ಶಿವಮೊಗ್ಗ ಬೊಮ್ಮನಕಟ್ಟೆಯ ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದು.
- ಬೊಮ್ಮನಕಟ್ಟೆ ಕೆರೆಗೆ ಕೊಳಚೆ ಸೇರ್ಪಡೆ
- ದುರ್ವಾಸನೆಯಿಂದ ಬಡಾವಣೆ ಜನ ಹೈರಾಣ
- ಅವೈಜ್ಞಾನಿಕ ಅಭಿವೃದ್ಧಿ ಪರಿಣಾಮ ವಿನಾಶದ ಅಂಚಿಗೆ ಕೆರೆ
ಒಂದು ಕಾಲದಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಜೀವನಾಡಿಯಾಗಿದ್ದ ಕೆರೆಗೆ ಇಂದು ಕೊಳಚೆ ನೀರು(Sewage) ಸೇರ್ಪಡೆಯಾಗಿ ಗಬ್ಬೆದ್ದು ನಾರುತ್ತಿದೆ. ನಿತ್ಯವೂ ಕಲುಷಿತ ಮತ್ತು ವಿಷಯುಕ್ತ ನೀರು ಕೆರೆಯ ಒಡಲನ್ನು ಸೇರುತ್ತಿರುವುದು ಜನ-ಜಾನುವಾರುಗಳಿಗೆ ಸಂಕಷ್ಟ ತಂದಿದೆ. ದುರ್ವಾಸನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇದು ನಗರದ ಹೊರವಲಯದಲ್ಲಿ ಇರುವ ಬೊಮ್ಮನಕಟ್ಟೆ ದೊಡ್ಡ ಕೆರೆ(Bommanakatte lake)ಯ ವಾಸ್ತವ ಚಿತ್ರಣ. ನಗರದ ಬಹಳಷ್ಟು ಕೆರೆಗಳು ಈಗಾಗಲೇ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಅಭಿವೃದ್ಧಿ(Unscientific development)ಯ ಪರಿಣಾಮದಿಂದ ವಿನಾಶದ ಅಂಚಿಗೆ ತಲುಪಿವೆ. ಅವುಗಳ ಸಾಲಿನಲ್ಲಿ ಬೊಮ್ಮನಕಟ್ಟೆ ಕೆರೆಯೂ ಸೇರ್ಪಡೆಯಾಗುತ್ತಿದೆ. ಒಂದೆಡೆ ಹೂಳು, ಮತ್ತೊಂದೆಡೆ ಕಲುಷಿತ ನೀರು ಸೇರುತ್ತಿದೆ. ಕೆರೆ ಅವಸನದತ್ತ ಮುಖ ಮಾಡಿದೆ.
ಅಂದಾಜು 26 ಎಕರೆ ವ್ಯಾಪ್ತಿಯ ಕೆರೆಯು ಶಿವಮೊಗ್ಗ ಮಹಾನಗರ ಪಾಲಿಕೆ(Mahanagara palike) ವ್ಯಾಪ್ತಿಯಲ್ಲೇ ಅತಿ ದೊಡ್ಡ ಕೆರೆಯೆಂಬ ಹೆಗ್ಗಳಿಕೆ ಹೊಂದಿದೆ. ಈ ಹಿಂದೆ ಇದೇ ಕೆರೆ ನೀರು ಬಳಸಿ ಬೊಮ್ಮನಕಟ್ಟೆ ಗ್ರಾಮದ ಸುತ್ತಮುತ್ತ ಬೆಳೆಯುತ್ತಿದ್ದ ಸೊಪ್ಪು, ತರಕಾರಿ ನಗರದ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದವು. ಆದರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಂಡ ನಂತರ ಕೆರೆಯ ಚಿತ್ರಣ ಬದಲಾಗಿದೆ. ಕುಡಿಯುವುದಕ್ಕೆ ಬಳಸುತ್ತಿದ್ದ ಕೆರೆಯ ನೀರು ವಿಷಯುಕ್ತವಾಗಿದೆ. ದಿನವಿಡೀ ಬೀರುವ ದುರ್ವಾಸನೆ ಸುತ್ತಮುತ್ತಲಿನ ಬಡಾವಣೆ(Layout)ಗಳ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡಿದೆ.
ಕೊಳಚೆ ನೀರು ಕೆರೆಗೆ: ಬೊಮ್ಮನಕಟ್ಟೆ ಬಡಾವಣೆಯಲ್ಲಿ ಆಶ್ರಯ ಮನೆಗಳನ್ನು ಪಾಲಿಕೆಯಿಂದ ನಿರ್ಮಿಸಲಾಗಿದೆ. ಅಲ್ಲಿ ಸಾವಿರಾರು ಕುಟುಂಬಗಳು ವಾಸವಾಗಿವೆ. ಪಾಲಿಕೆ ವ್ಯಾಪ್ತಿ ಬೆಳೆದಂತೆ ಸುತ್ತಮುತ್ತ ಖಾಸಗಿ ಲೇಔಟ್‌ಗಳು ಕೂಡ ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಆದರೆ ಸಮರ್ಪಕ ಯುಜಿಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರನ್ನು ಕೆರೆಗೆ ಹರಿಸುತ್ತಿರುವುದೇ ದುಸ್ಥಿತಿಗೆ ಕಾರಣ. ಸಾವಿರಾರು ಮನೆಗಳ ಕಲುಷಿತ ಮತ್ತು ವಿಷಯುಕ್ತ ಒಳಚರಂಡಿ ನೀರು ನೇರವಾಗಿ ಕೆರೆ ಒಡಲು ಸೇರುತ್ತಿದೆ. ಸ್ವಚ್ಛವಾಗಿದ್ದ ನೀರು ಇಂದು ಗಬ್ಬುನಾರುತ್ತಿದೆ.
ಜಲಚರಗಳಿಗೂ ಕಂಟಕ: ಕೆರೆ ತುಂಬ ಹೂಳು ತುಂಬಿಕೊಂಡಿದೆ. ಮೀನು ಸೇರಿ ವಿವಿಧ ಜಲಚರ ಜೀವಿಗಳು ಸಾವಿಗೀಡಾಗುತ್ತಿವೆ. ವಾಯುವಿಹಾರಕ್ಕಾಗಿ ಅಭಿವೃದ್ಧಿಪಡಿಸಿದ್ದ ಕೆರೆ ದಂಡೆ ಸುತ್ತ ಗಿಡಗಂಟಿಗಳು ಆವರಿಸಿವೆ. ಸ್ವಾಮಿ ಲೇಔಟ್ ಸೇರಿ ಕೆರೆ ಸುತ್ತಮುತ್ತ ವಾಸಿಸುವ ಬಡಾವಣೆಗಳ ಜನರು ದುರ್ವಾಸನೆ, ಸೊಳ್ಳೆಗಳ ಕಾಟ ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ. ಕೆರೆಗೆ ಕಲುಷಿತ ನೀರು ಹರಿದುಬಾರದಂತೆ ತಡೆಯಲು ಈ ಹಿಂದೆ ನಡೆಸಿದ್ದ ಅಭಿವೃದ್ಧಿ ಕಾಮಗಾರಿಗಳೇ ಅವೈಜ್ಞಾನಿಕ ಹಾಗೂ ಕಳಪೆಯಾದಂತಿವೆ. ಅವುಗಳಿಂದಲೇ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎನ್ನುತ್ತಾರೆ ಬೊಮ್ಮನಕಟ್ಟೆ ನಿವಾಸಿಗಳು.
ಶಾಸಕರೇ ಪರಿಶೀಲಿಸಿದರೂ ಪ್ರಯೋಜನವಿಲ್ಲ
ಸ್ಥಳೀಯ ಜನರ ದೂರಿನ ಮೇರೆಗೆ ಖುದ್ದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರೇ ಬೊಮ್ಮನಕಟ್ಟೆ ಕೆರೆ ಬಳಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ವೇಳೆ ಕೆರೆ ಮಲಿನದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ಮನವರಿಕೆ ಮಾಡಿಕೊಟ್ಟಿದ್ದರು. ಮತ್ತೊಂದೆಡೆ ಆ ಭಾಗದಲ್ಲಿ ದುರ್ವಾಸನೆಯಿಂದ ಶಾಸಕರೇ ಹೌಹಾರಿದ್ದರು. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ದೊಡ್ಡಕೆರೆಗೆ ಕಾಯಕಲ್ಪಕ್ಕೆ ಸೂಚಿಸಿದ್ದರು. ಶಾಸಕರು ಬಂದು ನಾಲ್ಕೈದು ತಿಂಗಳು ಕಳೆದರೂ ಅಲ್ಲಿನ ಚಿತ್ರಣ ಮಾತ್ರ ಕಿಂಚಿತ್ತೂ ಬದಲಾಗಿಲ್ಲ.
ಬೊಮನಕಟ್ಟೆ ಮುಖ್ಯ ರಸ್ತೆಯಲ್ಲಿರುವ ಕೆರೆ ಆಶ್ರಯ ಬಡಾವಣೆಯ ಡ್ರೈನೇಜ್ ನೀರಿನಿಂದ ಕಲುಷಿತಗೊಂಡಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು, ಶಾಸಕರ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ. ಬೆಳಗ್ಗೆಯಿಂದಲೇ ದುರ್ವಾಸನೆ ಶುರುವಾಗುತ್ತದೆ. ಇಡೀ ವಾತಾವರಣ ಕಲುಷಿತಗೊಂಡಿದೆ. ಮನೆಗಳಲ್ಲಿ ಇರುವುದಕ್ಕೂ ಸಾಧ್ಯವಾಗುತ್ತಿಲ್ಲ.
ಬೊಮ್ಮನಕಟ್ಟೆ ಕೆರೆ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಎನ್‌ಜಿಟಿ ಅಡಿ ಕಾಮಗಾರಿ ತೆಗೆದುಕೊಂಡಿದ್ದೇವೆ. ಕೆಯುಡಬ್ಲುೃಎಸ್‌ಡಿಬಿ(ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ), ಮಹಾನಗರ ಪಾಲಿಕೆ ಸಮನ್ವಯದೊಂದಿಗೆ ಕಾಮಗಾರಿ ಆರಂಭಿಸಲಾಗುತ್ತಿದೆ. ಈಗಾಗಲೆ ಕ್ರಿಯಾಯೋಜನೆ ಕೂಡಾ ಆಗಿದೆ. ಯುಜಿಡಿ ನೀರು ನಿಲ್ಲಿಸಿ ಹಂತ ಹಂತವಾಗಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು.