ಶಿಕಾರಿಪುರದಲ್ಲಿ ಆಯೋಜಿಸಿದ್ದ ತ್ಯಾಜ್ಯ ನಿರ್ವಹಣೆ ಕಾರ್ಯಾಗಾರವನ್ನು ಪುರಸಭೆ ಮುಖ್ಯಾಧಿಕಾರಿ ಭರತ್ ಉದ್ಘಾಟಿಸಿದರು. ಸಂಪತ್, ಮಂಜುನಾಥ್, ರಾಜಕುಮಾರ್ ಇತರರಿದ್ದರು.
ಶಿಕಾರಿಪುರ: ಸಾರ್ವಜನಿಕರು ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲೇ ಹಸಿ ಕಸ, ಒಣ ಕಸ, ಸ್ಯಾನಿಟರಿ ಮತ್ತು ವಿಶೇಷ ಕಾಳಜಿ ತ್ಯಾಜ್ಯವಾಗಿ ವಿಂಗಡಿಸಿ ನೀಡುವುದು ಕಡ್ಡಾಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಭರತ್ ಹೇಳಿದರು.
ಶಿಕಾರಿಪುರ ಪುರಸಭೆಯಿಂದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು ಕುರಿತು ಸ್ವಚ್ಛತಾ ಕಾರ್ಮಿಕರು ಮತ್ತು ಅಧಿಕಾರಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ತ್ಯಾಜ್ಯ ನಿರ್ವಹಣೆಯಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಹಸಿರು ಡಸ್ಟ್‌ಬಿನ್‌ನಲ್ಲಿ ಅಡುಗೆಮನೆ ತ್ಯಾಜ್ಯ, ಆಹಾರ ಪದಾರ್ಥ, ಹಣ್ಣು ತರಕಾರಿ ಸಿಪ್ಪೆ, ಹೂವು, ಎಲೆ ಮತ್ತಿತರ ವಸ್ತುಗಳನ್ನುಹಾಕಬೇಕು. ನೀಲಿ ಬಿನ್‌ನಲ್ಲಿ ಪ್ಲಾಸ್ಟಿಕ್, ಕಾಗದ, ರಟ್ಟು, ಗಾಜು, ಲೋಹ ಹಾಗೂ ಇತರ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಹಾಕಬೇಕು. ಕೆಂಪು ಬಿನ್‌ನಲ್ಲಿ ಡೈಪರ್, ಸ್ಯಾನಿಟರಿ ಪ್ಯಾಡ್, ಟಿಶ್ಯೂ ಪೇಪರ್ ಮತ್ತಿತರ ವಸ್ತುಗಳನ್ನು ಹಾಕಬೇಕು. ಕಪ್ಪು ಬಿನ್‌ನಲ್ಲಿ ಬ್ಯಾಟರಿ, ಬಲ್ಬ್, ಇ-ತ್ಯಾಜ್ಯ, ಔಷಧ ತ್ಯಾಜ್ಯ, ಪೇಂಟ್ ಡಬ್ಬಿ ಮತ್ತಿತರ ವಸ್ತುಗಳನ್ನು ಹಾಕಬೇಕು. ಪ್ರತ್ಯೇಕವಾಗಿ ವಿಂಗಡಿಸಿ ಪುರಸಭೆ ವಾಹನಗಳಿಗೆ ನೀಡಬೇಕು ಎಂದರು.
ಬೆಂಗಳೂರಿನ ಸಂಪತ್ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಮಂಜುನಾಥ್ ಅವರು ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026ರ ಯೋಜನೆ ಉದ್ದೇಶಗಳು, ಮನೆಮನೆ ತ್ಯಾಜ್ಯ ಸಂಗ್ರಹಣೆ, ಕಸದ ವಿಂಗಡಣೆ, ಮರುಬಳಕೆ ಹಾಗೂ ನಗರ ಸ್ವಚ್ಛತೆಯಲ್ಲಿ ಸಮುದಾಯದ ಸಹಭಾಗಿತ್ವದ ಮಹತ್ವ ವಿವರಿಸಿದರು.
ಪುರಸಭೆ ಕಚೇರಿ ವ್ಯವಸ್ಥಾಪಕ ರಾಜಕುಮಾರ್, ಸಮುದಾಯ ಸಂಘಟನಾಧಿಕಾರಿ ಸುರೇಶ್, ಹಿರಿಯ ಆರೋಗ್ಯ ನಿರೀಕ್ಷಕ ಸೈಯದ್ ನವಾಜ್, ಸಿಬ್ಬಂದಿ, ವಾಹನ ಚಾಲಕರು, ಪೌರಕಾರ್ಮಿಕರು ಉಪಸ್ಥಿತರಿದ್ದರು.