ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚೈತ್ರ ಚೇತನ ಕವನ ಸಂಕಲನವನ್ನು ಪ್ರಾಧ್ಯಾಪಕ ಡಾ. ಶ್ರೀಪತಿ ಹಳಗುಂದ ಬಿಡುಗಡೆ ಮಾಡಿದರು. ಹ.ಆ.ಪಾಟೀಲ. ಕೆ.ಮೋಹನ್‌ಕುಮಾರ್, ತ.ಮ.ನರಸಿಂಹ ಇತರರಿದ್ದರು. 
ಶಿವಮೊಗ್ಗ

ಸಾಹಿತ್ಯದಿಂದ ಸಮಾಜದ ಸುಸ್ಥಿತಿ ಸಾಧ್ಯ | Literature programme

ರಿಪ್ಪನ್‌ಪೇಟೆ: ಸಾಹಿತ್ಯ ಚಲನಶೀಲ. ತನ್ನಲ್ಲಿರುವ ಸತ್ವದಿಂದಲೇ ಕಾಲ ಕಾಲಕ್ಕೆ ಜಾಗೃತಿ ಮೂಡಿಸುತ್ತ ಸಮಾಜವನ್ನು ಸುಸ್ಥಿತಿಯಲ್ಲಿಡಲು ಶ್ರಮಿಸುತ್ತದೆ ಎಂದು ಪ್ರಾಧ್ಯಾಪಕ ಡಾ. ಶ್ರೀಪತಿ ಹಳಗುಂದ ಹೇಳಿದರು.
ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಮುದ್ದು ಕಮಲ ಪ್ರಕಾಶನದ, ಎಂ.ಮಂಜುನಾಥ ಭಂಡಾರಿ ಅವರ ‘ಚೈತ್ರ ಚೇತನ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಬರಹಗಾರನಿಗೆ ತನ್ನ ಕೃತಿಗಳನ್ನು ಹೊರತರುವ ಸಂದರ್ಭ ತೀವ್ರವಾದ ಚಡಪಡಿಕೆ ಇರುತ್ತದೆ. ಸಮಾಜಕ್ಕೆ ಒಪ್ಪಿಸಿದ ಮೇಲೆ ನಿರುಮ್ಮಳನಾಗುತ್ತಾನೆ. ಸಾಹಿತ್ಯ ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಲೇಬೇಕು. ಎಲ್ಲ ಬರವಣಿಗೆಯೂ ಎಲ್ಲರಿಗೂ ಹಿತವಾಗಬೇಕಿಲ್ಲ. ದ.ರಾ.ಬೇಂದ್ರೆ ಅವರ ಬರಹ ಒಪ್ಪದ ಅಂದಿನ ಸರ್ಕಾರ ಕವಿಯನ್ನು ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಿತ್ತು. ನಂತರದ ದಿನಗಳಲ್ಲಿ ಅವರ ಪಾಂಡಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು ಎಂದರು.
ಕನ್ನಡ ಬರೆಯುವುದು, ಬಳಸುವುದರಿಂದ ಭಾಷೆ ಉಳಿಸಬಹುದು. ಕವಿತೆಗೆ ಸಾವಿಲ್ಲ. ಸಾವಿರ ವರ್ಷಗಳಾದ ಮೇಲೂ ಜೀವಂತಿಕೆ ಪಡೆದುಕೊಳ್ಳುತ್ತದೆ. ಸಮಾಜವನ್ನು ಗ್ರಹಿಸುವ ಮತ್ತು ಅದನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇರುವವನು ಸಾಹಿತಿ. ಸಾಹಿತ್ಯದ ಸಾಲುಗಳು ಮುಂದೆಂದೋ ಆಗುವ ಬದಲಾವಣೆಗೆ ನಾಂದಿ. ಈಗಲೇ ಬದಲಾಗುವ ಭ್ರಾಂತಿಯಲ್ಲ ಎಂದರು.
ಕವಿತೆ ರಚಿಸುವುದು ಸುಲಭವೂ, ಸಂಕೀರ್ಣವೂ ಹೌದು. ಪ್ರತಿ ಕವಿತೆ ಆಯಾಕಾಲಕ್ಕೆ ತನ್ನ ಮೌಲ್ಯವನ್ನು ಮರುವಿಮರ್ಶೆಗೆ ಒಡ್ಡಿಕೊಳ್ಳುತ್ತದೆ. ಕವಿ ಮಂಜುನಾಥ್ ಭಂಡಾರಿ ಅವರ ಸಂಕಲನದಲ್ಲಿ ವೇದನೆ, ನಿವೇದನೆ, ಸಂವೇದನೆ, ಆಲೋಚನೆ, ವಿಮರ್ಶೆ, ವಿಷಾದ ಎಲ್ಲವೂ ಇದೆ. ಇದು ಎಲ್ಲ ವರ್ಗದ ಓದುಗರ ಮನ ಸೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಹ.ಆ.ಪಾಟೀಲ. ಕೆ.ಮೋಹನ್‌ಕುಮಾರ್, ತ.ಮ.ನರಸಿಂಹ, ಎಂ.ಎಂ.ಪರಮೇಶ್, ಮಂಜುನಾಥ ಕಾಮತ್, ಮಂಜುನಾಥ ಭಂಡಾರಿ, ಅಂಬಿಕಾ ಇತರರಿದ್ದರು.