ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ವೈ.ವಿ.ಗುಂಡೂರಾವ್ ಅವರು ಬೀಚಿ ಸಾಹಿತ್ಯದಲ್ಲಿ ಜೀವನ ಪ್ರೀತಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ವಿನಯ್ ಶಿವಮೊಗ್ಗ ಇದ್ದರು. 
ಶಿವಮೊಗ್ಗ

ಹಾಸ್ಯದೊಂದಿಗೆ ಸಾಮಾಜಿಕ ಪರಿವರ್ತನೆಯ ಸಂಗತಿಗಳ ಅನಾವರಣ I social reforms

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ವೈ.ವಿ.ಗುಂಡೂರಾವ್ ಅಭಿಮತ
  • ಬೀಚಿ ಸಾಹಿತ್ಯದಲ್ಲಿ ಜೀವನ ಪ್ರೀತಿ ಕುರಿತ ಉಪನ್ಯಾಸ
  • ಕನ್ನಡ ಸಾಹಿತಿಯಾಗಿ ಬೀಚಿ ರೂಪುಗೊಂಡಿದ್ದೇ ರೋಚಕ
ಶಿವಮೊಗ್ಗ: ನವೋದಯ ಕನ್ನಡ ಹಾಸ್ಯ (joke) ಸಾಹಿತ್ಯದಲ್ಲಿ ಟಿ.ಪಿ.ಕೈಲಾಸಂ, ಬೀಚಿ (bichi) ಹಾಗೂ ನಾ.ಕಸ್ತೂರಿ ಅವರನ್ನು ತ್ರಿಮೂರ್ತಿಗಳು ಎಂದೇ ಗುರುತಿಸಲಾಗುತ್ತದೆ. ಶುದ್ಧವಾದ ಹಾಸ್ಯ ಸಾಹಿತ್ಯ (sahitya) ನೀಡಿರುವುದು ಮೂವರ ಹೆಗ್ಗಳಿಕೆ ಎಂದು ಸಾಹಿತಿ ವೈ.ವಿ.ಗುಂಡೂರಾವ್ ಹೇಳಿದರು.
ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಬೀಚಿ ಸಾಹಿತ್ಯದಲ್ಲಿ ಜೀವನ ಪ್ರೀತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಶುದ್ಧ ಹಾಸ್ಯ ಹಾಗೂ ಅಶುದ್ಧ ಹಾಸ್ಯದ ನಡುವಿನ ವ್ಯತ್ಯಾಸ ತುಂಬಾ ಇದೆ. ಶುದ್ಧ ಹಾಸ್ಯವನ್ನು ಪಡೆಯುವುದೇ ವಿರಳವಾಗುತ್ತದೆ. ಇಂತಹ ದಿನಗಳಲ್ಲಿ ಬೀಚಿ ಅವರು ತಮ್ಮ ಸಾಹಿತ್ಯದ ಮೂಲಕ ನಗುವಿನೊಂದಿಗೆ ಸಮಾಜ ಪರಿವರ್ತನೆಯ ಸಂಗತಿಗಳನ್ನು ವಿವರಿಸುತ್ತಿದ್ದುದು ನೆನಪಾಗಿ ನಮ್ಮನ್ನು ಕಾಡುತ್ತಿದೆ ಎಂದು ತಿಳಿಸಿದರು.
ಬೀಚಿ ಕಮ್ಯುನಿಷ್ಟ್ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದವರು. ಅವರು ಶ್ರೇಷ್ಠ ಕನ್ನಡ ಸಾಹಿತಿಯಾಗಿ ರೂಪುಗೊಂಡಿದ್ದೇ ರೋಚಕ. ಅವರಿಗೆ ಸಾಹಿತ್ಯ ಎಂದರೆ ಕೇವಲ ಇಂಗ್ಲೀಷ್ ಸಾಹಿತ್ಯ ಎಂಬ ಅನಿಸಿಕೆ ಇತ್ತು. ಕನ್ನಡ ಸಾಹಿತ್ಯದ ಓದು ಎಂದೂ ರುಚಿಸುತ್ತಿರಲಿಲ್ಲ. ಹೀಗಿರುವಾದ ಅವರು ಪ್ರಯಾಣದಲ್ಲಿ ಕಾಲ ಕಳೆಯುವುದಕ್ಕಾಗಿ ಕನ್ನಡ ಸಾಹಿತ್ಯ ಕೃತಿಯೊಂದನ್ನು ಖರೀದಿಸಿ ಓದತೊಡಗಿದರು. ಕೃತಿ ಓದಿ ಮುಗಿಸುವಾಗ ಅವರಲ್ಲಿ ಪರಿವರ್ತನೆಯಾಗಿತ್ತು. ಅದಕ್ಕೆ ಕಾರಣಗಿದ್ದು ಅ.ನ.ಕೃಷ್ಣರಾಯರ ಸಂಧ್ಯಾರಾಗ ಕಾದಂಬರಿ ಎಂದರು.
ಬೀಚಿ ಅವರ ಹಾಸ್ಯ ಸಾಹಿತ್ಯದಿಂದ ಪ್ರೇರಿತವಾಗಿ ಒಂದು ಪರಂಪರೆಯೇ ಮುಂದುವರೆದುಕೊಂಡು ಬಂದಿದೆ. ಗಂಗಾವತಿ ಪ್ರಾಣೇಶ್ ಅವರು ಬೀಚಿ ಹಾಸ್ಯ ಸಾಹಿತ್ಯದ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಬಸವರಾಜ ಮಹಾಮನಿ ಎಂಬುವರು ಗಂಗಾವತಿ ಪ್ರಾಣೇಶ್ ಹಾದಿಯಲ್ಲೇ ಸಾಗುತ್ತಿದ್ದಾರೆ. ಓರ್ವ ಸಾಹಿತಿ ಪ್ರಭಾವ ಎನ್ನುವುದು ಇದನ್ನೇ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಕಾರ್ಯದರ್ಶಿ ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.

ಬುದ್ಧಿಗೆ ಪ್ರೇರಣೆ ನೀಡಲಿ

ಇಂದಿನ ಸನ್ನಿವೇಶದಲ್ಲಿ ಮೊಬೈಲ್ ರೀಲ್ಸ್‌ಗಳು, ಹಾಸ್ಯ ಕಾರ್ಯಕ್ರಮಗಳು, ಸಾಮಾಜಿಕ ಜಾಲತಾಣಗಳು ಎಲ್ಲ ಕಡೆಯೂ ಹಾಸ್ಯ ಹರಿದು ಬರುತ್ತಿದೆ. ಆದರೆ ಇದರ ಗುಣಮಟ್ಟ ಎಷ್ಟು ಎಂಬುದನ್ನು ನಾವು ಅರಿತುಕೊಳ್ಳುವುದು ಒಳಿತು. ಯಾವುದೇ ಸಾಹಿತ್ಯ ವ್ಯಕ್ತಿಯ ಬುದ್ಧಿಗೆ ಪ್ರೇರಣೆ ನೀಡುವಂತಿರಬೇಕು. ಜತೆಗೆ ಮನಸ್ಸಿಗೆ ರಂಜನೆ ನೀಡಬೇಕು. ಇವರೆಡರ ಜತೆಗೆ ಸಮಾಜ ಸುಧಾರಣೆಗೆ ಪೂರಕ ಆಗಿರಬೇಕು ಎಂದು ವೈ.ವಿ.ಗುಂಡೂರಾವ್ ಅಭಿಪ್ರಾಯಪಟ್ಟರು.