ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆ.
- ಆಯನೂರು ಕೋಟೆ ಬಳಿ ಶುಕ್ರವಾರ ರಾತ್ರಿ ಅಪಘಾತ
- ಹಾರನಹಳ್ಳಿ ಕಡೆಗೆ ತೆರಳುತ್ತಿದ್ದ ಅಕಿಫ್ ಮತ್ತು ಚಾಂದ್‌ಪೀರ್
- ಚಾಮೇನಹಳ್ಳಿಯಿಂದ ಬೈಕ್‌ನಲ್ಲಿ ಬರುತ್ತಿದ್ದ ಗುರುಕಿರಣ್
ಶಿವಮೊಗ್ಗ: ತಾಲೂಕಿನ ಆಯನೂರು(Aynuru)ಕೋಟೆ ಬಳಿ ಶುಕ್ರವಾರ ರಾತ್ರಿ ಬೈಕ್‌ಗಳು ಮುಖಾಮುಖಿ ಡಿಕ್ಕಿ(Accident)ಯಾಗಿ ರಸ್ತೆಗೆ ಬಿದ್ದ ಯುವಕರಿಬ್ಬರ ಮೇಲೆ ಅಪರಿಚಿತ ವಾಹನ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ತಾಲೂಕಿನ ಹಾರನಹಳ್ಳಿ ಬಳಿಯ ಮಲ್ಲಾಪುರದ ಅಕಿಫ್ (21) ಮತ್ತು ಚಾಂದ್‌ಪೀರ್ (18) ಮೃತರು. ಕ್ಯಾತಿನಕೆರೆ ಗ್ರಾಮದ ಗುರುಕಿರಣ್ (27) ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆ(Mcggan hospital)ಗೆ ದಾಖಲಿಸಲಾಗಿದೆ.
ಅಕಿಫ್ ಮತ್ತು ಚಾಂಪ್‌ಪೀರ್ ಒಂದೇ ಬೈಕ್‌ನಲ್ಲಿ ಆಯನೂರಿನಿಂದ ಹಾರನಹಳ್ಳಿ ಕಡೆಗೆ ತೆರಳುತ್ತಿದ್ದರು. ಗುರುಕಿರಣ್ ಚಾಮೇನಹಳ್ಳಿಯಿಂದ ಆಯನೂರು ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ. ವೇಗವಾಗಿ ಬಂದ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ತಕ್ಷಣ ಅಕಿಫ್ ಮತ್ತು ಚಾಂದ್ ಪೀರ್ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಅತೀ ವೇಗವಾಗಿ ಬಂದ ಅಪರಿಚಿತ ವಾಹನ ರಸ್ತೆಯ ಮೇಲೆ ಬಿದ್ದಿದ್ದ ಇಬ್ಬರ ಮೇಲೆ ಹರಿದು ಹೋಗಿದೆ.
ಮೃತ ಯುವಕನೊಬ್ಬನ ಮೈಮೇಲೆ ವಾಹನದ ಟಯರ್ ಮಾರ್ಕ್‌ಗಳು ಅಚ್ಚಾಗಿ ಬಿದ್ದಿವೆ. ಮತ್ತೊಂದು ಬೈಕ್‌ನಲ್ಲಿದ್ದ ಗುರುಕಿರಣ್ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಕುಂಸಿ ಠಾಣೆ(kumsi station)ಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಭೇಟಿ, ಸಾಂತ್ವಾನ
ವಿಷಯ ತಿಳಿದ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅವರು ಮಲ್ಲಾಪುರ ಗ್ರಾಮಕ್ಕೆ ತೆರಳಿ ಮೃತರ ಅಂತಿಮ ದರ್ಶನ ಪಡೆದರು. ಬಳಿಕ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.