ಶಿವಮೊಗ್ಗದ ಎಂಆರ್‌ಎಸ್ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಗಮನಕ್ಕೆ ಅಳವಡಿಸಿರುವ ಸೂಚನಾ ಫಲಕ.
ಅರವಿಂದ ಅಕ್ಲಾಪುರ ಶಿವಮೊಗ್ಗ
ಕೆಎಸ್‌ಆರ್‌ಟಿಸಿ (ksrtc) ಯಲ್ಲಿ ಮೇಲಧಿಕಾರಿಗಳು ಮಾಡುವ ಆದೇಶ (order) ಗಳನ್ನೇ ಕೆಳಹಂತದಲ್ಲಿರುವವರು ಉಲ್ಲಂಘಿಸುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಳ್ಳುವ ತೀರ್ಮಾನಕ್ಕೆ ಸಿಬ್ಬಂದಿಯಿಂದ ಬೆಂಬಲ ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರು (publics) ತೊಂದರೆ ಅನುಭವಿಸುವಂತಾಗಿದೆ.
ರಾತ್ರಿ ವೇಳೆ ಶಿವಮೊಗ್ಗಕ್ಕೆ ಭದ್ರಾವತಿ ಮಾರ್ಗದಿಂದ ಬರುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳು ಶಿವಮೊಗ್ಗ ಬೈಪಾಸ್ ಬದಲು ಸಹ್ಯಾದ್ರಿ ಕಾಲೇಜು-ಹೊಳೆ ಬಸ್‌ಸ್ಟಾಪ್ ಮೂಲಕ ಮುಖ್ಯ ರಸ್ತೆಯಲ್ಲೇ ಶಿವಮೊಗ್ಗ ಬಸ್ ನಿಲ್ದಾಣ (bus stand) ತಲುಪಬೇಕೆಂದು 2025ರ ಮಾ.24ರಂದೇ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶಿಸಿದ್ದಾರೆ.
ರಾತ್ರಿ 11ರಿಂದ ಬೆಳಗ್ಗೆ 9ರವರೆಗೆ ಬೈಪಾಸ್ ಬದಲು ಶಿವಮೊಗ್ಗ ನಗರದೊಳಗಿನಿಂದಲೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಆದೇಶ (order) ವನ್ನು ಪಾಲಿಸದ ಚಾಲಕರಿಗೆ ಅಪರಾಧ ಜ್ಞಾಪನಾ ಪತ್ರ ನಿಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ. ಎಂಆರ್‌ಎಸ್ ವೃತ್ತದಲ್ಲಿ ದೊಡ್ಡ ಫಲಕವೊಂದನ್ನು ಅಳವಡಿಸಲಾಗಿದೆ. ಈ ಫಲಕದಲ್ಲಿ ರಾತ್ರಿ 10.30 ರಿಂದ ಬೆಳಗ್ಗೆ 5.30ರವರೆಗೆ ಶಿವಮೊಗ್ಗ ನಿಲ್ದಾಣಕ್ಕೆ ತೆರಳುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳು ಬೈಪಾಸ್ ಬದಲು ನಗರದೊಳಗಿಂದಲೇ ಸಂಚರಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಆದೇಶ ಹಾಗೂ ಎಂಆರ್‌ಎಸ್‌ನಲ್ಲಿ ಅಳವಡಿಸಿರುವ ಬೋರ್ಡ್‌ನಲ್ಲಿ ವ್ಯತ್ಯಾಸಗಳಿದ್ದರೂ ಇವೆರಡನ್ನೂ ಎಲ್ಲ ಚಾಲಕರು ಪಾಲನೆ ಮಾಡುತ್ತಿಲ್ಲ. ರಾತ್ರಿ ವೇಳೆ ದೂರದ ಊರುಗಳಿಂದ ಬರುವ ವೃದ್ಧರು, ಮಹಿಳೆಯರು ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಪ್ರಶ್ನಿಸಿದ ಪ್ರಯಾಣಿಕರೊಂದಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ, ಮನಬಂದಂತೆ ನಿಂದಿಸಿದ ನಿದರ್ಶನಗಳೂ ಇವೆ. ಆದರೆ ಅಂತಹ ಚಾಲಕರು, ನಿರ್ವಾಹಕರ ಬಗ್ಗೆ ದೂರು ನೀಡಿದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡ ಉದಾಹರಣೆಗಳಿಲ್ಲ.
ಪ್ರಶ್ನಿಸಿದ್ದಕ್ಕೆ ಮಾನಸಿಕ ಕಿರುಕುಳ
ನನ್ನ ಪತ್ನಿ 2025ರ ನ. 17ರಂದು ಮೈಸೂರಿನಿಂದ ಶಿವಮೊಗ್ಗ ಮೂಲಕ ಹುಬ್ಬಳಿಗೆ ತೆರಳುವ ಬಸ್‌ನಲ್ಲಿ (ಕೆಎ-09-ಎಫ್-5585) ಪ್ರಯಾಣಿಸಿದ್ದರು. ಅದಾಗಲೇ ರಾತ್ರಿಯಾದ ಕಾರಣ ಆದೇಶದ ಪ್ರಕಾರ ಬಸ್ ಬೈಪಾಸ್ ಬದಲು ನಗರದೊಳಕ್ಕೆ ಸಂಚರಿಸಬೇಕಲ್ಲವೇ ಎಂದು ನಿರ್ವಾಹಕ ಹಾಗೂ ಚಾಲಕರನ್ನು ಪ್ರಶ್ನಿಸಿದರು. ಆದರೆ ಅವರಿಂದ ಉಡಾಫೆ ಉತ್ತರ ಬಂದಿತ್ತು. ಶಿವಮೊಗ್ಗ ಬಸ್ ನಿಲ್ದಾಣದಲ್ಲೂ ಚಾಲಕ ಹಾಗೂ ನಿರ್ವಾಹಕ ಅತ್ಯಂತ ಕೆಟ್ಟ ಶಬ್ದಗಳಿಂದ ನನ್ನ ಪತ್ನಿಯನ್ನು ನಿಂದಿಸಿದ್ದಾರೆ. ಕೊನೆಗೆ ಶಿವಮೊಗ್ಗ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಸೂಚನೆ ಮೇರೆಗೆ ನನ್ನ ಪತ್ನಿಯನ್ನು ಹೊಳೆ ಬಸ್ ನಿಲ್ದಾಣದಲ್ಲಿ ಇಳಿಸಿ ಆ ಬಸ್ ಹುಬ್ಬಳ್ಳಿಗೆ ತೆರಳಿತು. ಈ ಬಗ್ಗೆ ನಾನು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ದೂರು ನೀಡಿದರೂ ಅವರು ಸ್ಪಂದಿಸುತ್ತಿಲ್ಲ. ಬದಲಿಗೆ ಕೆಲ ಸಿಬ್ಬಂದಿ ಕರೆ ಮಾಡಿ ಬೇಡದ ಪ್ರಶ್ನೆಗಳನ್ನು ಕೇಳಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶಿವಮೊಗ್ಗ ಕೋಟೆ ರಸ್ತೆ ನಿವಾಸಿ, ನಿವೃತ್ತ ಬ್ಯಾಂಕ್ ನೌಕರ ಎ.ಎನ್.ದಯಾನಂದ್ ಎಂಬುವರು ಕೆಎಸ್‌ಆರ್‌ಟಿಸಿ ಅಸಮರ್ಪಕ ಸೇವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದೊಳಕ್ಕೆ ಬಂದರೆ ಅನುಕೂಲಗಳೇನು?
ಶಿವಮೊಗ್ಗ ನಗರದೊಳಗೆ ಬೆಳಗ್ಗೆಯಿಂದ ರಾತ್ರಿವರೆಗೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖ್ಯ ರಸ್ತೆ ಬದಲು ಬೈಪಾಸ್‌ನಲ್ಲಿ ತೆರಳಲಿ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ ರಾತ್ರಿ 10.30ರ ಬಳಿಕ ನಗರದೊಳಗೆ ಅಷ್ಟೊಂದು ವಾಹನ ದಟ್ಟಣೆ ಇರುವುದಿಲ್ಲ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಸಮಸ್ಯೆಯಾಗುವುದಿಲ್ಲ. ನಗರದೊಳಗೆ ಈ ಬಸ್‌ಗಳು ಬರುವುದರಿಂದ ನಾಗರಿಕರಿಗೆ ಪ್ರಯೋಜನವೇ ಹೆಚ್ಚು. ವಿದ್ಯಾನಗರ, ಶಂಕರಮಠ ರಸ್ತೆ, ಕೋಟೆ ರಸ್ತೆ, ಬಿಬಿ ರಸ್ತೆ, ಜಯನಗರ, ಬಸವನಗುಡಿ, ದುರ್ಗಿಗುಡಿ, ಗಾಂಧಿ ಬಜಾರ್, ಬಾಪೂಜಿ ನಗರ ಸೇರಿ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಹೆಚ್ಚು ಹಣ ತೆತ್ತು ಆಟೋದಲ್ಲಿ ಮನೆಗೆ ತೆರಳುವ ಬದಲು ನಗರದ ಮುಖ್ಯ ರಸ್ತೆಯಲ್ಲಿ ಇಳಿದು ಅಲ್ಲಿಂದ ಕಡಿಮೆ ಖರ್ಚಿನಲ್ಲಿ ಮನೆ ತಲುಪಬಹುದು. ಆದರೆ ಕೆಎಸ್‌ಆರ್‌ಟಿಸಿ ಕೆಲ ಚಾಲಕರು ಹಾಗೂ ನಿರ್ವಾಹಕರು ವಿಭಾಗೀಯ ನಿಯಂತ್ರಣಾಧಿಕಾರಿಯ ಆದೇಶವನ್ನೇ ಕಡೆಗಣಿಸುತ್ತಿದ್ದಾರೆ.
ಎಚ್ಚರಿಸಿದರೂ ನಿರ್ಲಕ್ಷೃ
ಬೆಂಗಳೂರು, ಮೈಸೂರು, ಅರಸೀಕೆರೆ, ಚಿಕ್ಕಮಗಳೂರು, ಧರ್ಮಸ್ಥಳ ಮುಂತಾದ ಭಾಗಗಳಿಂದ ಬರುವ ಬಸ್‌ಗಳಿಗೆ ಭದ್ರಾವತಿ ಬಸ್ ನಿಲ್ದಾಣದಲ್ಲೇ ಅಲ್ಲಿನ ವ್ಯವಸ್ಥಾಪಕರು ಎಚ್ಚರಿಕೆ ನೀಡುತ್ತಾರೆ. ಶಿವಮೊಗ್ಗದಲ್ಲಿ ಬೈಪಾಸ್ ಬದಲು ನಗರದೊಳಕ್ಕೆ ಬಸ್ ತೆಗೆದುಕೊಂಡು ಹೋಗುತ್ತಾರೆ. ಆದರೆ ಬಹುತೇಕ ಚಾಲಕರು ಈ ಎಚ್ಚರಿಕೆಯನ್ನೂ ನಿರ್ಲಕ್ಷಿಸುತ್ತಿದ್ದಾರೆ. ಇಂತಹ ಚಾಲಕರ ಮೇಲೆ ಕ್ರಮ ಕೈಗೊಂಡರೆ ಅದು ಉಳಿದವರಿಗೂ ಎಚ್ಚರಿಕೆ ಪಾಠವಾಗಲಿದೆ.
ರಾತ್ರಿ 10.30ರ ಬಳಿಕ ಭದ್ರಾವತಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬೈಪಾಸ್ ಬದಲು ನಗರದೊಳಕ್ಕೆ ಸಂಚರಿಸುವಂತೆ ಭದ್ರಾವತಿಯಲ್ಲೇ ಸೂಚನೆ ನೀಡಲಾಗುತ್ತದೆ. ಇದರ ಮೇಲೆ ನಿಗಾ ವಹಿಸಲು ಸಂಚಾರ ದಳಕ್ಕೂ ಸೂಚಿಸಲಾಗಿದೆ. ಬಸ್‌ಗಳು ರಾತ್ರಿ ವೇಳೆ ಬೈಪಾಸ್ ಮೂಲಕ ಬರುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಿದ್ದೇ ಕೋಟೆ ರಸ್ತೆಯ ದಯಾನಂದ್ ಎಂಬುವರು ನೀಡಿದ ದೂರಿನಿಂದ. ಈಗ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.