರು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ದೀರ್ಘಾವಧಿ ಅಧ್ಯಕ್ಷ
ಜಿಲ್ಲಾ ಕಾಂಗ್ರೆಸ್‌ನಲ್ಲಿ ಆರ್.ಪ್ರಸನ್ನಕುಮಾರ್ ದೀರ್ಘಾವಧಿ ಅಧ್ಯಕ್ಷ. 2006ರಿಂದ 2016ರವರೆಗೆ ಜಿಲ್ಲಾ ಕಾಂಗ್ರೆಸ್‌ಗೆ ನೇತೃತ್ವ ವಹಿಸಿದ್ದ ಅವರು, ಮತ್ತೆ 2024ರ ಏಪ್ರಿಲ್‌ನಲ್ಲಿ ಅದೇ ಸ್ಥಾನಕ್ಕೆ ಮರಳಿದರು. 12 ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಈ ಸ್ಥಾನ ನಿಭಾಯಿಸಿದ್ದು ಅವರ ಹೆಗ್ಗಳಿಕೆ. ಈಗ ಜಿಲ್ಲಾಧ್ಯಕ್ಷ ಸ್ಥಾನ ಕೈತಪ್ಪಿದರೆ ಸೂಡಾ ಅಧ್ಯಕ್ಷ ಸ್ಥಾನದ ಮೇಲೆ ಪ್ರಸನ್ನಕುಮಾರ್ ಕಣ್ಣಿಟ್ಟಿದ್ದಾರೆ ಎಂಬುದು ಕಾಂಗ್ರೆಸ್‌ನೊಳಗೆ ಕೇಳಿಬರುತ್ತಿರುವ ಮಾತು. ಆದರೆ ಸರ್ಕಾರ ನಿಗಮ ಮಂಡಳಿಗಳ ಅಧ್ಯಕ್ಷರ ಬದಲಾವಣೆ ಮಾಡಿದರೆ ಮಾತ್ರ ಪ್ರಸನ್ನಕುಮಾರ್ ಪ್ರಯತ್ನ ಮುಂದುವರಿಸಬಹುದು. ಇನ್ನೊಂದೆಡೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಒಲಿದುಬಂದರೆ ಎರಡನೇ ಬಾರಿಗೆ ಅದನ್ನು ನಿಭಾಯಿಸಲು ಹಾಲಿ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಕೂಡಾ ಸಿದ್ಧವಾಗಿದ್ದಾರೆ.
ನಾಳೆ ಮಹತ್ವದ ಸಭೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆಗೆ ಜು.24ರಂದು ನಡೆಯುವ ಮಹತ್ವದ ಸಭೆಯೊಂದಿಗೆ ಚಾಲನೆ ಸಿಗಲಿದೆ. ಸಂಘಟನ್ ಸೃಜನ್ ಅಭಿಯಾನ್ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಸಂಘಟನೆ ಬಲಪಡಿಸಲು ಮುಂದಾಗಿದೆ. ಇದರ ಭಾಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಜು.24ರ ಸಂಜೆ 4ಕ್ಕೆ ಮಹತ್ವದ ಸಭೆಯೊಂದನ್ನು ಕರೆಯಲಾಗಿದೆ. ಇದರಲ್ಲಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ವರದಿ ನೀಡಲು ಆಯ್ಕೆಯಾಗಿರುವ ಎಐಸಿಸಿ ಹಾಗೂ ಕೆಪಿಸಿಸಿ ವೀಕ್ಷಕರು ಭಾಗವಹಿಸುವರು. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ, ಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವೀಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
ಹೀಗಿರಲಿದೆ ಪ್ರಕ್ರಿಯೆ
ನಿಯೋಜಿತ ಎಐಸಿಸಿ ವೀಕ್ಷಕರು ಹಾಗೂ ಕೆಪಿಸಿಸಿ ವೀಕ್ಷಕರ ತಂಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸಭೆ ನಡೆಸಲಿದೆ. ಇದರಲ್ಲಿ ಸಂಬಂಧಪಟ್ಟ ಶಾಸಕರು, ಆ ಕ್ಷೇತ್ರದ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮುಖಂಡರ ಅಭಿಪ್ರಾಯ ಸಂಗ್ರಹಿಸಲಿದೆ. ಎಲ್ಲರ ಅನಿಸಿಕೆಯನ್ನು ಒಗ್ಗೂಡಿಸಿ ಯಾರ ಬಗ್ಗೆ ಹೆಚ್ಚು ಒಲವು ವ್ಯಕ್ತವಾಗುತ್ತದೆ ಎಂಬುದನ್ನು ಗಮನಿಸಿ ಕೆಪಿಸಿಸಿಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಲಿದೆ. ಬಳಿಕ ಅದು ಎಐಸಿಸಿ ಕೈ ಸೇರಲಿದೆ. ದೆಹಲಿ ನಾಯಕರು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಅಂತಿಮಗೊಳಿಸುತ್ತಾರೆ ಎಂಬುದು ಪಕ್ಷದವರು ಹೇಳುವ ಮಾತು. ಈ ಪ್ರಕ್ರಿಯೆಗಳಲ್ಲಿ ಇನ್ನೂ ಏನಾದರೂ ಬದಲಾವಣೆಗಳು ಆಗುತ್ತವೆಯೇ ಸಾಮಾಜಿಕ ನ್ಯಾಯ, ಕ್ಷೇತ್ರದಲ್ಲಿ ಮತದಾರರ ಪ್ರಮಾಣ, ಹಿರಿತನ, ಸಂಘಟನಾ ಕೌಶಲ ಹೀಗೆ ಬೇರೆ ಅಂಶಗಳನ್ನೂ ಪರಿಗಣಿಸಲಾಗುತ್ತದೆಯೇ ಎಂಬುದು ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಭೆಯ ಬಳಿಕ ಸ್ಪಷ್ಟವಾಗಲಿದೆ.
ಹಲವು ಆಕಾಂಕ್ಷಿಗಳು
ಎನ್‌ಎಸ್‌ಯುಐ, ಯುವ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿ ಈಗ ಕಾಂಗ್ರೆಸ್ ಸಂಘಟನೆಯಲ್ಲೂ ಗುರುತಿಸಿಕೊಂಡಿರುವ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್ ಅಧ್ಯಕ್ಷ ಸ್ಥಾನದತ್ತ ಒಲವು ಹೊಂದಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ಮಾಜಿ ಸಂಸದ ಆಯನೂರು ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಕೂಡಾ ಈ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.