ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಇಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದರು. 
ಶಿವಮೊಗ್ಗ

ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಇಬ್ಬರ ಬಂಧನ | Chain theft

ಶಿವಮೊಗ್ಗ: ಹೊಳಲೂರು ಸರ್ಕಾರಿ ಆಸ್ಪತ್ರೆ ಹತ್ತಿರ ಪಾದಚಾರಿ ಮಹಿಳೆಯ ಮಾಂಗಲ್ಯಸರ(Mangalyasara) ಕಿತ್ತು ಪರಾರಿಯಾಗಿದ್ದ ಇಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, 2.50 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ಜಪ್ತಿ ಮಾಡಿದ್ದಾರೆ.
ಸಿ.ಮನೋಜ್ ಶಿರಮಣ ಮತ್ತು ವಿಜಯಕುಮಾರ್ ಬಂಧಿತರು. ಕಳೆದ ಶನಿವಾರ ಬೆಳಗ್ಗೆ ಹೊಳಲೂರು ಗ್ರಾಮ(Holalur village)ದ ಮಂಗಳಾ ಎಂಬುವರು ಸ್ನೇಹಿತೆ ಶೀಲಾ ಎಂಬುವರ ಜತೆ ಹೊಳಲೂರು ಗ್ರಾಮ ಪಂಚಾಯತ್‌ನ ಮಹಿಳಾ ಸಂಘದ ಸಭೆಗೆ ತೆರಳುತ್ತಿದ್ದರು. ಈ ವೇಳೆ ಹೊಳಲೂರು ಸರ್ಕಾರಿ ಆಸ್ಪತ್ರೆಯ ಹತ್ತಿರ ಬೈಕ್‌ನಲ್ಲಿ ಬಂದ ಮನೋಜ್ ಮತ್ತು ವಿಜಯಕುಮಾರ್, ಮಂಗಳಾ ಅವರ ಕೊರಳಲಿದ್ದ 35 ಗ್ರಾಂನ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು.
ಡಿವೈಎಸ್‌ಪಿ(DYSP) ಟಿ.ಸಂಜೀವ್‌ಕುಮಾರ್ ಮಾರ್ಗದರ್ಶನದಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ, ಸಿಬ್ಬಂದಿಗಳಾದ ವಿಜಯ, ಸಿ.ಕಲ್ಲನಗೌಡ, ಕುಮಾರ್ ಬಣಕಾರ್, ದಾಕ್ಷಾಯಣಿ, ರಾಘವೇಂದ್ರ, ಶ್ರೀಕಾಂತ್, ಕಾಶಿನಾಥ, ಕವನ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂಧ 18 ಗ್ರಾಂ ಮಾಂಗಲ್ಯ ಸರ, 40 ಸಾವಿರ ರೂ. ಮೌಲ್ಯದ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.