ಹೊಳೆಹೊನ್ನೂರು: ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ (2020) ಮೇಲ್ದರ್ಜೆಗೇರಿ ಆರು ವರ್ಷಗಳಾದರೂ ಟೇಕಾಫ್ ಆಗಿಲ್ಲ. ಕಾನೂನು ಹೋರಾಟದಲ್ಲಿ ಹಿನ್ನಡೆಯಾದರೂ ಅಕ್ಕಪಕ್ಕದ ಹಳ್ಳಿಗಳು ಪಪಂ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಪಟ್ಟು ಸಡಿಲಿಸುತ್ತಿಲ್ಲ.
ಪಪಂಗೆ ಅಗತ್ಯವಿರುವ ಜನಸಂಖ್ಯೆ ಇರದ ಕಾರಣ ಅಕ್ಕಪಕ್ಕದ 3 ಗ್ರಾಮ ಪಂಚಾಯಿತಿಯ ಕೆಲ ಹಳ್ಳಿಗಳನ್ನು ಹೊಳೆಹೊನ್ನೂರು ವ್ಯಾಪ್ತಿಗೆ ಸೇರಿಸಿಕೊಂಡು ಪಪಂ ಅಸ್ತಿತ್ವಕ್ಕೆ ತರಲಾಗಿತ್ತು. ಸಮೀಪದ ಎಮ್ಮೆಹಟ್ಟಿ ಗ್ರಾಪಂನಿಂದ ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ಹೊಳೆಬೈರನಹಳ್ಳಿ. ಹನುಮಂತಾಪುರ ಗ್ರಾಪಂನಿಂದ ಜಂಬರಘಟ್ಟೆ, ಸಿದ್ಲಿಪುರ ಗ್ರಾಪಂನಿಂದ ಡಾಣಾಯಕಪುರವನ್ನು ಸೇರಿಸಿಕೊಂಡು ವಿರೋಧದ ನಡುವೆಯೂ ಪಪಂ ಅಸ್ತಿತ್ವಕ್ಕೆ ಬಂದಿತ್ತು.
ಪಪಂಗೆ ವ್ಯಾಪ್ತಿಗೆ ಸೇರುವುದಿಲ್ಲ ಎಂದು ನ್ಯಾಯಾಲಯದ ಮೊರೆಹೋಗಿದ್ದ ಗ್ರಾಮಗಳಿಗೆ ಕೊರ್ಟ್‌ನಲ್ಲಿ ಹಿನ್ನಡೆಯಾಗಿದೆ. ಎಲ್ಲ ವಿಘ್ನಗಳು ದೂರವಾಗಿ ಚುನಾವಣೆಗೆ ಕಾಲ ಕೂಡಿಬಂದಿದೆ. ಪಪಂ ವ್ಯಾಪ್ತಿಗೆ ಸೇರಿದ ಹಳ್ಳಿಗಳನ್ನು 16 ವಾರ್ಡ್‌ಗಳಾಗಿ ಪರಿವರ್ತಿಸಿದ್ದು, ಮತದಾರರ ಪಟ್ಟಿಯೂ ಪರಿಷ್ಕರಣೆಯಾಗಿದೆ.
ಪಪಂ ಅಸ್ತಿತ್ವಕ್ಕೆ ತನ್ನ ವ್ಯಾಪ್ತಿಯ ಗ್ರಾಮಗಳನ್ನು ಬಿಟ್ಟುಕೊಟ್ಟ ಹನುಮಂತಾಪುರ ಹಾಗೂ ಸಿದ್ಲಿಪುರ ಗ್ರಾಪಂಗಳಿಗೂ 6 ವರ್ಷದಿಂದ ಚುನಾವಣೆ ಭಾಗ್ಯ ಸಿಗದಂತಾಗಿದೆ. ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ನೇತೃತ್ವದಲ್ಲಿ ಗ್ರಾಮ ಸಮಿತಿಗಳು ಸಂಬಂಧಿಸಿದ ಸಚಿವರಿಗೆ ಹಳ್ಳಿಗಳ ವಾಸ್ತವ ಚಿತ್ರಣ ತಿಳಿಸಿ ಗ್ರಾಪಂಗಳನ್ನು ಉಳಿಸುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವರಾದ ಸಂತೋಷ್ ಲಾಡ್ ಹಾಗೂ ಪ್ರಿಯಾಂಕ್ ಖರ್ಗೆ ಅವರು ಎಮ್ಮೆಹಟ್ಟಿ ಗ್ರಾಪಂ ಉಳಿಸಿಕೊಡುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ನೀಡಿದ್ದರು. ಆದರೆ ಸಚಿವ ಸಂಪುಟ ಬದಲಾಗಿರುವುದರಿಂದ ಗ್ರಾಮ ಸಮಿತಿಗಳಿಗೆ ಮತ್ತೆ ಸಮಸ್ಯೆಯಾಗಿದೆ.
ಗ್ರಾಮಗಳು ಪಪಂಗೆ ಸೇರ್ಪಡೆಯಾದರೆ ಗ್ರಾಮೀಣ ಕೃಪಾಂಕ, ಉದ್ಯೋಗ ಖಾತ್ರಿ ಮತ್ತಿತರ ಸೌಲಭ್ಯ ಸಿಗುವುದಿಲ್ಲ. ತೆರಿಗೆಯೂ ಹೆಚ್ಚಾಗಲಿದೆ. ಹಳ್ಳಿಗಳು ವಾರ್ಡ್‌ಗಳಾಗಿ ವಿಂಗಡಣೆ ಆಗಿರುವುದರಿಂದ ಗ್ರಾಮಗಳ ಆಡಳಿತ ಸ್ಥಳೀಯರ ಕೈತಪ್ಪುವ ಭೀತಿಯೂ ಪಪಂ ವ್ಯಾಪ್ತಿಗೆ ಸೇರ್ಪಡೆಯಾಗಲು ಹಿನ್ನಡೆಯಾಗುತ್ತಿದೆ. 2025ರಲ್ಲಿ ವಾರ್ಡ್ ವಿಂಗಡಣೆ ನಂತರ ಚುನಾವಣೆಗೆ ಮಿಸಲಾತಿ ಪಟ್ಟಿಯೂ ಪ್ರಕಟವಾಗಿತ್ತು. ಮೀಸಲಾತಿ ಪ್ರಶ್ನಿಸಿ ಸ್ಥಳೀಯರು ರಿಟ್ ಸಲ್ಲಿಸಿದ ಕಾರಣ ಚುನಾವಣೆಗೆ ಅಡ್ಡಿಯಾಯಿತು.
ಸಮಸ್ಯೆಗಳ ಸರಮಾಲೆ: ಗ್ರಾಪಂನಿಂದ ಹೊರಬಂದು ಪಪಂ ವ್ಯಾಪ್ತಿಗೆ ಸೇರಿದ ಗ್ರಾಮಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಉದ್ಯೋಗ ಖಾತ್ರಿ ಕೆಲಸಗಳಿಲ್ಲದೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಪಟ್ಟಣ ಸೇರಿ ಹಳ್ಳಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಣ್ಣ ಮಳೆ ಬಂದರೂ ರಸ್ತೆಗಳು ಕೆರೆಯಂತಾಗುತ್ತಿವೆ. ಸರ್ಕಾರದ ಸೌಲಭ್ಯಗಳು ಅಶಕ್ತರಿಗೆ ತಲುಪುತ್ತಿಲ್ಲ. ಗ್ರಾಮೀಣ ಜನರು ಸಣ್ಣ ಪುಟ್ಟ ಕೆಲಸಗಳಿಗೂ ಹೊಳೆಹೊನ್ನೂರಿಗೆ ಹೋಗಬೇಕಾಗಿದೆ. ಬೀದಿ ದೀಪಗಳಿಲ್ಲದೆ ರಸ್ತೆಗಳಲ್ಲಿ ಓಡಾಡಲು ಭಯ ಉಂಟಾಗುತ್ತಿದೆ. ಅನುದಾನವಿದ್ದರೂ ಬಳಸಿಕೊಳ್ಳಲಾಗದ ಪರಿಸ್ಥಿತಿ ಉಂಟಾಗಿಇದೆ.
ಚುನಾವಣೆಗೆ ಕಾತರ: ಎಮ್ಮೆಹಟ್ಟಿ, ಸಿದ್ಲಿಪುರ, ಹನುಮಂತಾಪುರ ಪಿಡಿಒಗಳ ಮೇಲೆ ಒತ್ತಡ ಹಾಕಿ ವ್ಯವಸ್ಥಿತವಾಗಿ ಪಪಂ ಅನ್ನು ಅಸ್ತಿತ್ವಕ್ಕೆ ತರಲಾಯಿತು. ಸಂಚು ತಿಳಿಯುತ್ತಿದಂತೆ ಗ್ರಾಮಸ್ಥರು ಎಮ್ಮೆಹಟ್ಟಿ ಗ್ರಾಪಂಗೆ ಬೀಗ ಹಾಕಿ ಜಿಲ್ಲಾಡಳಿತಕ್ಕೆ ಯಾವುದೇ ದಾಖಲೆ ನೀಡದಂತೆ ಹೋರಾಟ ನಡೆಸಿದರು. ಅಷ್ಟರಲ್ಲಾಗಲೇ ವಿಧಾನ ಸಭೆಯಲ್ಲಿ ನೂತನ ಪಪಂಗೆ ಅನುಮೋದನೆ ಸಿಕ್ಕಿತ್ತು. ಗುಡುಮಗಟ್ಟೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾಡಳಿತಕ್ಕೆ ಅನುಮೋದನೆ ಪತ್ರ ಹಸ್ತಾಂತರಿಸಿದರು. ಇದೀಗ ನೂತನ ಪಪಂ ಚುನಾವಣೆ ಎದುರು ನೋಡುತ್ತಿದೆ. ಆಕಾಂಕ್ಷಿಗಳೂ ಕೂಡ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. "
ಹೊಳೆಹೊನ್ನೂರು ನಿವಾಸಿಗಳಿಗೆ ಪಪಂ ಅಸ್ತಿತ್ವಕ್ಕೆ ತರುವ ಚಿಂತೆ, ಅಕ್ಕಪಕ್ಕದ ಹಳ್ಳಿಯವರಿಗೆ ಗ್ರಾಪಂಗಳನ್ನು ಉಳಿಸಿಕೊಳ್ಳುವ ಇರಾದೆ. ಒಂದೇ ಕ್ಷೇತ್ರದ ಜನತೆಯ ಪಪಂ ಅಸ್ತಿತ್ವ ಹಾಗೂ ಗ್ರಾಪಂ ಉಳಿವಿನ ಹೋರಾಟದಲ್ಲಿ ಮಧ್ಯಪ್ರವೇಶಿಸಿ ಯಾರಿಗೂ ಏನೂ ಹೇಳಲಾಗದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದೇವೆ. ಪಪಂಗೆ ಚುನಾವಣೆ ನಡೆದರೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ.
— ಶಾರದಾ ಪೂರ‌್ಯಾನಾಯ್ಕಾ, ಗ್ರಾಮಾಂತರ ಶಾಸಕಿ