ಶಿವಮೊಗ್ಗ: ಅಲ್ಪಸಂಖ್ಯಾತರ ನಿರ್ದೇಶನಾಲಯವು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ನೀಡಲು ಕರೆದಿರುವ ಟೆಂಡರ್ ರದ್ದುಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್ ಆಗ್ರಹಿಸಿದರು.
2026-27ನೇ ಸಾಲಿನಲ್ಲಿ 60 ವಿದ್ಯಾರ್ಥಿಗಳಿಗೆ 60 ದಿನದ ಸೇನಾ ತರಬೇತಿಗೆ ಅಲ್ಪಾವಧಿ ಟೆಂಡರ್ ಕರೆದಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಇದು ಇತರ ಧರ್ಮೀಯರಿಗೆ ಮಾಡುತ್ತಿರುವ ಅವಮಾನ. ಆರ್ಥಿಕ ಹಿಂದುಳಿದಿರುವಿಕೆ ಮಾನದಂಡವಾಗಿಸಿ ಎಲ್ಲ ಸಮುದಾಯಗಳ ಅರ್ಹ ವಿದ್ಯಾರ್ಥಿಗಳಿಗೂ ಸೇನಾ ತರಬೇತಿ ನೀಡಬೇಕು. ಇಲ್ಲವಾದಲ್ಲಿ ಅಲ್ಪಾವಧಿ ಟೆಂಡರ್ ರದ್ದುಗೊಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-2022 ಹಾಗೂ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಹಿಂಪಡೆಯದೆ ಯಥಾವತ್ತಾಗಿ ಮುಂದುವರಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆಯು ರೈತರ ಹಿತಾಸಕ್ತಿ ಹಾಗೂ ಪಶುಸಂಪತ್ತಿನ ರಕ್ಷಣೆಗೆ ಅಗತ್ಯ ಎಂದರು.
ಬಜರಂಗದಳ ಜಿಲ್ಲಾ ಸಂಯೋಜಕ ಸುರೇಶ್ ಬಾಬು ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ-2020ಅನ್ನು ಸಡಿಲಗೊಳಿಸಬಾರದು. ಕಾಯ್ದೆಗೆ ತಿದ್ದುಪಡಿ ತಂದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ ರಾಜ್ಯದಲ್ಲಿ ಉಂಟಾಗುವ ಸಂಘರ್ಷಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.
ವಿಎಚ್ಪಿ ವಿಭಾಗ ಸಹಕಾರ್ಯದರ್ಶಿ ರಾಜೇಶ್ ಗೌಡ, ಜಿಲ್ಲಾ ಕಾರ್ಯದರ್ಶಿ ಆನಂದರಾವ್, ಬಜರಂಗದಳ ಜಿಲ್ಲಾ ಸಂಯೋಜಕ ಅಂಕುಶ್, ವೇಣು ಸುದ್ದಿಗೋಷ್ಠಿಯಲ್ಲಿದ್ದರು.
ಭಾರತೀಯ ಸೇನೆ ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆಯ ಸಂಕೇತ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ದಿಷ್ಟ ಧಾರ್ಮಿಕ ಗುಂಪಿಗೆ ಸೇನಾ ತರಬೇತಿ ಸರಿಯಲ್ಲ. ಇತರ ಸಮುದಾಯಗಳ ಅರ್ಹರನ್ನು ಹೊರಗಿಡುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆ.ರಮೇಶ್ ಬಾಬು, ವಿಎಚ್ಪಿ ಪ್ರಾಂತ ಸಾಮರಸ್ಯ ಪ್ರಮುಖ್