ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಚಿನ್ನಾಭರಣ ಜಪ್ತಿ ಮಾಡಿದ ವಿನೋಬನಗರ ಠಾಣೆ ಪೊಲೀಸರು. ಇನ್‌ಸ್ಪೆಕ್ಟರ್ ಸಂತೋಷಕುಮರ್, ಪಿಎಸ್‌ಐ ತಿರುಮಲೇಶ್, ಸಿಬ್ಬಂದಿ ಕೆ.ಆರ್.ರಾಜು, ಮನುಶಂಕರ, ಎಸ್.ಜಿ.ಮಲ್ಲಪ್ಪ, ಎನ್.ಕೆ.ಅರುಣಕುಮಾರ್ ಇದ್ದರು. 
ಶಿವಮೊಗ್ಗ

ದರೋಡೆ, ಸರ ಕಿತ್ತು ಪರಾರಿಯಾಗಿದ್ದ ಇಬ್ಬರ ಬಂಧನ | Vinobanagar Police Station

ಪ್ರಮುಖ ಮುಖ್ಯಾಂಶಗಳು

  • ಪ್ರತ್ಯೇಕ ಪ್ರಕರಣದಲ್ಲಿ 2.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
  • ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರ ಕಾರ್ಯಾಚರಣೆ
  • ಬೊಮ್ಮನಕಟ್ಟೆ ರಸ್ತೆಯ ಸಚಿನ್, ಭುವನೇಶ್ವರ ಬಂಧಿತರು
ಶಿವಮೊಗ್ಗ: ನವುಲೆ ಬಳಿ ಪಾದಚಾರಿ ಅಡ್ಡಗಟ್ಟಿ ದರೋಡೆ(robbery) ಮಾಡಿದ್ದ ಹಾಗೂ ಮಹಿಳೆಯ ಕೊರಳಲಿದ್ದ ಬಂಗಾರದ ಸರ ಕಿತ್ತು(chain theft) ಪರಾರಿಯಾಗಿದ್ದ ಇಬ್ಬರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದು, 2.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ಮಾರುತಿ ಬಡಾವಣೆ, ಹಾಲಿ ನವುಲೆ ಬೊಮ್ಮನಕಟ್ಟೆ ರಸ್ತೆ ನಿವಾಸಿ ಸಚಿನ್ ಅಲಿಯಾಸ್ ಶಾಡೋ (27) ಹಾಗೂ ಬೊಮ್ಮನಕಟ್ಟೆ ಎಂಬಿಎಸ್ ಲೇಔಟ್‌ನ, ಹಾಲಿ ಹೊಸಮನೆ ಸ್ವಾಮಿ ವಿವೇಕಾನಂದ ರಸ್ತೆಯ ನಿವಾಸಿ ಭುವನೇಶ್ವರ ಅಲಿಯಾಸ್ ಭುವನ್(26) ಬಂಧಿತರು.
ಕಳೆದ ಅ.14ರಂದು ಬೆಳಗಿನ ಜಾವ 4ರ ಸುಮಾರಿಗೆ ನವುಲೆ ಶಿವಬಸವನಗರ ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಅಡ್ಡಗಟ್ಟಿದ್ದ ಸಚಿನ್ ಅಲಿಯಾಸ್ ಶಾಡೋ ಬಂಗಾರದ ಉಂಗುರ ಮತ್ತು ನಗದು ದರೋಡೆ ಮಾಡಿ ಪರಾರಿಯಾಗಿದ್ದ.

ಬಾಡಿಗೆ ಮನೆ ನೆಪದಲ್ಲಿ ಸರ ಕಿತ್ತು ಪರಾರಿ

ಮತ್ತೊಂದು ಪ್ರಕರಣದಲ್ಲಿ ಅ.25ರಂದು ಬೆಳಗ್ಗೆ 8ರ ಸುಮಾರಿಗೆ ಆಳಮಂಗಳ ಮಂದಿರ ರಸ್ತೆಯ ಕಾಳಿಕಾಂಭ ದೇವಸ್ಥಾನದ ಪಕ್ಕದ ಮನೆಯ ಮಹಿಳೆ ರಂಗೋಲಿ ಹಾಕುತ್ತಿದ್ದಾಗ ಅಲ್ಲಿಗೆ ಬಂದಿದ್ದ ಭುವನೇಶ್ವರ್ ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೈಕ್ ನಿಲ್ಲಿಸಿದ್ದ. ಈ ವೇಳೆ ಕುಡಿಯುವುದಕ್ಕೆ ನೀರು ಕೇಳಿದ್ದ. ನೀರು ಕುಡಿದ ಮೇಲೆ ಲೋಟ ಕೊಡುವಾಗ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ.
ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ವಿನೋಬನಗರ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವ, ಡಿವೈಎಸ್‌ಪಿ ಟಿ.ಸಂಜೀವ್‌ಕುಮಾರ್ ಮಾರ್ಗದರ್ಶನ, ಇನ್‌ಸ್ಪೆಕ್ಟರ್ ಡಿ.ಕೆ.ಸಂತೋಷಕುಮಾರ್ ಉಸ್ತುವಾರಿಯಲ್ಲಿ ಪಿಎಸ್‌ಐ ಜಿ.ತಿರುಮಲೇಶ್ ಮತ್ತು ಸಿಬ್ಬಂದಿಗಳಾದ ಕೆ.ಆರ್.ರಾಜು, ಮನುಶಂಕರ, ಎಸ್.ಜಿ.ಮಲ್ಲಪ್ಪ, ಎನ್.ಕೆ.ಅರುಣಕುಮಾರ್ ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದೆ.
ದರೋಡೆ ಪ್ರಕರಣದಲ್ಲಿ ಸಚಿನ್‌ನನ್ನು ಬಂಧಿಸಿ ಆತನಿಂದ 55 ಸಾವಿರ ರೂ. ಮೌಲ್ಯದ 7.90 ಗ್ರಾಂ ಬಂಗಾರದ ಸರ, 60 ಸಾವಿರ ರೂ. ಮೌಲ್ಯದ ಬೈಕ್, ಸರ ಕಿತ್ತು ಪರಾರಿಯಾದ ಪ್ರಕರಣದಲ್ಲಿ ಭುವನೇಶ್ವರ್ ಅವರನ್ನು ಬಂಧಿಸಿ, 1.30 ಲಕ್ಷ ರೂ. ಮೌಲ್ಯದ 13 ಗ್ರಾಂ ಬಂಗಾರದ ಸರ ಮತ್ತು ಗುಂಡುಗಳು, 30 ಸಾವಿರ ರೂ. ಮೌಲ್ಯದ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.