ತುಮರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಡಾ. ಬೆನಕಪ್ರಸಾದ್ ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಜಿ.ಟಿ.ಸತ್ಯನಾರಾಯಣ, ಗಣೇಶ್ ಜಾಕಿ, ಸಂತೋಷ್ಕುಮಾರ್ ಶೆಟ್ಟಿ ಇತರರಿದ್ದರು.
- ಸಾರ್ವಜನಿಕ ಕುಂದುಕೊರತೆಗಳ ಸಭೆ
- ಕರೂರು ಹೋಬಳಿ ಗ್ರಾಮಸ್ಥರು ಮನವಿ
- ತುಮರಿಯನ್ನು ಗ್ರಾಮಾಂತರ ಠಾಣೆಗೆ ಸೇರಿಸಿ
ತುಮರಿ: ಶರಾವತಿ ಹಿನ್ನೀರಿನ ಕೆಲವು ಗ್ರಾಮಗಳನ್ನು ಸಾಗರ ಗ್ರಾಮಾಂತರ ಠಾಣೆಯ ವ್ಯಾಪ್ತಿಗೆ ಸೇರಿಸಬೇಕು ಎಂದು ತುಮರಿ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಎಎಸ್ಪಿ ಡಾ. ಬೆನಕಪ್ರಸಾದ್ ಅವರಿಗೆ ಕರೂರು ಹೋಬಳಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಸಾಗರ ತಾಲೂಕಿನ ಕರೂರು ಹೋಬಳಿಯು ಪ್ರಸ್ತುತ ಕಾರ್ಗಲ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿದೆ. ಇದರಿಂದ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ಸುಮಾರು 70 ಕಿ.ಮೀ ದೂರ ಕ್ರಮಿಸಬೇಕು. ರಾತ್ರಿ ವೇಳೆಯಲ್ಲಿ ತುರ್ತು ಸೇವೆಗಳನ್ನು ಪಡೆದುಕೊಳ್ಳಲು ಇದರಿಂದ ತೀವ್ರ ಕಷ್ಟವಾಗುತ್ತಿದೆ ಎಂದು ಜನರು ಸಮಸ್ಯೆಗಳನ್ನು ವಿವರಿಸಿದರು.
ಕಾರ್ಗಲ್ ಠಾಣೆಯ ವ್ಯಾಪ್ತಿ ವಿಸ್ತಾರವಾಗಿದೆ. 485ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿರುವುದರಿಂದ 70 ಕಿ.ಮೀ ದೂರದ ಠಾಣೆಯಿಂದ ಕಾನೂನು ನಿಯಂತ್ರಣ ಮತ್ತು ತುರ್ತು ಸೇವೆ ಒದಗಿಸುವುದು ಇಲಾಖೆಗೂ ತಡವಾಗುತ್ತಿದೆ. ಆದರೆ ಈಗ ಕಾಲ ಬದಲಾಗಿದೆ ಎಂದು ವಿವರಿಸಿದರು.
ಕರೂರು ಹೋಬಳಿ ವ್ಯಾಪ್ತಿಯ ತುಮರಿ, ಕುದರೂರು, ಬ್ಯಾಕೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಸಬೇಕು. ಆ ಮೂಲಕ ಸ್ಥಳಿಯರಿಗೆ ತ್ವರಿತ ಕಾನೂನು ಸೇವೆಗಳು ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಜಿ.ಟಿ.ಸತ್ಯನಾರಾಯಣ, ಗಣೇಶ್ ಜಾಕಿ, ಸಂತೋಷ್ಕುಮಾರ್ ಶೆಟ್ಟಿ, ಭರತ್ಕುಮಾರ್, ಲಿಲ್ಲಿ ಮನೋಹರ್, ಮಹೇಶ್, ಮಂಜುನಾಥ್, ಲೋಕೇಶ್ ಇದ್ದರು.