ಭದ್ರಾವತಿಯಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗೀತಾ ರಾಜ್‌ಕುಮಾರ್, ಬಿ.ಕೆ.ಮೋಹನ್, ಎ.ಮುರುಗನ್, ಪ್ರಕಾಶ್ ರಾಥೋಡ್ ಇತರರಿದ್ದರು.
ಭದ್ರಾವತಿ: ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಡವರ ಕಣ್ಣೀರು ಒರೆಸಲು ಅರಸು ಅವರು ದಿಟ್ಟ ಆಡಳಿತಾತ್ಮಕ ನಿರ್ಧಾರ ಕೈಗೊಂಡಿದ್ದರು ಎಂದು ದೊಣಬಘಟ್ಟ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎ.ಮುರುಗನ್ ಹೇಳಿದರು.
ತಾಲೂಕು ಆಡಳಿತದಿಂದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್.ಜಿ.ಹಾವನೂರ್ ನೇತೃತ್ವದ ಸಮಿತಿ ರಚಿಸಿದರು. ಸಮಿತಿಯು ಹಿಂದುಳಿದ ವರ್ಗಗಳ ಸ್ಥಿತಿಗತಿ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿತು. ಈ ವರದಿ ಆಧರಿಸಿ ಸೂಕ್ತ ಮೀಸಲಾತಿ ನೀಡುವ ನಿರ್ಧಾರ ಕೈಗೊಳ್ಳಲಾಯಿತು ಎಂದರು.
ಸಂಪತ್ತಿನ ಸಮಾನ ಹಂಚಿಕೆ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯ ನಿವಾರಿಸಬಹುದು ಎಂಬುದನ್ನು ಮನಗಂಡಿದ್ದ ಅರಸು ಅವರು, ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿದರು. ರಾಜ್ಯದ ಲಕ್ಷಾಂತರ ಭೂರಹಿತ ಕೂಲಿ ಕಾರ್ಮಿಕ ಕುಟುಂಬಗಳಿಗೆ ಭೂ ಒಡೆತನ ದಕ್ಕಿತು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್, ನಗರಸಭೆ ಸದಸ್ಯರಾದ ಬಿ.ಕೆ.ಮೋಹನ್, ಚನ್ನಪ್ಪ, ಆಯುಕ್ತ ಕೆ.ಎನ್.ಹೇಮಂತ್, ಡಿವೈಎಸ್ಪಿ ಪ್ರಕಾಶ್ ರಾಥೋಡ್, ಸಿದ್ದಬಸಪ್ಪ, ಬಸವರಾಜ ಉಪಸ್ತಿತರಿದ್ದರು.