ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಅಂಬೇಡ್ಕರ್, ಡಾ. ಬಾಬು ಜಗಜೀವನ ರಾಮ್ ಭಾವಚಿತ್ರಗಳಿಗೆ ಶಾಸಕ ಆರಗ ಜ್ಞಾನೇಂದ್ರ ಪುಷ್ಪಾರ್ಚನೆ ಮಾಡಿದರು. ಆರ್.ಎಂ.ಮಂಜುನಾಥ ಗೌಡ, ರತ್ನಾಕರ ಶೆಟ್ಟಿ, ಕೆ.ಶ್ರೀನಿವಾಸ್ ಇತರರಿದ್ದರು.
ತೀರ್ಥಹಳ್ಳಿ: ದೇಶಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆ ಅಮೂಲ್ಯ. ಈ ಸಂದರ್ಭದಲ್ಲಿ ಮನುಕುಲಕ್ಕೆ ಶಾಪವಾದ ಅಸ್ಪಶ್ಯತೆ ಬಗ್ಗೆ ಮಾತನಾಡುವ ನಾವು ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಮ್ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮದ ಆಧಾರದಲ್ಲಿ ಬಡಿದಾಡಿಕೊಳ್ಳುವ ಬದಲು ಭಾರತದಲ್ಲಿರುವ ಮುಸ್ಲೀಮರೆಲ್ಲರೂ ಪಾಕಿಸ್ತಾನಕ್ಕೆ ವಲಸೆ ಹೋಗಿ ಅಲ್ಲಿರುವ ಹಿಂದುಗಳು ಭಾರತಕ್ಕೆ ಬರುವುದು ಸೂಕ್ತ ಎಂದು ಹೇಳುವ ತಾಕತ್ತು ತೋರಿದವರು ಬಿ.ಆರ್.ಅಂಬೇಡ್ಕರ್. ಅವರ ಜೀವನ ಚರಿತ್ರೆ ಪುಸ್ತಕದಲ್ಲಿ ಈ ವಿಚಾರ ಇದೆ. ಸರ್ವಾಧಿಕಾರಿ ಧೋರಣೆಯನ್ನು ಧಿಕ್ಕರಿಸಿ ಇಂದಿರಾ ಗಾಂಧಿ ಅವರ ಸಚಿವ ಸಂಪುಟದಿಂದ ಹೊರಬಂದಿದ್ದ ಬಾಬು ಜಗಜೀವನ ರಾಮ್ ಜೀವನಗಾಥೆ ಅವಿಸ್ಮರಣೀಯ ಎಂದರು.
ಪರಿಶಿಷ್ಟರಿಗೆ ಕುರಿ, ಕೋಳಿ ನೀಡಿದರೆ ಸಾಲದು. ಈ ಸಮುದಾಯಗಳಿಗೆ ಮುಂಗಡಪತ್ರದಲ್ಲಿ ಕಾಯ್ದಿರಿಸಿದ್ದ 24.50 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದೆ. ಇದನ್ನು ವಿರೋಧಿಸುವ ತಾಕತ್ತು ಯಾವೊಬ್ಬ ಕಾಂಗ್ರೆಸ್ ನಾಯಕರಿಗಿಲ್ಲವೇ ಎಂದು ಪ್ರಶ್ನಿಸಿದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಜಿಪಂ ಮಾಜಿ ಸದಸ್ಯ ಕೆ.ಶ್ರೀನಿವಾಸ್, ತಹಸಿಲ್ದಾರ್ ಎಸ್.ರಂಜಿತ್, ತಾಪಂ ಇಒ ಎಂ.ಶೈಲಾ, ಪಪಂ ಮುಖ್ಯಾಧಿಕಾರಿ ಡಿ.ರಾಜು, ಪ್ರಭಾರ ಬಿಇಒ ಗಿರೀಶ್ ಇದ್ದರು.