ಶಿವಮೊಗ್ಗದಲ್ಲಿ ಆಯೋಜಿಸಿದ್ದ ಸುರಕ್ಷಿತ ಅಂತರ್ಜಾಲ ಬಳಕೆ ದಿನಾಚರಣೆಯಲ್ಲಿ ಎಎಸ್ಪಿ ಎ.ಜಿ.ಕಾರಿಯಪ್ಪ, ಮಂಜುನಾಥ್, ನಿತಿನ್, ಕೃಷ್ಣಮೂರ್ತಿ ಇದ್ದರು.
- ವಂಚಕರ ಬಗ್ಗೆ ಜಾಗೃತವಾಗಿರುವುದು ಅವಶ್ಯ
- ಶಿವವಮೊಗ್ಗ ಎಎಸ್‌ಪಿ ಎ.ಜಿ.ಕಾರಿಯಪ್ಪ ಸಲಹೆ
ಶಿವಮೊಗ್ಗ: ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ಎಲ್ಲ ವಲಯಗಳಲ್ಲಿ ಅಂತರ್ಜಾಲ (internet) ಬಳಕೆಯಾಗುತ್ತಿದೆ. ಸುರಕ್ಷಿತ (safe) ಮತ್ತು ಜವಾಬ್ದಾರಿಯುತ ಬಳಕೆ ಬಗ್ಗೆ ಎಚ್ಚರ (aware) ವಹಿಸಬೇಕೆಂದು ಎಎಸ್‌ಪಿ ಎ.ಜಿ.ಕಾರಿಯಪ್ಪ ಹೇಳಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುರಕ್ಷಿತ ಅಂತರ್ಜಾಲ ಬಳಕೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕಿಂಗ್, ಇ-ಆಫೀಸ್, ಆನ್‌ಲೈನ್ ತರಗತಿ, ಮೀಟಿಂಗ್‌ಗಳು ಹೀಗೆ ಎಲ್ಲೆಡೆ ಅಂತರ್ಜಾಲ ಬಳಕೆ ವ್ಯಾಪಕವಾಗಿದೆ. ಅದೇ ರೀತಿ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಅಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಅಪರಾಧಗಳಲ್ಲಿ ಸಂತ್ರಸ್ತರಾಗುತ್ತಿದ್ದಾರೆ. ಕೋಟಿಗಟ್ಟಲೆ ಹಣವನ್ನು ಖಾತೆಗಳಿಂದ ಕಬಳಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ವಂಚನೆಗೆ ಒಳಗಾದಲ್ಲಿ ತಕ್ಷಣ 1930ಗೆ ಕರೆ ಮಾಡಿ ದೂರು ನೀಡಬೇಕು ಎಂದರು.
ಕಚೇರಿಗಳಲ್ಲಿ ಲಾಗಿನ್ ಮಾಹಿತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಬಳಕೆ ನಂತರ ಕಡ್ಡಾಯವಾಗಿ ಲಾಗ್‌ಔಟ್ ಮಾಡಬೇಕು. ಮಕ್ಕಳು, ಹದಿಹರೆಯದವರು ಕಲಿಕೆ, ಮನರಂಜನೆಗಾಗಿ ಇಂದು ಹೆಚ್ಚಾಗಿ ಅಂತರ್ಜಾಲ ಬಳಸುತ್ತಿದ್ದಾರೆ. ವಂಚಕರು ಮೊಬೈಲ್‌ಗೆ ಕರೆ ಮಾಡಿ ನೀವು ಕಳುಹಿಸಿದ ಕೊರಿಯರ್ ಪಾರ್ಸಲ್‌ಗಳಲ್ಲಿ ಮಾದಕ ವಸ್ತು, ನಕಲಿ ಪಾಸ್‌ಪೋರ್ಟ್ ಇದೆ. ನಿಮ್ಮ ವಿರುದ್ಧ ಬೇರೆ ರಾಜ್ಯಗಳಲ್ಲಿ ದೂರು ದಾಖಲಾಗಿದೆ ಎಂದು ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುವ ವಂಚಕರಿದ್ದಾರೆ ಎಂದು ಎಚ್ಚರಿಸಿದರು.
ಇ-ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ನೈಜ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಂತೆ ಕಾಣುವ ಎಪಿಕೆ ಫೈಲ್ ಕಳುಹಿಸಿ ವಂಚಿಸುವುದು, ನಕಲಿ ಹೂಡಿಕೆ ಅಪ್ಲಿಕೇಷನ್ ಬಳಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ನೀಡುವ ಭರವಸೆ ನೀಡಿ ವಂಚಿಸಲಾಗುತ್ತಿದೆ. ವಿದೇಶಗಳಿಂದಲೂ ಸೈಬರ್ ವಂಚಕರು ಕರೆ ಮಾಡುತ್ತಿದ್ದು ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು ಎಂದರು.
ಡಿವೈಎಸ್ಪಿ ಕೃಷ್ಣಮೂರ್ತಿ, ಕೆಎಸ್‌ಆರ್‌ಪಿ ಡೆಪ್ಯುಟಿ ಕಮಾಂಡೆಂಟ್ ಮಂಜುನಾಥ್ ಎಸ್. ಅಣಜಿ ಇದ್ದರು.
ನಿಯಮಿತವಾಗಿ ಪಿನ್ ಸಂಖ್ಯೆ ಬದಲಾಯಿಸಿ
ಚತುರ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು, ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದು ಎಂಬುದು ಈ ವರ್ಷದ ಸುರಕ್ಷಿತ ಅಂತರ್ಜಾಲ ಬಳಕೆ ದಿನದ ಘೋಷವಾಕ್ಯ. ಅಂತರ್ಜಾಲ ವಂಚನೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ತಿಳಿವಳಿಕೆ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ ಎಂದು ಎನ್‌ಐಸಿಯ ಜಿಲ್ಲಾ ಸೂಚನಾ ವಿಜ್ಞಾನಾಧಿಕಾರಿ ನಿತಿನ್ ಹೇಳಿದರು. ಸೈಬರ್ ಬೆದರಿಕೆ, ಫಿಶಿಂಗ್, ಎಸ್‌ಎಂಎಸ್ ಹೆಡರ್ ಥ್ರೆಟ್, ನಕಲಿ ಕಸ್ಟಮರ್ ಕೇರ್ ಸ್ಕಾೃಮ್ ಬಗ್ಗೆ ವಿವರಿಸಿದರು. ಅಂತರ್ಜಾಲ ಬಳಕೆಯಲ್ಲಿ ಇಟ್ಟುಕೊಳ್ಳಬೇಕಾದ ಉತ್ತಮ ಅಭ್ಯಾಸಗಳು, ಸುರಕ್ಷಾ ವಿಧಾನಗಳು, ಸೈಬರ್ ಅಪರಾಧಗಳನ್ನು ವರದಿ ಮಾಡುವ ಬಗ್ಗೆ ತಿಳಿಸಿದರು. ಎಂದಿಗೂ ನಮ್ಮ ವೈಯಕ್ತಿಕ ಮಾಹಿತಿ, ಒಟಿಪಿ, ಪಿನ್ ಸಂಖ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ನಿಯಮಿತವಾಗಿ ಪಿನ್‌ಸಂಖ್ಯೆಯನ್ನು ಬದಲಾಯಿಸುತ್ತಿರಬೇಕು ಎಂದು ತಿಳಿಸಿದರು.
ಅಂತರ್ಜಾಲ ಬಳಕೆಯಿಂದ ಲಾಭ ಮತ್ತು ಅನುಕೂಲಗಳು ಸಾಕಷ್ಟಿದ್ದರೂ ಅನಾನುಕೂಲಗಳು, ನಷ್ಟಗಳ ಬಗ್ಗೆಯೂ ನಾವು ಜಾಗೃತರಾಗಿರಬೇಕು. ಅಂತರ್ಜಾಲ ಬಳಕೆಯಿಂದ ಹಲವಾರು ಸಮಸ್ಯೆಗಳಿವೆ. ಫಿಶಿಂಗ್, ಮಾಲ್‌ವೇರ್ ಅಪರಾಧಗಳ ಕುರಿತು ಎಚ್ಚರಿಕೆಯಿಂದ ಇರಬೇಕು.