ಸಾಗರದ ಪಶು ಆಸ್ಪತ್ರೆಯಲ್ಲಿ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕಾ ಅಭಿಯಾನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಜಾಗೃತಿ ಕರಪತ್ರ ಬಿಡುಗಡೆ ಮಾಡಿದರು. ಮಂಜುನಾಥ್, ಗಣಪತಿ, ಮಧುಮಾಲತಿ, ಕುಸುಮಾ ಇತರರಿದ್ದರು.
- ಜಾನುವಾರುಗಳಿಗೆ ಉಚಿತ ಚುಚ್ಚುಮದ್ದು
- ಕರಪತ್ರ ಬಿಡುಗಡೆ
- ಉಚಿತ ಲಸಿಕಾ ಅಭಿಯಾನ
ಸಾಗರ: ಜಾನುವಾರುಗಳನ್ನು ಮಕ್ಕಳಂತೆ ಆರೈಕೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಜಾನುವಾರು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇರುವ ಜಾನುವಾರುಗಳಿಗೆ ಕಾಯಿಲೆ ಬಾರದಂತೆ ನೋಡಿಕೊಳ್ಳುವ ಕೆಲಸ ಮಾಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಸೋಮವಾರ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕಾ ಅಭಿಯಾನ ಉದ್ಘಾಟಿಸಿ, ಕಾಲುಬಾಯಿ ರೋಗ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ತಾಲೂಕಿನಾದ್ಯಂತ ನ.3ರಿಂದ ಡಿ.2ರವರೆಗೆ ಲಸಿಕಾ ಅಭಿಯಾನ ನಡೆಯಲಿದೆ. ಲಸಿಕೆ ಹಾಕಿಸುವುದರಿಂದ ಕಾಲುಬಾಯಿ ರೋಗದಿಂದ ಜಾನುವಾರುಗಳನ್ನು ರಕ್ಷಿಸಬಹುದು. ಈಗಾಗಲೇ ಇಲಾಖೆಯಿಂದ ಹೈನುಗಾರಿಕೆ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಕಲ್ಪಿಸಿದ್ದು, ಜಾನುವಾರುಗಳಿಗೆ ತೊಂದರೆಯಾದರೆ ಸ್ಥಳಕ್ಕೆ ಹೋಗಿ ಚಿಕಿತ್ಸೆ ಕೊಡಲಾಗುತ್ತಿದೆ. ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿ ಪರಿಣಮಿಸುತ್ತಿದೆ. ರೈತರು ಕೃಷಿ ಜತೆಗೆ ಹೈನುಗಾರಿಕೆ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಒಂದು ತಿಂಗಳ ಕಾಲ ಉಚಿತ ಲಸಿಕಾ ಅಭಿಯಾನ ಇರುತ್ತದೆ. ಇದಕ್ಕಾಗಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಜಾನುವಾರುಗಳನ್ನು ಸಾಕುವವರು ಅದರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಕಾಲುಬಾಯಿ ಜ್ವರ ವೈರಾಣುವಿನಿಂದ ಹರಡುತ್ತದೆ. ಇದನ್ನು ನಿಯಂತ್ರಿಸದಿದ್ದರೆ ಜಾನುವಾರುಗಳ ಜೀವಕ್ಕೇ ಅಪಾಯ. ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಗಣಪತಿ, ಮಧುಮಾಲತಿ, ಕುಸುಮಾ ಸುಬ್ಬಣ್ಣ, ಸೈಯದ್ ಜಾಕೀರ್, ಪ್ರಮುಖರಾದ ಕಲಸೆ ಚಂದ್ರಪ್ಪ, ಡಿ.ದಿನೇಶ್, ವಿ.ಆರ್.ಸುದೇಶಿ, ಹೇಮಾವತಿ, ಸೋಮಶೇಖರ್, ಪರ್ವಿನ್, ಅಕ್ಷತಾ ಇತರರಿದ್ದರು.