ಶಿವಮೊಗ್ಗದಲ್ಲಿ ಮಂಥನ ವೈಚಾರಿಕ ವೇದಿಕೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ-150 ಎಂಬ ವಿಷಯ ಕುರಿತು ರಾಜೇಶ್ ಪದ್ಮಾರ್ ಉಪನ್ಯಾಸ ನೀಡಿದರು. ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಉಪಸ್ಥಿತರಿದ್ದರು. 
ಶಿವಮೊಗ್ಗ

ವಂದೇ ಮಾತರಂ ದೇಶದ ಕಲಶಪ್ರಾಯ I vande mataram

ಪ್ರಮುಖ ಮುಖ್ಯಾಂಶಗಳು

  • ಆರ್‌ಎಸ್‌ಎಸ್‌ನ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅಭಿಮತ
  • ಗೀತೆಗೆ 150 ಪೂರ್ಣವಾದ ಹಿನ್ನೆಲೆಯಲ್ಲಿ ಉಪನ್ಯಾಸ
ಶಿವಮೊಗ್ಗ: ಮತೀಯ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ರಾಷ್ಟ್ರಭಕ್ತಿಗೆ ಪ್ರೇರಕವಾಗಿದ್ದ ವಂದೇ ಮಾತರಂ (vande mataram) ಗೀತೆಯನ್ನು ಕಾಂಗ್ರೆಸ್ ತುಂಡರಿಸಿತ್ತು. ಆ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ಮತ್ತೆ ಅದನ್ನು ರಾಷ್ಟ್ರದ ಹಾಡು ಎಂದು ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ (goverment) ಮತ್ತೆ ರಾಷ್ಟ್ರಭಕ್ತರಲ್ಲಿ ಸಂಚಲನ ಮೂಡಿಸಿದೆ ಎಂದು ಆರ್‌ಎಸ್‌ಎಸ್ (rss) ನ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.
ಮಂಥನ ವೈಚಾರಿಕೆ ವೇದಿಕೆಯಿಂದ ತಿಲಕ್ ನಗರ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ-150 ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ದೇಶ ಸ್ವಾತಂತ್ರೃವಾದ ಬಳಿಕ ವಂದೇ ಮಾತರಂ ಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಅನೇಕರು ಬಯಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗದು ಸಾಕಾರಗೊಂಡಿದೆ ಎಂದರು.
1889ರ ವೇಳೆಗೆ ಅಂದಿನ ಬಂಗಾಳದಲ್ಲಿ ರಾಷ್ಟ್ರೀಯತೆಯ ಪ್ರವಾಹ ಆರಂಭವಾಗಿತ್ತು. ಅಮೆರಿಕದಲ್ಲಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನವನ್ನು ಉದ್ದೇಶಿಸಿ ಆಡಿದ ಮಾತುಗಳು ಬಂಗಾಳದಲ್ಲಿ ಹೊಸ ಕಿಚ್ಚು ಮೂಡಿಸಿತ್ತು. ಇದೆಲ್ಲದಕ್ಕೂ ಕಲಶಪ್ರಾಯ ಎಂಬಂತೆ ವಂದೇಮಾತರಂ ಗೀತೆ ಎಲ್ಲೆಡೆ ಮೊಳಗಿ ದೇಶಭಕ್ತಿಯನ್ನು ಜಾಗೃತಿಗೊಳಿಸಿತ್ತು ಎಂದು ತಿಳಿಸಿದರು.
ಬ್ರಿಟಿಷರ ವಿರುದ್ಧ ಭಾರತದಲ್ಲಿ ಮೊಳಕೆಯೊಡೆದಿದ್ದ ಅಸಮಾಧಾನಕ್ಕೆ ವಂದೇ ಮಾತರಂ ನೀರೆರೆಯಿತು. ಕ್ರಮೇಣ ಈ ಗೀತೆ ದೇಶವ್ಯಾಪಿ ಆವರಿಸಿಕೊಂಡಿತು. ವಂಗ-ಭಂಗ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಈ ಚಳವಳಿಗೆ ವಂದೇ ಮಾತರಂ ಪ್ರೇರಣೆಯಾಯಿತು ಎಂದು ವಿವರಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಉಪಸ್ಥಿತರಿದ್ದರು.
ಎಲ್ಲೆಡೆ ಆವರಿಸಿದ ಗೀತೆ
ಆ ಕಾಲಘಟ್ಟದಲ್ಲಿ ವಂದೇ ಮಾತರಂ ಗೀತೆ ಬಂಗಾಳವನ್ನು ಆವರಿಸಿಕೊಂಡಿತು. ಕ್ರಮೇಣ ಇಡೀ ದೇಶದಲ್ಲೇ ಅದು ಜನಜನಿತವಾಯಿತು. ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಹೆಚ್ಚಿತು. ಈ ಕಿಚ್ಚು ಇಡೀ ದೇಶವನ್ನೇ ವ್ಯಾಪಿಸಿತು. ವಂದೇ ಮಾತರಂ ಎಂಬ ಹೆಸರಿನಲ್ಲಿ ಅಂಗಡಿಗಳು ಆರಂಭವಾದವು. ಇದೇ ಹೆಸರಿನಲ್ಲಿ ಹಡಗು ಸಂಚಾರ ಆರಂಭವಾಗಿತ್ತು. ಯುಗಾಂತರ ಎಂಬ ಕ್ರಾಂತಿಕಾರಿ ಸಂಘಟನೆ ಜನ್ಮತಾಳಿತು. ಅಂದಿನ ಕಾಲದ ಯುವಪೀಳಿಗೆಯಲ್ಲಿ ಸ್ವಾತಂತ್ರೃದ ಕಾವು ಆವರಿಸಿಕೊಂಡಿದ್ದಕ್ಕೆ ಈ ಗೀತೆ ಕಾರಣವಾಯಿತು. ಬ್ರಿಟಿಷರ ವಿರುದ್ಧ ಪ್ರತಿಭಟನೆಯ ಅಸ್ತ್ರವಾಗಿ ಈ ಗೀತೆಯನ್ನು ಭಾರತೀಯರು ಬಳಸಿಕೊಂಡರು. ಬಂಕಿಮಚಂದ್ರ ಚಟರ್ಜಿ ಅವರು ಪ್ರಯಾಣದ ವೇಳೆ ಕಂಡು ಬಂದ ಭೂರಮೆಯ ದೃಶ್ಯಕ್ಕೆ ಗೀತೆಯ ರೂಪ ನೀಡಿದ್ದರು. ಮುಂದೆ ಅದೇ ವಂದೇ ಮಾತರಂ ಗೀತೆಯಾಗಿ ರಾಷ್ಟ್ರಭಕ್ತಿಯ ಸಂಚಲನಕ್ಕೆ ಕಾರಣವಾಯಿತು ಎಂದು ರಾಜೇಶ್ ಪದ್ಮಾರ್ ತಿಳಿಸಿದರು.
ಗೀತೆ ಬಳಿಕ ದೇಶವನ್ನೂ ತುಂಡರಿಸಿದರು
ಬ್ರಿಟಿಷರ ವಿರುದ್ಧ ಹೋರಾಟ ರೂಪಿಸಲು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂಬ ಹೆಸರಿನಲ್ಲಿ ಸಂಘಟನೆಯೊಂದು ಆರಂಭವಾಯಿತು. ಈ ಸಂಘಟನೆಯ ಎಲ್ಲ ಅಧಿವೇಶನಗಳ ಆರಂಭದಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಘೋಷಣೆ ಮಾಡಲಾಗಿತ್ತು. ಕೆಲ ವರ್ಷಗಳ ಬಳಿಕ ವಂದೇ ಮಾತರಂ ಗೀತೆಯಲ್ಲಿನ ಅನೇಕ ಸಾಲುಗಳು ಮತೀಯ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ ಎಂಬ ಕಾರಣಕ್ಕಾಗಿ ಅವುಗಳನ್ನು ತುಂಡರಿಸಿ ಭಾರತಾಂಬೆಯನ್ನು ದೇವಿಗೆ ಹೋಲಿಸಿದ್ದ ಸಾಲುಗಳಿಗೆ ಕತ್ತರಿ ಹಾಕಿ ಪರಿಸರದ ರಮಣೀಯತೆಯನ್ನು ಬಿಂಬಿಸುವ ಸಾಲುಗಳನ್ನು ಉಳಿಸಿಕೊಳ್ಳಲಾಗಿತ್ತು. ಗೀತೆಯ ಸಾಲುಗಳಿಗೆ ಕತ್ತರಿ ಹಾಕುವುದಕ್ಕಾಗಿಯೇ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಈ ಗೀತೆ ತುಂಡರಿಸಿದ ಬಳಿಕ ದೇಶವನ್ನೂ ತುಂಡರಿಸಲಾಯಿತು ಎಂದು ರಾಜೇಶ್ ಪದ್ಮಾರ್ ಬೇಸರ ವ್ಯಕ್ತಪಡಿಸಿದರು.
ಪ್ರೇರಣಾದಾಯಕ ಹಾಡು
ವಂದೇ ಮಾತರಂ ಎಂಬುದು ಅತ್ಯಂತ ಪ್ರೇರಣಾದಾಯಕ ಹಾಡು. ಇದನ್ನು ಗಮನಿಸಿದ ಅನೇಕ ಸಾಹಿತಿಗಳು ಇದೇ ಮಾದರಿಯ ದೇಶಭಕ್ತಿ ಗೀತೆಗಳನ್ನು ರಚಿಸಿದರು. ಕನ್ನಡ, ತಮಿಳು, ಮಲೆಯಾಳಂನಲ್ಲೂ ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಅನೇಕ ಗೀತೆಗಳು ಬಂದವು. ಮಹರ್ಷಿ ಅರವಿಂದರು ವಂದೇ ಮಾತರಂ ಅನ್ನು ಆಂಗ್ಲ ಭಾಷೆಗೆ ತರ್ಜುಮೆಗೊಳಿಸಿದರು. ಸ್ವಾಮಿ ವಿವೇಕಾನಂದರ ನಿಧನದ ಬಳಿಕ ಭಾರತದ ಮೇಲೆ ಹಿಡಿತ ಸಾಧಿಸುವ ಭಾಗವಾಗಿ ಬ್ರಿಟಿಷರು ಬಂಗಾಳ ವಿಭಜನೆಗೆ ಮುಂದಾಗಿದ್ದರು. ಆದರೆ ವಂದೇ ಮಾತರಂ ದೇಶದಲ್ಲಿ ಮೂಡಿಸಿದ ಜಾಗೃತಿ, ಹಚ್ಚಿದ ಸ್ವಾತಂತ್ರೃ ಕಿಚ್ಚು ಬ್ರಿಟಿಷರ ಪ್ರಯತ್ನವನ್ನು ಮಣ್ಣಾಗಿಸಿತು. ಸ್ವಾತಂತ್ರೃ ಬಳಿಕ ಡಾ. ಬಾಬು ರಾಜೇಂದ್ರಪ್ರಸಾದ್ ಮುಂತಾದವರು ಮೂಲ ಸ್ವರೂಪದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಅಂದು ಆಡಳಿದಲ್ಲಿರುವವರು ಮತೀಯ ಭಾವನೆಗಳಿಗೆ ನೋವುಂಟಾಗುತ್ತದೆ ಎಂಬ ಕಾರಣಕ್ಕೆ ಅವಕಾಶ ನೀಡಿರಲಿಲ್ಲ. ಈಗ ಈ ಗೀತೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಕಡ್ಡಾಯ ಎಂದು ಸರ್ಕಾರ ಸೂಚಿಸಿರುವುದು ಸಮಯೋಚಿತ ಎಂದು ರಾಜೇಶ್ ಪದ್ಮಾರ್ ಹೇಳಿದರು.