ಕಸ್ತೂರಿ ರಂಗನ್ ವರದಿ ವಿರೋಧಿಸಿ ತುಮರಿಯಲ್ಲಿ ನಡೆದ ಸಭೆಯಲ್ಲಿ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಮಾತನಾಡಿದರು. ಅರುಣ್ ಕರೂರು, ಅ.ನಾ.ಚಂದ್ರಶೇಖರ ಇತರರಿದ್ದರು.
ತುಮರಿ (ಸಾಗರ ತಾ.): ಮಲೆನಾಡಿನ ರೈತರಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿಗಳ ವಿಶ್ವಾಸ ಪಡೆಯದೆ ಏಕಪಕ್ಷೀಯವಾಗಿ ವರದಿ ಜಾರಿಗೆ ಮುಂದಾಗಿರುವುದು ಕೇಂದ್ರ ಸರ್ಕಾರದ ಅಕ್ಷಮ್ಯ ಅಪರಾಧ ಎಂದು ಮಲೆನಾಡು ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ ಅಸಮಾಧಾನ ವ್ಯಕ್ತಪಡಿಸಿದರು.
ತುಮರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟ ರೂಪಿಸುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವರದಿ ಜಾರಿಯಿಂದ ಶರಾವತಿ ಮುಳುಗಡೆ ಸಂತ್ರಸ್ತರು, ತುಮರಿ ಭಾಗದ ಜನರು ಮತ್ತು ಕೆಪಿಸಿ ಸಾಗುವಳಿದಾರರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದ 44,448 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಜಾರಿಗೆ ತರಲು ಹುನ್ನಾರ ಮಾಡಲಾಗುತ್ತಿದೆ. ರೈತರು ಯಾವ ಬೆಳೆ ಬೆಳೆಯಬೇಕು, ಹೇಗೆ ಕೃಷಿ ಮಾಡಬೇಕು ಎಂಬುದನ್ನು ನಿರ್ಣಯಿಸುವುದು ಹಾಗೂ ಸಾವಯವ ಕೃಷಿಯನ್ನೇ ಮಾಡಬೇಕು ಎಂದು ಒತ್ತಾಯಿಸುವುದು ತೀವ್ರ ಖಂಡನೀಯ ಎಂದರು.
ಗ್ರಾಮಸಭೆಗಳನ್ನು ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಆದರೆ ಯಾವುದೇ ಮಾಹಿತಿ ನೀಡದೆ ವರದಿ ಹೇರಲಾಗುತ್ತಿದೆ. ಭೂಸ್ವಾಧೀನ ಕಾಯ್ದೆ ಅನ್ವಯ ಸರ್ಕಾರ ಸಾರ್ವಜನಿಕ ಉದ್ದೇಶಕ್ಕಾಗಿ ಪಡೆದ ಭೂಮಿಯನ್ನು 5 ವರ್ಷದೊಳಗೆ ಬಳಸಿಕೊಳ್ಳದಿದ್ದರೆ ಅದನ್ನು ಮೂಲ ವಾರಸುದಾರರಿಗೆ ಅಥವಾ ಸಾಗುವಳಿದಾರರಿಗೆ ಹಿಂದಿರುಗಿಸಬೇಕು. ಲಿಂಗನಮಕ್ಕಿ ಡ್ಯಾಂ ನಿರ್ಮಾಣದ ವೇಳೆ 58 ಸಾವಿರ ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಜಮೀನನ್ನು ತಕ್ಷಣ ರೈತರಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿ ಸಂಚಾಲಕ ಅರುಣ್ ಕರೂರು ಮಾತನಾಡಿ, ಅರಣ್ಯ ಸ್ವರೂಪದ ವರದಿ ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿ 2 ವರ್ಷ ಕಳೆದಿದ್ದರೂ ಸೂಕ್ತ ಕ್ರಮವಾಗಿಲ್ಲ. ಸರ್ಕಾರಗಳು ತಕ್ಷಣವೇ ಮಲೆನಾಡಿಗರ ನೋವಿಗೆ ಸ್ಪಂದಿಸಿ, ಕಸ್ತೂರಿ ರಂಗನ್ ವರದಿಯನ್ನು ಕೈಬಿಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ರೂಪಿಸಲಾಗುವುದು ಎಂದರು.
ಸ್ಥಳೀಯ ನಿವಾಸಿಗಳಾದ ಅ.ನಾ.ಚಂದ್ರಶೇಖರ, ಮಂಜಪ್ಪ, ಗೋವರ್ಧನ ಇತರರಿದ್ದರು.