ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ತಾಂತ್ರಿಕ ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು. ಎಸ್.ಎನ್.ನಾಗರಾಜ, ಡಾ. ವೈ.ವಿಜಯಕುಮಾರ್, ಡಾ. ಎಸ್.ವಿ.ಸತ್ಯನಾರಾಯಣ, ಡಾ. ಜಲೇಶ್‌ಕುಮಾರ್ ಇದ್ದರು. 
ಶಿವಮೊಗ್ಗ

ಧ್ವನಿ ಇಲ್ಲದೆ ತುಟಿಗಳ ಚಲನೆಯಿಂದ ಮಾತಿನ ಅರ್ಥ ಗ್ರಹಿಕೆ । JNNCE

ಪ್ರಮುಖ ಮುಖ್ಯಾಂಶಗಳು

  • ಕೃತಕ ಬುದ್ದಿಮತ್ತೆ ಮೂಲಕ ಮಾತಿನ ಅರ್ಥ ಗ್ರಹಿಸುವ ಅಪ್ಲಿಕೇಶನ್ ಸಿದ್ಧ
  • ಗಮನ ಸೆಳೆದ ಜೆಎನ್‌ಎನ್ ಸಿಇ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಅಪ್ಲಿಕೇಶನ್
  • ಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಯೋಜನೆಗಳ ಪ್ರಾತ್ಯಕ್ಷಿಕೆ
ಶಿವಮೊಗ್ಗ: ಕೃತಕ ಬುದ್ದಿಮತ್ತೆ(Artificial intelligence) ಮೂಲಕ ಧ್ವನಿಯ ಅವಲಂಬನೆ ಇಲ್ಲದೆ ಕೇವಲ ತುಟಿಗಳ ಚಲನೆಯಿಂದ ಮಾತಿನ ಅರ್ಥವನ್ನು ಗ್ರಹಿಸುವಂತಹ ಅಪ್ಲಿಕೇಶನ್(Application) ಅನ್ನು ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ..!
ಈ ತಂತ್ರಜ್ಞಾನ(Technology)ವು ಮಾತನಾಡಲು ಸಾಧ್ಯವಾಗದವರಿಗೆ ಅಥವಾ ಗದ್ದಲಯುಕ್ತ ಪರಿಸರಗಳಲ್ಲಿ ರಹಸ್ಯ ಸಂವಹನ ನಡೆಸುವಂತಹ, ಮಾನವ ಕಂಪ್ಯೂಟರ್(Human computer)ಸಂಪರ್ಕಕ್ಕೆ ಪರಿಣಾಮಕಾರಿ ವೇದಿಕೆಯನ್ನು ಕಲ್ಪಿಸಲಿದೆ.
ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಿಂದ ಶುಕ್ರವಾರ ತಾಂತ್ರಿಕ ಯೋಜನೆಗಳ ಪ್ರಾತ್ಯಕ್ಷಿಕೆಯಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಕೃತಕ ಬುದ್ಧಿಮತ್ತೆ ಅಪ್ಲಿಕೇಶನ್ ಹೆಚ್ಚು ಗಮನ ಸೆಳೆಯಿತು.
ಅದರ ಜತೆಯಲ್ಲಿ ಮೆಷಿನ್ ಲರ್ನಿಂಗ್(Machine Learning) ಸಹಾಯದಿಂದ ಸುಮಾರು 17 ಕಾಯಿಲೆಗಳ ಕುರಿತು ರೋಗ ಲಕ್ಷಣಗಳ ಆಧಾರದ ಮೇಲೆ ಸ್ವಯಂ ಆರೋಗ್ಯ ಶಿಫಾರಸು ನೀಡಬಲ್ಲ ಅಪ್ಲಿಕೇಶನ್ ಅನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು. ಅದು ಎಂಎಲ್ ಮೂಲಕ ಅಪಾರ ಸಂಖ್ಯೆಯ ಉತ್ಪನ್ನಗಳ ವಿಮರ್ಶೆಗಳನ್ನು ವಿಶ್ಲೇಷಿಸಿ ಇ-ಕಾಮರ್ಸ್(E-commerce)ಗ್ರಾಹಕರಿಗೆ ಸೂಕ್ತ ಆಯ್ಕೆ ನೀಡುವಂತಹ ವಿನ್ಯಾಸ ಹೊಂದಿದ ಯೋಜನೆಯಾಗಿತ್ತು.
ಜತೆಗೆ ಆನ್‌ಲೈನ್ ಹಣಕಾಸು ವಹಿವಾಟುಗಳು ಸೈಬರ್(Cyber) ದಾಳಿಗೆ ಗುರಿಯಾಗದಂತೆ ಹಾಗೂ ಅಗತ್ಯ ಗೌಪ್ಯತೆಗಾಗಿ ಎಇಎಸ್ ಎನ್‌ಕ್ರಿಪ್ಶನ್ ಬಳಸಿ ವಂಚನೆ ಪತ್ತೆಗಾಗಿ ಗಣಕಯಂತ್ರದ ಕ್ರಮಾವಳಿ ಬಳಸಿ ಸಂಯೋಜಿಸುವ ಸುಧಾರಿತ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ಕ್ಯಾಮೆರಾ ಮತ್ತು ಆಳವಾದ ಕಲಿಕಾ ಕ್ರಮಾವಳಿ ಬಳಸಿಕೊಂಡು ಸಂಕೇತ ಭಾಷೆಯನ್ನು, ಸ್ವಯಂಚಾಲಿತವಾಗಿ ಪತ್ತೆ ಹಚ್ಚಿ ವ್ಯಾಖ್ಯಾನಿಸಿ ಅಕ್ಷರದ ರೂಪದಲ್ಲಿ ತಿಳಿಸುವ, ಬ್ಲಾಕ್‌ಚೈನ್(Blockchain)ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಉತ್ಪನ್ನಗಳ ನೈಜತೆ ಕುರಿತಾಗಿ ಮಾರ್ಗದರ್ಶನ ನೀಡುವ, ಹೊಂದಾಣಿಕೆಯುಕ್ತ ಸ್ಟೆಗನೋಗ್ರಫಿ ತಂತ್ರಜ್ಞಾನ, ಸ್ಮಾರ್ಟ್(smart) ಐಒಟಿ-ಆಧಾರಿತ ಕೋಲ್ಡ್ ಸ್ಟೋರೇಜ್ ಮಾನಿಟರಿಂಗ್ ವ್ಯವಸ್ಥೆ, ಸೈಬರ್ ತಂತ್ರಜ್ಞಾನ ಬಳಸಿ ಸಾಮಾಜಿಕ ಮಾಧ್ಯಮದಲ್ಲಿನ ನಕಲಿ ಖಾತೆ ಪತ್ತೆ ಹಚ್ಚುವಂತಹ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳು ನಿರೂಪಿಸಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಕಂಪ್ಯೂಟರ್ ಸೈನ್ಸ್‌ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಜಲೇಶ್‌ಕುಮಾರ್ ಉಪಸ್ಥಿತರಿದ್ದರು.