ಆನವಟ್ಟಿ ಸಮೀಪದ ಕಮನವಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಎಂ.ದಿನೇಶ್, ಭರಮಪ್ಪ ಗೌಡ ಪಾಟೀಲ್, ರುದ್ರಪ್ಪ ಕಡ್ಲೇರ್, ಸುಧಾ ಶಿವಪ್ರಸಾದ್, ಜಯಂತಿ ಇತರರಿದ್ದರು. 
ಶಿವಮೊಗ್ಗ

ದೇವರನ್ನು ನಂಬಿದರೆ ಸಮಸ್ಯೆಗೆ ಪರಿಹಾರ | Religious programe

ಆನವಟ್ಟಿ: ಮಾನವ ಲೌಕಿಕ ಜೀವನದಲ್ಲಿ ಅಧ್ಯಾತ್ಮಕ್ಕೂ ಜಾಗ ನೀಡಬೇಕು. ಮಾನವನ ಸಕಲ ಸಮಸ್ಯೆಗಳಿಗೆ ದೇವರಲ್ಲಿ ಪರಿಹಾರವಿದೆ ಎಂದು ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಆನವಟ್ಟಿ ಸಮೀಪದ ಕಮನವಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ತತ್ತೂರು ವಲಯದಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಜನರು ಸ್ವಾರ್ಥ ಜೀವನದಿಂದಾಗಿ ದೇವರನ್ನು ನಂಬುವಂತಹ ಸ್ಥಿತಿಯಲ್ಲಿ ಇಲ್ಲ. ಮನುಕುಲಕ್ಕೆ ದೇವರ ಆಶೀರ್ವಾದ ಅಗತ್ಯ. ಆದ್ದರಿಂದ ನಾವು ದೇವರ ಮೇಲಿನ ದೃಢವಾದ ನಂಬಿಕೆ ಹಾಗೂ ವಿಶ್ವಾಸ ಇಡಬೇಕಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಜನರ ಒಳಿತಿಗಾಗಿ ಹಲವುಯೋಜನೆಗಳನ್ನು ತಂದಿದ್ದಾರೆ. ಸರ್ಕಾರ ಮಾಡುವಂತಹ ಕೆಲಸಗಳನ್ನು ಧರ್ಮಸ್ಥಳ ಟ್ರಸ್ಟ್ ಮುಖಾಂತರ ಜನರಿಗೆ ತಲುಪಿಸಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿವೆ ಎಂದು ಅಭಿಪ್ರಾಯಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಂ.ದಿನೇಶ್ ಮಾತನಾಡಿ, ನಾವು ನಮ್ಮ ಸಂಸ್ಕೃತಿಯಿಂದಲೇ ನಮ್ಮ ಬದುಕನ್ನು ಹಸನಾಗಿಸಲು ಸಾಧ್ಯವಿದೆ. ಸಂಸ್ಥೆಯು ತಮ್ಮ ಸದಸ್ಯರೊಂದಿಗೆ ಕೇವಲ ವ್ಯಾವಹಾರಿಕ ಸಂಬಂಧ ಇಟ್ಟುಕೊಳ್ಳದೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಸ್ಕಾರ ಬೆಳೆಸುವ ಉದ್ದೇಶ ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳ ಯೋಜನೆಯ ಭರಮಪ್ಪ ಗೌಡ ಪಾಟೀಲ್ ಮಾತನಾಡಿ, ರೈತರಿಗಾಗಿ ಕೃಷಿ, ಪಂಪ್ ಸೆಟ್, ವಾಹನ ಸಾಲ, ಗೃಹೋಪಯೋಗಿ ಉಪಕರಣಗಳ ಸಾಲ, ಹೈನುಗಾರಿಕೆ ಸಾಲ ಸೇರಿ ಅನೇಕ ರೀತಿಯ ಸಾಲ ನೀಡುತ್ತಿದೆ. ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮದ ಮುಖಂಡರಾದ ರುದ್ರಪ್ಪ ಕಡ್ಲೇರ, ಸುಧಾ ಶಿವಪ್ರಸಾದ್, ಉಮೇಶ್ ಉಡುಗಣಿ, ಯೋಜನಾಧಿಕಾರಿ ಜಯಂತಿ, ವಲಯ ಅಧಿಕಾರಿ ಉಮೇಶ್, ಬಾಬು ಸಾಬ್, ಮಂಜಪ್ಪ ಹಿತ್ಲಮನಿ, ಸುರೇಶ್ ಸುಣಗಾರ ಇತರರಿದ್ದರು.