- ಶಿವಮೊಗ್ಗದಿಂದ ಚೆನ್ನೈ ಹಾಗೂ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ಕೊನೆ ಕ್ಷಣದಲ್ಲಿ ರದ್ದು
- ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪರದಾಟ ನಡೆಸಿದ ನೂರಾರು ಪ್ರಯಾಣಿಕರು
- ತಾಂತ್ರಿಕ ಕಾರಣಗಳಿಂದ ವಿಮಾನ ಸಂಚಾರ ರದ್ದಾಗಿದೆ ಎಂದ ಸ್ಪೈಸ್‌ಜೆಟ್ ಹಾಗೂ ಇಂಡಿಗೋ
ಶಿವಮೊಗ್ಗ: ಶಿವಮೊಗ್ಗದಿಂದ ಚೆನ್ನೈ ಹಾಗೂ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ(Flight) ಸಂಚಾರ ಕೊನೆ ಕ್ಷಣದಲ್ಲಿ ರದ್ದಾದ ಕಾರಣ ನೂರಾರು ಪ್ರಯಾಣಿಕರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪರದಾಟ ನಡೆಸಿದರು.
ಹೈದರಾಬಾದ್‌ನಿಂದ ಶಿವಮೊಗ್ಗ-ಶಿವಮೊಗ್ಗದಿಂದ ಚೆನ್ನೈಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ಮತ್ತು ಬೆಂಗಳೂರಿನಿಂದ ಶಿವಮೊಗ್ಗ-ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೂ ವಿಮಾನ ಸಂಚಾರ ತಾಂತ್ರಿಕ ಕಾರಣ(Technical reason)ಗಳಿಂದ ರದ್ದಾದವು.
ಹೈದರಾಬಾದ್(Hyderabad)ನಿಂದ ಬೆಳಗ್ಗೆ 9.30ಕ್ಕೆ ಹೊರಟು ಶಿವಮೊಗ್ಗಕ್ಕೆ ಬರಬೇಕಿದ್ದ ಸ್ಪೈಸ್‌ಜೆಟ್ ಹೈದರಾಬಾದ್‌ನಲ್ಲೇ ರದ್ದಾಯಿತು. ಇದರಿಂದ ಮಧ್ಯಾಹ್ನ 12.30ಕ್ಕೆ ಶಿವಮೊಗ್ಗದಿಂದ ಚೆನ್ನೈಗೆ ತೆರಳಬೇಕಿದ್ದ 50ಕ್ಕೂ ಅಧಿಕ ಪ್ರಯಾಣಿಕರು ಸಕಾಲಕ್ಕೆ ತೆರಳಲಾಗದೇ ಪರದಾಡಿದರು. ಕೊನೆ ಕ್ಷಣದಲ್ಲಿ ರದ್ದಾದ ಮಾಹಿತಿ ತಿಳಿಸಿದ ವಿಮಾನಯಾನ ಸಂಸ್ಥೆ ವಿರುದ್ಧ ಕಿಡಿಕಾರಿದರು.
ಶಿವಮೊಗ್ಗ-ಚೆನ್ನೈ ನಡುವೆ ವಿಮಾನ ರದ್ದಾದ ಕಾರಣಕ್ಕೆ ಸ್ಪೈಸ್‌ಜೆಟ್(SpiceJet) ಸಂಸ್ಥೆಯು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ಬಸ್(Private bus) ಅನ್ನು ಬುಕ್ ಮಾಡಿತ್ತು. ಆದರೆ ದೂರದ ಪ್ರಯಾಣಕ್ಕಾಗಿ ಮಾಡಿದ್ದ ಬಸ್ ನೋಡಿ ಪ್ರಯಾಣಿಕರು ದಂಗಾದರು.
ಬೆಂಗಳೂರಿನಲ್ಲೇ ರದ್ದಾದ ಇಂಡಿಗೋ ವಿಮಾನ: ರಾಜಧಾನಿಯಿಂದ ಶಿವಮೊಗ್ಗಕ್ಕೆ ಶುಕ್ರವಾರ ಮಧ್ಯಾಹ್ನ ಬರಬೇಕಿದ್ದ ಇಂಡಿಗೋ ವಿಮಾನ ಕೂಡ ಬೆಂಗಳೂರಿನಲ್ಲೇ ರದ್ದಾಯಿತು. ಹಾಗಾಗಿ ಬೆಂಗಳೂರಿಗೆ ತೆರಳಲು ಸೋಗಾನೆಯ ವಿಮಾನ ನಿಲ್ದಾಣಕ್ಕೆ ಬಂದಿದ್ದ 50ಕ್ಕೂ ಅಧಿಕ ಪ್ರಯಾಣಿಕರು ವಿಮಾನಯಾನ ಸಂಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಾಂತ್ರಿಕ ಕಾರಣಗಳಿಂದ ವಿಮಾನ ಸಂಚಾರ ರದ್ದಾಗಿದೆ ಎಂದು ಸ್ಪೈಸ್‌ಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ತಿಳಿಸಿವೆ.