ಸಾಗರದ ನಗರಸಭೆ ಕಚೇರಿಯಲ್ಲಿ ನಡೆದ ಮತದಾರರ ಮ್ಯಾಪಿಂಗ್ ಕಾರ್ಯ ಕುರಿತ ಸಭೆಯಲ್ಲಿ ಎಸಿ ವೀರೇಶ್‌ಕುಮಾರ್ ಮಾತನಾಡಿದರು. ಎಚ್.ಕೆ.ನಾಗಪ್ಪ ಇದ್ದರು. 
ಶಿವಮೊಗ್ಗ

ಮತದಾರರ ಮ್ಯಾಪಿಂಗ್ ಕಾರ್ಯ ಬಿಗಿಯಾಗಲಿ | BLO meeting

ಸಾಗರ: ಸಾಗರದಲ್ಲಿ ಒಟ್ಟು  6 ಸಾವಿರ ಅನರ್ಹ ಮತದಾರರನ್ನು ಗುರುತಿಸಲಾಗಿದೆ. ಈ ಪೈಕಿ ಬೇರೆಬೇರೆ ಕಡೆ ಮತದಾನ ಹಕ್ಕು ಹೊಂದಿದವರು, ಬೇರೆ ರಾಜ್ಯ ಮತ್ತು ದೇಶಕ್ಕೆ ಹೋದವರು, ವಿಳಾಸವಿದ್ದರೂ ಅಲ್ಲಿ ವಾಸ ಇಲ್ಲದವರೂ ಸೇರಿದ್ದು, ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಹೇಳಿದರು
ಸಾಗರ ನಗರಸಭೆ ಕಚೇರಿಯಲ್ಲಿ ಮ್ಯಾಪಿಂಗ್ ಕಾರ್ಯ ಕುರಿತು ಬಿಎಲ್‌ಒಗಳು ಗಳು ಮತ್ತು ನಗರಸಭೆ ಮಾಜಿ ಅಧ್ಯಕ್ಷರು, ಸದಸ್ಯರ ಜತೆ ಸಭೆ ನಡೆಸಿದ ಅವರು, ತಾಲೂಕಿನಲ್ಲಿ ಇನ್ನೂ 41 ಸಾವಿರ ಮತದಾರರ ಮ್ಯಾಪಿಂಗ್ ನಡೆಯಬೇಕಿದೆ ಎಂದು ಹೇಳಿದರು.
ಮ್ಯಾಪಿಂಗ್ ಕಾರ್ಯ ನಗರಸಭೆ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ನಡೆದಿಲ್ಲ. ಚುನಾಯಿತ ಪ್ರತಿನಿಧಿಗಳು, ಬಿಎಲ್‌ಒಗಳು ಸ್ಥಳಕ್ಕೆ ಹೋದಾಗ ಮ್ಯಾಪಿಂಗ್ ಕಾರ್ಯಕ್ಕೆ ಮತದಾರರು ಸಿಗುತ್ತಿಲ್ಲ ಎನ್ನುವ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ಮ್ಯಾಪಿಂಗ್‌ನಿಂದ ಹೊರಗೆ ಉಳಿದವರನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ಅಚ್ಚುಕಟ್ಟಾಗಿ ನಡೆಸಬೇಕು. ನಕಲಿ ಮತದಾರರು ಇರಬಾರದು. ಎರಡೆರಡು ಮತ ಹೊಂದಿದವರು, ಮತದಾರರು ಬೇರೆ ಕಡೆ ಇದ್ದರೆ ಅವರ ಹೆಸರು ನಮ್ಮಲ್ಲಿ ಇರಬಾರದು. ಪಟ್ಟಿ ಪರಿಷ್ಕರಣೆ ನಂತರ ಮುಂದಿನ ಚುನಾವಣೆಯಲ್ಲಿ ಶೇ.100 ಮತದಾನ ಆಗಬೇಕು ಎನ್ನುವ ಉದ್ದೇಶ ತಾಲೂಕು ಆಡಳಿತದ್ದು ಎಂದು ತಿಳಿಸಿದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ, ಬಾಲಚಂದ್ರ, ಮದನ್, ನಗರಸಭೆ ಮಾಜಿ ಅಧ್ಯಕ್ಷರಾದ ಮೈತ್ರಿ ಪಾಟೀಲ್, ಮಧುರಾ ಶಿವಾನಂದ್, ಮಾಜಿ ಸದಸ್ಯರಾದ ಮಧುಮಾಲತಿ, ಗಣೇಶಪ್ರಸಾದ್, ಬಿ.ಎಚ್.ಲಿಂಗರಾಜ್, ಪ್ರೇಮಾ ಸಿಂಗ್, ಸೈಯದ್ ಜಾಕೀರ್, ಉಮೇಶ್ ಇತರರಿದ್ದರು.