ಭದ್ರಾವತಿ ನಗರಸಭೆ ಕಚೇರಿ ಸಭಾಂಗಣದಲ್ಲಿ ಕೌನ್ಸಿಲ್ ಸಾಮಾನ್ಯ ಸಭೆ ನಡೆಯಿತು. ಗೀತಾ ರಾಜ್‌ಕುಮಾರ್, ಕೆ.ಎನ್.ಹೇಮಂತ್, ಬಷೀರ್ ಅಹಮದ್, ಪ್ರಕಾಶ್ ರಾಥೋಡ್, ಕೆ.ಪಿ.ಪ್ರೇಮಾ ಇದ್ದರು.
ಭದ್ರಾವತಿ: ಪರಿಷ್ಕೃತ ನೀರಿನ ಶುಲ್ಕವನ್ನು 180 ರೂ.ಗೆ ಬದಲಾಗಿ 160 ರೂ.ಗೆ ಸೀಮಿತಗೊಳಿಸುವಂತೆ ನಗರಸಭೆ ಸದಸ್ಯರು ಶನಿವಾರ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿದರು.
2025-26ನೇ ಸಾಲಿನಲ್ಲಿ ಗೃಹಬಳಕೆ ನೀರಿನ ಶುಲ್ಕ ತಿಂಗಳಿಗೆ 120 ರೂ.ಗಳಿದ್ದು ಪ್ರಸ್ತುತ 2026-27ನೇ ಸಾಲಿನಲ್ಲಿ 180 ರೂ.ಗೆ ಏರಿಕೆ ಮಾಡಲಾಗಿದೆ. ಶುಲ್ಕ ಹೆಚ್ಚು ಮಾಡುವಾಗ ಸದಸ್ಯರ ಗಮನಕ್ಕೆ ತರದೆ ಹೆಚ್ಚು ಮಾಡಲಾಗಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗಲಿದ್ದು 20 ರೂ.ಗಳನ್ನು ಕಡಿಮೆ ಮಾಡುವ ಮೂಲಕ ನಾಳೆಯಿಂದಲೆ ಜಾರಿಗೊಳಿಸಿ 160 ರೂ.ಗಳಂತೆ ಕಟ್ಟಿಸಿಕೊಳ್ಳಬೇಕು ಎಂದು ಸದಸ್ಯ ಬಿ.ಕೆ.ಮೋಹನ್, ಚನ್ನಪ್ಪ, ಬಿ.ಟಿ.ನಾಗರಾಜ್ ಸೇರಿದಂತೆ ಸದಸ್ಯರೆಲ್ಲರೂ ಅಧ್ಯಕ್ಷರು ಹಾಗೂ ಪೌರಾಯುಕ್ತರನ್ನು ಒತ್ತಾಯಿಸಿದರು.
ಸದಸ್ಯರ ಕೋರಿಕೆಗೆ ಒಪ್ಪಿದ ಆಯುಕ್ತರು ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಗೀತಾ ರಾಕುಮಾರ್ ಇದುವರೆಗೂ ಹೆಚ್ಚುವರಿಯಾಗಿ ಕಟ್ಟಿರುವವರ 20 ರೂ. ಹಣವನ್ನು ಮುಂದಿನ ವರ್ಷಕ್ಕೆ ಸರಿದೂಗಿಸಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಘೋಷಿಸಿದರು.
1 ಕೋಟಿ ರೂ.ಗೂ ಅಧಿಕ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಖರ್ಚು ಮಾಡಲು ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದು ಹಣ ಮಂಜೂರೂ ಮಾಡಿದ್ದೀರಾ. ಸರ್ಕಾರದ ಆದೇಶದ ಮೇರೆಗೆ ಎಸ್‌ಸಿ, ಎಸ್‌ಟಿ ಮೀಸಲು ಸ್ಥಾನದಲ್ಲಿ 5 ಜನ ನಗರಸಭೆ ಸದಸ್ಯರುಗಳಿದ್ದೇವೆ. ಅವರನ್ನು ಕರೆದು ಚರ್ಚಿಸದೆ ಹೇಗೆ ಮಂಜೂರು ಮಾಡಿದ್ದೀರಾ. ಪೌರಾಯುಕ್ತರ ಒಮ್ಮತದ ತೀರ್ಮಾನ ಸರಿಯಲ್ಲ ಎಂದು ಸದಸ್ಯ ಬಿ.ಟಿ.ನಾಗರಾಜ್ ಪೌರಾಯುಕ್ತರನ್ನು ಪ್ರಶ್ನಿಸಿದರು.
ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವವರಿಗೆ ಕೇಸು ಹಾಕಿ ದಂಡ ವಸೂಲಿ ಮಾಡುತ್ತಿದ್ದಾರೆ. ಆದರೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವ ರೆಸ್ಟೋರೆಂಟ್, ಡಾಬಾಗಳು, ಹೋಟೆಲ್‌ಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಅನಧಿಕೃತ ಮದ್ಯ ಮಾರಾಟ ತಡೆದರೆ ರಸ್ತೆ ಅಪಘಾತ ಕಡಿಮೆಯಾಗುತ್ತದೆ. ಮಾರಾಟ ಮಾಡುವ ಮಾಲೀಕರ ವಿರುದ್ಧ ಕ್ರಮ ಜರುಗಿಸುವುದು ಸೂಕ್ತ ಎಂದು ಸದಸ್ಯ ಚನ್ನಪ್ಪ ಹೇಳಿದರು.
ಅದಕ್ಕೆ ಉತ್ತರಿಸಿದ ಡಿವೈಎಸ್‌ಪಿ ಪ್ರಕಾಶ್ ರಾಥೋಡ್, ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಇಂದಿನಿಂದಲೇ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಈಗಲೆ ಮಾಲೀಕರ ಸಭೆ ಕರೆದು ತಿಳಿವಳಿಕೆ ನೀಡಲಾಗುವುದು. ಸದಸ್ಯರ ಸಲಹೆಯನ್ನು ಒಪ್ಪಿಕೊಳ್ಳುತ್ತೇನೆ ಎಂದರು.
ಕಸ ಸಂಗ್ರಹಣೆ ಹಾಗೂ ವಿಲೇವಾರಿ ಟೆಂಡರ್ ವಿಚಾರ ಸಂಬಂಧಿಸಿದಂತೆ ಚರ್ಚೆ ನಡೆದು, ಪ್ರತಿದಿನ 40 ರಿಂದ 50 ಜನ ಲೋಡರ್ಸ್ ಹಾಗೂ ಕ್ಲೀನರ್ಸ್ ಗಳು ಕೆಲಸಕ್ಕೆ ಬರುವುದಿಲ್ಲ. ಹಾಜರಾತಿ ಪಡೆದು ಸುಮ್ಮನೆ ಸಂಬಳ ಪಡೆಯುತ್ತಿದ್ದಾರೆ. ಟೆಂಡರ್‌ದಾರನ ಸಂಬಂಧಿಗಳನ್ನೇ ಕೆಲಸಕ್ಕೆ ತೆಗೆದುಕೊಂಡಿರುವುದು ಇದಕ್ಕೆಲ್ಲಾ ಕಾರಣವಾಗಿದೆ. ಪ್ರತಿವಾರ್ಡ್‌ನಲ್ಲಿ ಒಬ್ಬರು, ಇಲ್ಲಾ ಇಬ್ಬರು ಕ್ಲೀನರ್ ಬಿಟ್ಟರೆ ಯಾರೂ ಬರುವುದಿಲ್ಲ. ಇವರ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಎಂದು ಸದಸ್ಯರಾದ ಉದಯಕುಮಾರ್, ಎಂ.ಮಂಜುನಾಥ್, ಸೇರಿದಂತೆ ಹಲವರು ಒತ್ತಾಯಿಸಿದರು.
ಪೌರಾಯುಕ್ತ ಕೆ.ಎನ್.ಹೇಮಂತ್ ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಪಿ.ಪ್ರೇಮಾ ಇದ್ದರು.