ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ತಿಮ್ಮರಾಯಪ್ಪ ಮಾತನಾಡಿದರು. ಡಾ. ಟಿ.ಅವಿನಾಶ್, ಯತೀಶ್ ಚಂದ್ರ, ಕುಂದನ್ ಬಸವರಾಜ್ ಡಾ. ಮಮತಾ ಇದ್ದರು.
- ಕುವೆಂಪು ವಿವಿ ಕುಲಸಚಿವ ಡಾ. ತಿಮ್ಮರಾಯಪ್ಪ ಸಲಹೆ
- ಸಹ್ಯಾದ್ರಿ ಕಾಲೇಜಿನಲ್ಲಿ ಸಮ್ಮೇಳನ
ಶಿವಮೊಗ್ಗ: ಕೃತಕ ಬುದ್ಧಿಮತ್ತೆ ಎಂದಿಗೂ ಮಾನವನ ಜ್ಞಾನಕ್ಕೆ ಪರ್ಯಾಯವಾಗಲಾರದು. ಎಐ (aI) ಎಂಬುದು ಮನುಷ್ಯನೇ ಸೃಷ್ಟಿಸಿದ ಮತ್ತೊಂದು ತಂತ್ರಜ್ಞಾನ (technology) ಎಂದು ಕುವೆಂಪು (kuvempu) ವಿವಿ ಕುಲಸಚಿವ (ಮೌಲ್ಯಮಾಪನ) ಡಾ. ತಿಮ್ಮರಾಯಪ್ಪ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಂ.ಕಾಂ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಎಐನ ಹಲವು ತಾಂತ್ರಿಕ ಮತ್ತು ಕೌಶಲದ ಹೊಸ ಸಾಧ್ಯತೆಗಳನ್ನು ವಿವರಿಸಿದರು.
ಎಐ ಎಂಬುದು ಪ್ಲಾಸ್ಟಿಕ್ ಹೂವಿನಂತೆ. ನೋಡಲು ಸುಂದರವಾಗಿರುತ್ತದೆ. ಆದರೆ ಸುವಾಸನೆಯಾಗಲಿ, ಮಕರಂದವಾಗಲಿ ಇರುವುದಿಲ್ಲ. ಇಷ್ಟಾದರೂ ಜಗತ್ತು ಮುಂದೊಂದು ದಿನ ಈ ಕೃತಕ ಬುದ್ಧಿಮತ್ತೆಗೆ ಶರಣಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಎಐ ನಿಯಂತ್ರಿಸುವ ಬಗ್ಗೆ ಅನೇಕ ಕಡೆ ಚರ್ಚೆ ನಡೆಯುತ್ತಿದೆ. ಹೊಸದಾಗಿ ಯಾವುದಾದರೂ ಪರಿಚಯವಾದಾಗ ಈ ರೀತಿಯ ವಿಮರ್ಶೆಗಳು ಅನಿವಾರ್ಯ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಟಿ.ಅವಿನಾಶ್ ಮಾತನಾಡಿ, ನಮ್ಮ ಸಾವಯವ ಸಮಾಜವನ್ನು ವಿಘಟಿಸುವ ಸಾಧ್ಯತೆಯನ್ನು ಎಐ ಹೊಂದಿದೆ. ಹೀಗಾಗಿ ಅದನ್ನು ವಿವೇಚನೆಯಿಂದ ಬಳಸಬೇಕು. ಆದರೆ ಎಐ ದುರ್ಬಳಕೆ ಇಂದು ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯತೀಶ್‌ಚಂದ್ರ ಮಾತನಾಡಿ, ತಂತ್ರಜ್ಞಾನ ಎನ್ನುವುದು ಎರಡು ಅಲಗಿನ ಕತ್ತಿಯಿದ್ದಂತೆ. ಅದನ್ನು ನಾವು ಸರಿಯಾಗಿ ನಿಭಾಯಿಸಬೇಕಿದೆ ಎಂದರು. ಪ್ರಾಧ್ಯಾಪಕರಾದ ಕುಂದನ್ ಬಸವರಾಜ್, ಡಾ. ಸರಳಾ, ಡಾ. ಮಮತಾ ಇತರರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯವ್ಯಕ್ತಿಗಳನ್ನು ಕೀಳಾಗಿ ಕಾಣುವಂತೆ ಮಾಡುವ ಅಪಾಯಕಾರಿ ಬೆಳವಣಿಗೆ ಕೂಡ ಆಗುತ್ತಿದೆ. ಅನೇಕ ಬಾರಿ ತಪ್ಪು ಸಂದೇಶಗಳು ಈ ಮೂಲಕ ಹೊರಬರುತ್ತವೆ. ಅದರ ಉಪಯೋಗದ ಜತೆಗೆ ದುರ್ಬಳಕೆಯೂ ಆಗುತ್ತಿದೆ. ಮನುಷ್ಯನೇ ನಿರ್ಮಿಸಿದ ಈ ಕೃತಕ ಬುದ್ಧಿಮತ್ತೆ ಮುಂದೊಂದು ದಿನ ಮನುಷ್ಯನನ್ನೇ ನಿಯಂತ್ರಿಸುವ ಅಪಾಯವಿದೆ.