ವೃದ್ಧೆ ಗಿರಿಜಮ್ಮ ಎಂಬುವರ ಮನೆ ಎದುರು ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವುದು.
ಭದ್ರಾವತಿ: ನಗರಸಭೆ ವ್ಯಾಪ್ತಿಯ ಕಡದಕಟ್ಟೆ ವಾರ್ಡ್‌ನ ಲಿಂಗಾಯತರ ಬೀದಿಯಲ್ಲಿ ಚರಂಡಿ ಕಾಮಗಾರಿ ಅವೈಜ್ಞಾನಿಕ ಹಾಗೂ ಅಪೂರ್ಣ ಆಗಿರುವುದರಿಂದ ಸಾರ್ವಜನಿಕರು ಇನ್ನಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.
6 ಅಡಿ ಅಗಲ ಗುಂಡಿ ತೆಗೆದು 2 ಅಡಿಯಲ್ಲಿ ಮಾತ್ರ ಚರಂಡಿ ನಿರ್ಮಿಸಿ ಉಳಿದ ಎರಡೂ ಭಾಗದಲ್ಲಿ ಮಣ್ಣು ಮುಚ್ಚದೆ ಹಾಗೆಯೇ ಬಿಡಲಾಗಿದೆ. ಕೆಲವೇ ದಿನಗಳಲ್ಲಿ ಮಳೆಗಾಲ ಹಾಗೂ ಶಾಲೆ, ಅಂಗನವಾಡಿಗಳು ಆರಂಭವಾಗುತ್ತಿವೆ. ಮಕ್ಕಳು ಶಾಲೆಗೆ ಹೋಗಲು ಅಪೂರ್ಣ ಕಾಮಗಾರಿಯಿಂದ ತೊಂದರೆಯಾಗಿದೆ. ಚರಂಡಿ ದಾಟಲು ಕಲ್ಲುಗಳನ್ನು ಅಡ್ಡಲಾಗಿ ಹಾಕದೆ, ಚರಂಡಿ ಸುತ್ತಲಿನ ಗುಂಡಿಗೆ ಮಣ್ಣು ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ಸಂಚಾರ ದುಸ್ತರವಾಗಿದೆ.
ಚರಂಡಿಯುದ್ದಕ್ಕೂ ತೆಗೆದಿರುವ ಗುಂಡಿಗೆ ಮಣ್ಣು ಹಾಕಿ ರಸ್ತೆ ಸಮನಾಗಿಸಿ ಎಂದು ನಗರಸಭೆ ಪೌರಾಯುಕ್ತರಿಗೆ ಹಾಗೂ ಇಂಜಿನಿಯರ್‌ಗೆ ಕರೆ ಮಾಡಿ ಇಲ್ಲಿನ ನಿವಾಸಿಗಳು ಬೇಸತ್ತುಹೋಗಿದ್ದಾರೆ. ಯಾರ ಬಳಿ ನಮ್ಮ ಸಮಸ್ಯೆ ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ ಸ್ಥಳೀಯರು ಅಲವತ್ತುಕೊಳ್ಳುತ್ತಿದ್ದಾರೆ.
ಲಿಂಗಾಯತರ ಬೀದಿಯಲ್ಲಿರುವ ವೃದ್ಧೆ ಗಿರಿಜಮ್ಮ ಮನೆಯಲ್ಲಿ ಒಬ್ಬರೇ ಇದ್ದು ಆಸರೆಗೆ ಯಾರೂ ಇಲ್ಲ. ಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮನೆಯ ಮುಂದಿನ ಕಲ್ಲುಗಳನ್ನು ಕಿತ್ತು ಹಾಕಲಾಗಿದೆ. ಮನೆಯ ಮುಂದಿನ ಚರಂಡಿ ದಾಟಲು ಕಲ್ಲುಗಳ ಆಶ್ರಯವಿಲ್ಲದೆ ಅವರಿಗೆ ರಸ್ತೆ ದಾಟಲು ಸಾಧ್ಯವಿಲ್ಲ. ಕಣ್ಣು ಕಾಣದ ವೃದ್ಧೆಗೆ ಅನುಕಂಪದ ಮೇಲೆ ಮನೆಯ ಮುಂದೆ ಕಲ್ಲುಗಳನ್ನು ಜೋಡಿಸಿಕೊಡಿ. ರಸ್ತೆ ದಾಟಲು ಅನುಕೂಲವಾಗುತ್ತದೆ ಎಂದು ಚರಂಡಿ ಕಾಮಗಾರಿ ಮಾಡುವ ಸಂದರ್ಭದಲ್ಲಿಯೇ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆಗ ಒಪ್ಪಿಕೊಂಡಿದ್ದ ಇಂಜಿನಿಯರ್ ಎರಡು ತಿಂಗಳಾದರೂ ಹಾಗೆಯೇ ಬಿಟ್ಟಿದ್ದಾರೆ. ಅವರ ಮನೆಯ ಎಡಭಾಗಕ್ಕೆ ಪಕ್ಕದ ಮನೆಯ ಕಾಂಪೌಂಡ್ ಅಡ್ಡ ಬಂದರೆ, ಬಲಭಾಗದಲ್ಲಿ ಹಿಂದಿನ ಮನೆಯವರು ಸಂಚರಿಸಲು ಓಣಿ ಮಾಡಿಕೊಂಡಿದ್ದು ಕೆಳಭಾಗದಲ್ಲಿರುವ ಓಣಿಗೆ ಅಂಧ ಮಹಿಳೆ ಇಳಿಯಲು ಸಾಧ್ಯವಾಗದ ಸ್ಥಿತಿಯಿದೆ.