ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ವಿಮಾನಯಾನ ಸಂಪರ್ಕವನ್ನು ನಿರಂತರವಾಗಿ ಕಾಯ್ದುಕೊಳ್ಳಲು ವಿಜಿಎಫ್ (ವಯಬಿಲಿಟಿ ಗ್ಯಾಪ್ ಫಂಡಿಂಗ್) ಅಡಿ ಆರ್ಥಿಕ ನೆರವು ನೀಡುವಂತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕಲಬುರಗಿ ಮತ್ತು ಬೀದರ್ ಮಾದರಿಯಲ್ಲೇ ಶಿವಮೊಗ್ಗ ನಿಲ್ದಾಣಕ್ಕೂ ಆರ್ಥಿಕ ಸಹಕಾರ ನೀಡುವ ಅಗತ್ಯವಿದೆ. ವಿಮಾನ ಸೇವೆಗಳು ಸ್ಥಗಿತಗೊಂಡರೆ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಶಿವಮೊಗ್ಗ-ಬೆಂಗಳೂರು ಮಾರ್ಗದ ಇಂಡಿಗೋ ವಿಮಾನ ಸೇವೆ ಈಗಾಗಲೇ ಸ್ಥಗಿತಗೊಂಡಿದೆ. ಜತೆಗೆ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ 3 ವರ್ಷಗಳಿಂದ ಸೇವೆ ನೀಡುತ್ತಿದ್ದ ಸ್ಟಾರ್ ಏರ್ ಸಂಸ್ಥೆಯ ಕಾರ್ಯಾಚರಣೆಯೂ ನ.21ರಿಂದ ಕೊನೆಗೊಳ್ಳುವ ಸ್ಥಿತಿಯಲ್ಲಿದೆ. ಹೊರರಾಜ್ಯಗಳಿಂದ ಆಗಮಿಸುವ ಉದ್ಯಮಿಗಳು, ಗ್ರಾಹಕರು ಹಾಗೂ ಪ್ರವಾಸಿಗರಿಗೆ ವಿಮಾನ ಸಂಪರ್ಕ ಅತ್ಯಂತ ಪ್ರಮುಖ. ಸೇವೆ ಉಳಿಸಿಕೊಳ್ಳುವುದು ತುರ್ತು ಅಗತ್ಯವಿದೆ ಎಂದರು.
ಸೆ.19ರಂದು ರಾಜ್ಯ ಸರ್ಕಾರವು ಉಡಾನ್ ಯೋಜನೆಯಡಿ ಶಿಫಾರಸು ಮಾಡಿದ ನಾಲ್ಕು ಆದ್ಯತಾ ಮಾರ್ಗಗಳ ಪಟ್ಟಿಯಲ್ಲಿ (ಮೈಸೂರು-ಮುಂಬೈ, ವಿಜಯನಗರ-ಮುಂಬೈ) ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರಿಸದಿರುವುದು ಬೇಸರದ ಸಂಗತಿ. ಕಲಬುರಗಿ, ಬೀದರ್ ಮತ್ತು ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣಗಳನ್ನು ಪರಿಗಣಿಸಿದ ಸರ್ಕಾರ, ತನ್ನದೇ ನೇರ ಆಡಳಿತದಲ್ಲಿರುವ ಶಿವಮೊಗ್ಗ ನಿಲ್ದಾಣವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉಡಾನ್ 6.0 ಯೋಜನೆಯಡಿ ಸೇರಿಸುವಂತೆ ಕೇಂದ್ರ ಸಚಿವ ಕೆ.ರಾಮ್ ಮೋಹನ್ ನಾಯ್ಡು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಮೂಲ ಸೌಕರ್ಯ ಇಲಾಖೆ ಕಾರ್ಯದರ್ಶಿ ಡಾ. ವಿಶಾಲ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಗೋವಾ, ತಿರುಪತಿ, ಪುಣೆ, ಮೈಸೂರು, ಅಹಮದಾಬಾದ್, ಸೂರತ್, ಕೊಲ್ಹಾಪುರ, ಕೊಚ್ಚಿ, ಮಂಗಳೂರು ಮತ್ತು ಕೊಯಮತ್ತೂರು ಸೇರಿ 13 ನಗರಗಳಿಗೆ ಸಂಪರ್ಕ ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಲಬುರಗಿ ಮತ್ತು ಬೀದರ್ ಮಾದರಿಯಲ್ಲಿ ಶಿವಮೊಗ್ಗಕ್ಕೂ ವರ್ಷಕ್ಕೆ 14ರಿಂದ 15 ಕೋಟಿ ರೂ. ವಿಜಿಎಫ್ ನೆರವು ನೀಡಿದರೆ ಕನಿಷ್ಠ ಬೆಂಗಳೂರು- ಶಿವಮೊಗ್ಗ- ಬೆಂಗಳೂರು ಮಾರ್ಗದಲ್ಲಾದರೂ ನಿರಂತರವಾಗಿ ವಿಮಾನ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ. ಅಲ್ಲದೆ ಇಂಡಿಗೋ ಸಂಸ್ಥೆಯು ವಿಮಾನ ನಿಲ್ದಾಣ ಶುಲ್ಕ ಹೆಚ್ಚಳವನ್ನು ಶೇ.7.5ರಿಂದ ಶೇ.5ಕ್ಕೆ ಇಳಿಸುವಂತೆ ಕೋರಿದ್ದ ಮನವಿಗೂ ಪ್ರಸ್ತುತ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮುಖಂಡರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಸಿ.ಎಚ್.ಮಾಲತೇಶ್, ಮೋಹನ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.