ಕುವೆಂಪು ರಂಗಮಂದಿರದಲ್ಲಿ ಶಿವ ಸಂಕಲ್ಪ ಮಹಿಳಾ ಘಟಕ ಹಾಗೂ ಕೆಳದಿ ರಾಣಿ ಚೆನ್ನಮ್ಮಾಜಿ ಅವರ 352ನೇ ಸ್ಮರಣೋತ್ಸವವನ್ನು ಶಿರಹಟ್ಟಿಯ ಬಾಲೆಹೊಸೂರು ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ರುಷಬೇಂದ್ರ ಸ್ವಾಮೀಜಿ, ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್, ಆಶಾ ಚನ್ನಬಸಪ್ಪ, ಇಂದುಮತಿ ಸಾಲಿಮಠ್, ಇ.ವಿಶ್ವಾಸ್ ಇದ್ದರು.
- ಶಿವ ಸಂಕಲ್ಪ ಮಹಿಳಾ ಘಟಕ, ಕೆಳದಿ ರಾಣಿ ಚನ್ನಮ್ಮಾಜಿ ಅವರ 352ನೇ ಸ್ಮರಣೋತ್ಸವ ಉದ್ಘಾಟನೆ
- ಕೆಲವರು ವೀರಶೈವ ಲಿಂಗಾಯತರನ್ನು ಬೇರೆ ದೃಷ್ಟಿಕೋನದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ
- ಶಿವಮೊಗ್ಗದಲ್ಲಿ ಕಿಡಿಕಾರಿದ ಶಿರಹಟ್ಟಿಯ ಬಾಲೆಹೊಸೂರು ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ
ಶಿವಮೊಗ್ಗ: ವೀರಶೈವ ಮತ್ತು ಲಿಂಗಾಯತ ಯಾವತ್ತಿಗೂ ಬೇರೆ ಬೇರೆಯಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಇವೆರಡೂ ಒಂದೇ. ಆದರೆ ಅದನ್ನು ಬೇರೆ ದೃಷ್ಟಿಕೋನದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂದು ಶಿರಹಟ್ಟಿಯ ಬಾಲೆಹೊಸೂರು ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ(Dingaleshwara Swamiji) ಕಿಡಿಕಾರಿದರು.
ಕುವೆಂಪು ರಂಗಮಂದಿರದಲ್ಲಿ ವೀರಶೈವ ಲಿಂಗಾಯತ ಒಕ್ಕೂಟದಿಂದ ಶಿವ ಸಂಕಲ್ಪ(Shiva Sankalpa) ಮಹಿಳಾ ಘಟಕ ಹಾಗೂ ಕೆಳದಿ ರಾಣಿ ಚನ್ನಮ್ಮಾಜಿ ಅವರ 352ನೇ ಸ್ಮರಣೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕೆಲವರು ವೀರಶೈವ ಲಿಂಗಾಯತ(Veerashaiva Lingayat) ಧರ್ಮವನ್ನು ವಿಭಜಿಸಲು ಮುಂದಾಗಿದ್ದಾರೆ. 2017ರಿಂದಲೂ ಎರಡೂ ಒಂದೇ ಎಂದು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಲ್ಲ ಸಮಾಜಗಳು ಒಂದಾಗಬೇಕೇ ವಿನಃ ವಿಘಟನೆ ಆಗಬಾರದು. ಸಿದ್ಧಾಂತಗಳನ್ನು ರಾಜಕೀಯ ವ್ಯವಸ್ಥೆ(Political system)ಗಾಗಿ ವಿಘಟನೆ ಮಾಡಿಕೊಂಡು ಹೋಗಬಾರದು. ಸಂಘಟನೆ ನಮ್ಮ ಗುರಿ ಆಗಬೇಕು. ವೀರಶೈವ ಲಿಂಗಾಯತ ಎಂಬುದು ಒಂದು ಮಾತ್ರವಲ್ಲದೆ, ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕಿದೆ ಎಂದರು.
ಮಹಿಳೆಯ ಸಾಹಸ, ಬುದ್ಧಿಶಕ್ತಿ ಮುಂದೆ ಯಾವ ಪುರುಷನೂ ಸರಿಸಾಟಿಯಲ್ಲ. ಮಹಿಳೆ ಎಲ್ಲಿವರೆಗೆ ಆಡಳಿತಕ್ಕೆ ಬರುವುದಿಲ್ಲವೋ ಅಲ್ಲಿವರೆಗೆ ಸಮಾಜದ ಸುಧಾರಣೆ ಸಾಧ್ಯವೇ ಇಲ್ಲ. ಮಹಿಳೆ ಎನ್ನುವ ಶಕ್ತಿ ಎಂಬುದೇ ರೋಮಾಂಚಕ. ಮಹಿಳೆಯರು ಇಂದು ವೀರಶೈವ ಲಿಂಗಾಯತರಲ್ಲಿ ಮಾತ್ರವಲ್ಲ, ಭಾರತದ ಪ್ರತಿಯೊಂದು ರಂಗದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಯಾವುದೇ ಒಂದು ಕ್ಷೇತ್ರದಲ್ಲಿ ಮುಂದುವರಿದರೆ ಮತ್ತೆ ಅವರನ್ನು ಹಿಂದಕ್ಕೆ ಕರೆತರಲು ಸಾಧ್ಯವೇ ಇಲ್ಲ. ಅದಕ್ಕೆ ತಮಿಳುನಾಡಿನ ಸಿಎಂ( Tamil Nadu CM)ಆಗಿದ್ದ ಜಯಲಲಿತಾ, ಇದೀಗ ಪಶ್ಚಿಮ ಬಂಗಾಳ(West Bengal)ದಲ್ಲಿ ಸಿಎಂ ಆಗಿರುವ ಮಮತಾ ಬ್ಯಾನರ್ಜಿಯೇ ಸಾಕ್ಷಿ ಎಂದರು.
ಕಲಾವಿದೆ ಇಂದುಮತಿ ಸಾಲಿಮಠ್ ವಿಶೇಷ ಉಪನ್ಯಾಸ ನೀಡಿದರು. ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಆಶಾ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವೃಷಭೇಂದ್ರ ಸ್ವಾಮೀಜಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಶಿವ ಸಂಕಲ್ಪ ಘಟಕದ ಜಿಲ್ಲಾಧ್ಯಕ್ಷ ಇ.ವಿಶ್ವಾಸ್, ಪ್ರಮುಖರಾದ ಸೋಮಶೇಖರ್, ಶ್ರೀಕಾಂತ್, ಬಿ.ಎಂ.ಲಿಂಗಮೂರ್ತಿ, ಘಟಕದ ಉಪಾಧ್ಯಕ್ಷೆ ಗೌರಮ್ಮ ಷಡಕ್ಷರಿ, ರತ್ನಮ್ಮ ಮಂಜುನಾಥ, ಪುಷ್ಪಾ, ವಿನೂತಾ ಅರವಿಂದ್ ಇತರರಿದ್ದರು.
ಪೂರ್ಣಕುಂಭ ಮೆರವಣಿಗೆ
ಸಂಜೆ ಉಭಯ ಶ್ರೀಗಳನ್ನು ಶಿವಮೂರ್ತಿ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಮಹಿಳೆಯರು ಪೂರ್ಣಕುಂಭದ ಮೂಲಕ ಸ್ವಾಗತಿಸಿ, ಸಾಂಸ್ಕೃತಿಕ ಮೇಳಗಳೊಂದಿಗೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಮಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ಪಿ.ವೀರಮ್ಮ, ಸ್ತ್ರೀರೋಗ ತಜ್ಞೆ ಡಾ. ವಾಣಿ ಕೋರಿ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ, ಸುರಭಿ ಮಹಿಳಾ ಮಂಡಳಿ ಅಧ್ಯಕ್ಷೆ ಜಿ.ಎಂ.ರೇಖಾ ಅವರನ್ನು ಸನ್ಮಾನಿಸಲಾಯಿತು.
ಅವಿದ್ಯಾವಂತಳಾದರೂ ಮಹಿಳೆ ಅರ್ಥಶಾಸ್ತ್ರವನ್ನು ಬಲ್ಲವಳಾಗಿರುತ್ತಾಳೆ. ಹಿರಿತನ ಇದ್ದ ಮನೆ ಉದ್ಧಾರವಾಗಿದೆ. ಯಾವ ಪುರುಷರೂ ಕೂಡ ಮಹಿಳೆಯರಿಗೆ ಸಾಟಿಯಲ್ಲ. ಮನೆಯಲ್ಲಿ ಅತ್ತೆ-ಸೊಸೆ ಕೂಡಿ ಬಾಳಿದರೆ ಅದೇ ಸ್ವರ್ಗ. ಸಣ್ಣಪುಟ್ಟ ದೋಷಗಳಿದ್ದು. ಅವುಗಳನ್ನು ಸುಧಾರಣೆ ಮಾಡಿಕೊಂಡು ಹೋದರೆ ಅದಕ್ಕಿಂತ ಭಾಗ್ಯ ಮತ್ತೊಂದಿಲ್ಲ.