ಶಿಕಾರಿಪುರದಲ್ಲಿ ಮತದಾರ ದಿನಾಚರಣೆ ಕಾರ್ಯಕ್ರಮವನ್ನು ದೇವಕುಮಾರ್ ಉದ್ಘಾಟಿಸಿದರು. ಸುಧೀರ್, ಡಾ. ವಸಂತ್ ನಾಯ್ಕ, ಡಾ. ಎಂ.ವೀರೇಂದ್ರ, ಯೋಗೇಶ್, ಪರ್ವೀಜ್ ಅಹ್ಮದ್ ಇತರರಿದ್ದರು.
ಶಿಕಾರಿಪುರ: ಮತದಾನ ನಮ್ಮ ಹಕ್ಕು. ಸದೃಢ ಭಾರತ ನಿರ್ಮಿಸುವ ಶಕ್ತಿ ಮತದಾನಕ್ಕಿದೆ ಎಂದು ಹಿತ್ತಲ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ದೇವಕುಮಾರ ಹೇಳಿದರು.
ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯಲ್ಲಿ ಎಲ್ಲ ಮತದಾರರು ಪಾಲ್ಗೊಳ್ಳಬೇಕು. ಉತ್ತಮ ನಾಯಕರನ್ನು ಚುನಾಯಿಸಬೇಕು. ಸಂವಿಧಾನದ ಮೌಲ್ಯಗಳ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು.
ತಾಲೂಕು ನೋಡಲ್ ಅಧಿಕಾರಿ ಡಾ. ವಸಂತ್ ನಾಯ್ಕ ಮಾತನಾಡಿ, ಭಾರತ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶ. ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ. ಎಲ್ಲ ದಾನಗಳಿಗಿಂತ ಮತದಾನ ಶ್ರೇಷ್ಠ ದಾನ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಚುನಾವಣಾ ಶಾಖೆ ಶಿರಸ್ತೇದಾರ್ ಎಚ್.ಎಸ್.ಸುಧೀರ್ ಮಾತನಾಡಿ, ಮತದಾರರು ಹೆಸರು ನೋಂದಾಯಿಸಲು ಚುನಾವಣಾ ಆಯೋಗ ನಾಲ್ಕು ಹಂತಗಳಲ್ಲಿ ಅವಕಾಶ ನೀಡುತ್ತದೆ. ಹೆಸರು, ತಿದ್ದುಪಡಿ, ವರ್ಗಾವಣೆ ಕುರಿತು ನಮೂನೆ ಆರು, ಏಳು, ಎಂಟು, ಸಿ ಮತ್ತು ಎಸ್‌ನಲ್ಲಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಕನ್ನಡ ಪ್ರಬಂಧ ಸ್ಪರ್ಧೆಗೆ ತೀರ್ಪುಗಾರರಾಗಿ ಯೋಗೇಶ್, ರೇಣುಕಾ ಹಾಜರಿದ್ದರು. ಪ್ರಾಚಾರ್ಯ ಡಾ. ಎಂ.ವೀರೇಂದ್ರ, ಬಸವರಾಜ್, ಪರ್ವೀಜ್ ಅಹ್ಮದ್, ಚಂದ್ರಶೇಖರ್, ಶಿವರಾಜ್, ಯೋಗರಾಜ್, ಸಂಜೀವ್ ಇದ್ದರು.