ತಹಸೀಲ್ದಾರ್​ ಕೆ.ಪರುಸಪ್ಪ 
ಶಿವಮೊಗ್ಗ

ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

ಭದ್ರಾವತಿ: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ ಆರಂಭವಾಗಲಿದೆ. ಮತದಾರರ ಪಟ್ಟಿಯ ಮ್ಯಾಪಿಂಗ್​ ಹಾಗೂ ಸೇರ್ಪಡೆ ಕಾರ್ಯಕ್ಕೆ ಭದ್ರಾವತಿ ವಿಧಾನಸಭಾ ೇತ್ರದ ಎಲ್ಲ ಮತದಾರರು ಸಹಕರಿಸಬೇಕೆಂದು ತಹಸೀಲ್ದಾರ್​ ಕೆ.ಪರುಸಪ್ಪ ಮನವಿ ಮಾಡಿದರು.
ೇತ್ರದಲ್ಲಿ 2002ರ ಮತಪಟ್ಟಿಯಲ್ಲಿರುವ ಮತದಾರರ ಹೆಸರು ಹಾಗೂ 2025ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಮ್ಯಾಪಿಂಗ್​ ಮಾಡಲಾಗುವುದು. ಎರಡೂ ವರ್ಷಗಳ ಮತಪಟ್ಟಿಯಲ್ಲಿ ಹೆಸರುಗಳಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ವೇಳೆ 2002ರ ಪಟ್ಟಿಯಲ್ಲಿದ್ದು, 2025ರಲ್ಲಿ ಇರದಿದ್ದರೆ ತಾವು ಮತದಾನ ಮಾಡುವ ಸ್ಥಳಿಯ ಮತಗಟ್ಟೆಯ ಕೇಂದ್ರಕ್ಕೆ ತೆರಳಬೇಕು. ಅಲ್ಲಿನ ಬಿಎಲ್​ಒಗಳನ್ನು ಕಂಡು ಈ ಹಿಂದೆ ಮತದಾನ ಮಾಡಿದ ಮತಗಟ್ಟೆಯ ಹೆಸರು, ಕ್ರಮ ಸಂಖ್ಯೆಗಳನ್ನು ತಿಳಿಸುವ ಮೂಲಕ ಮ್ಯಾಪಿಂಗ್​ಗಾಗಿ ಸಹಕರಿಸಬೇಕೆಂದು ಸುದ್ದಿಗೋಷ್ಠಿ ತಿಳಿಸಿದರು.
ಒಂದು ವೇಳೆ ನಿಮ್ಮ ಹೆಸರು ಯಾವ ಪಟ್ಟಿಯಲ್ಲೂ ಇರದಿದ್ದರೆ ನೀವು ನಿಮ್ಮ ಸಂತತಿಯ ವಿವರಗಳನ್ನು (ಪ್ರೋಜಿನಿ) ಸೂಕ್ತ ದಾಖಲೆಗಳ ಮೂಲಕ ನೀಡಿದರೆ ಮತದಾನದ ಹಕ್ಕು ದೊರೆಯಲಿದೆ. ಇಲ್ಲದಿದ್ದರೆ ಮತದಾನ ಹಕ್ಕುಗಳಿಂದ ವಂಚಿತರಾಗುತ್ತೀರಿ ಎಂದರು.
ವಿಐಎಸ್​ಎಲ್​ ಹಾಗೂ ಎಂಪಿಎಂ ಕಾರ್ಖಾನೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಮಸ್ಯೆ ಹೆಚ್ಚಾಗಿದೆ. 2002ರ ಪಟ್ಟಿಯಲ್ಲಿರುವ ಸಾಕಷ್ಟು ಮತದಾರರು 2025ರಲ್ಲಿ ಕಂಡುಬರುತ್ತಿಲ್ಲ. ಅಲ್ಲದೆ ಅವರ ಮನೆಗಳಿಗೆ ತೆರಳಿದ ಬಿಎಲ್​ಒಗಳಿಗೆ ಅವರು ವಾಸಿಸುತ್ತಿರುವುದು ಕಂಡುಬರುತ್ತಿಲ್ಲ. ಕೆಲವರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಮತ್ತೆ ಕೆಲವರು ಬೇರೆಡೆಗೆ ತೆರಳಿದ್ದಾರೆ. ಮ್ಯಾಪಿಂಗ್​ ಮಾಡಲು ಕಷ್ಟವಾಗಿದೆ. ಅಲ್ಲಿನ ನಿವಾಸಿಗಳು ಸ್ಥಳಿಯ ಮತಗಟ್ಟೆಗಳಿಗೆ ತೆರಳಿ ಮತದಾನದ ಪಟ್ಟಿಯಲ್ಲಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 253 ಮತಗಟ್ಟೆಗಳಿದ್ದು 2,19,893 ಮತದಾರರಿದ್ದಾರೆ. ಈಗಾಗಲೇ ಶೇ.65ರಷ್ಟು ಮತದಾರರ ಪಟ್ಟಿ ಪರಿಷ್ಕರಣೆ ಯಶಸ್ವಿಯಾಗಿದೆ. ಶೇ.35ರಷ್ಟು ಬಾಕಿ ಉಳಿದಿದೆ ಎಂದರು.
ಪೋಡಿಮುಕ್ತ ಅಭಿಯಾನ ಯಶಸ್ವಿ
ರಾಜ್ಯ ಸರ್ಕಾರದ ಪೋಡಿಮುಕ್ತ ಅಭಿಯಾನದಲ್ಲಿ ಭದ್ರಾವತಿ ತಾಲೂಕು ಶೇ.100ರಷ್ಟು ಸಾಧನೆ ಮಾಡಿದೆ. ನಮಗಿದ್ದ 500 ಪ್ರಕರಣಗಳನ್ನೂ ಸರಿಪಡಿಸಿ ಎಡಿಎಲ್​ಆರ್​ ಲಾಗಿನ್​ಗೆ ಪೋಡಿ ಮಾಡಲು ಮಂಜೂರು ಮಾಡಲಾಗಿದೆ. ಇ&ಪೌತಿ ಆಂದೋಲನ ಹೊಸದಾಗಿ ಜಾರಿಯಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ರೈತರ ಮನೆಬಾಗಿಲಿಗೆ ಬರುವ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ಇಕೆವೈಸಿ ಮಾಡಿಸಿಕೊಳ್ಳಬೇಕು. ಜಮೀನಿನ ಅಗತ್ಯ ದಾಖಲೆಗಳನ್ನು ಮನೆಯಲ್ಲೇ ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಸಿಟಿಜನ್​ ಪೋರ್ಟಲ್​ ಜಾರಿಗೆ ಬರಲಿದೆ. ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಹಸೀಲ್ದಾರ್​ ಕೆ.ಪರುಸಪ್ಪ ವಿವರಿಸಿದರು.