ಅಂಗನವಾಡಿ ಕಾರ್ಯಕರ್ತೆಯರಿಗೆ ಚಟುವಟಿಕೆ ಆಧಾರಿತ ಶಿಕ್ಷಣ ಕುರಿತು ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿರುವುದು.
- ಕಲಿಕಾ ಮಟ್ಟ ಹೆಚ್ಚಳಕ್ಕೆ ನೆರವು
- ಕೈಜೋಡಿಸಿದ ಟಾಟಾ ಟ್ರಸ್ಟ್
- ಪ್ರಾಯೋಗಿಕವಾಗಿ ಕಲಿಕೆಗೆ ಒತ್ತು
- ಜಿಲ್ಲೆಯ ಎಲ್ಲ 2,563 ಕೇಂದ್ರಗಳಿಗೆ ವಿಸ್ತರಣೆ
- 2.80 ಕೋಟಿ ರೂ. ವ್ಯಯಿಸಲಿದೆ ಟ್ರಸ್ಟ್
ಜಿಲ್ಲೆಯ ಎಲ್ಲ 2,563 ಅಂಗನವಾಡಿ (anganavadi) ಕೇಂದ್ರಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಜಿಲ್ಲಾಡಳಿತ ವಿನೂತನ ಹೆಜ್ಜೆ ಇರಿಸಿದೆ. ಇದಕ್ಕಾಗಿ ಟಾಟಾ (tata) ಕಲಿಕಾ ಟ್ರಸ್ಟ್ ಕೂಡಾ ಕೈ ಜೋಡಿಸಿದೆ. ಈ ಕಾರ್ಯಕ್ಕಾಗಿ ಟ್ರಸ್ಟ್ 2.80 ಕೋಟಿ ರೂ. ಖರ್ಚು ಮಾಡಲಿದೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊದಲ ಹಂತದ ತರಬೇತಿ (training) ಪೂರ್ಣವಾಗಿದೆ.
ಅಂಗನವಾಡಿ ಮಕ್ಕಳು ಎಲ್ಲವನ್ನೂ ಪ್ರಾಯೋಗಿಕವಾಗಿ ಕಲಿಯಬೇಕು. ಕಲಿಕಾ ಪ್ರಕ್ರಿಯೆ ಮಕ್ಕಳ ಪಾಲಿಗೆ ಉಲ್ಲಾಸದಾಯಕವಾಗಿರಬೇಕು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಇದುವರೆಗಿನ ಸಿದ್ಧ ಮಾದರಿ ಬದಲಾಗಿ ವಿನೂತನ ಕಲಿಕಾ ಪ್ರಕ್ರಿಯೆಯೇ ಯೋಜನೆಯ ಮುಖ್ಯ ಉದ್ದೇಶವಾಗಿರಲಿದೆ.
ಪ್ರಾಥಮಿಕ ಹಂತದಲ್ಲಿರುವ ನಲಿ-ಕಲಿ ಶಿಕ್ಷಣ ವ್ಯವಸ್ಥೆಗೆ ಬುನಾದಿಯಾಗಿ ಈ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಮಾಡಲಿದ್ದಾರೆ. ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗೂ ತರಬೇತಿ ನೀಡಲಾಗುತ್ತಿದೆ.
ಇದು ಒಟ್ಟು 9 ಹಂತಗಳ ತರಬೇತಿ. ವರ್ಷಕ್ಕೆ ಮೂರು ತರಬೇತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ 85 ಮಾದರಿ ಅಂಗನವಾಡಿಗಳನ್ನು ಗುರುತಿಸಲಾಗಿದೆ. ಅಂತಹ ಕಡೆಗಳಲ್ಲಿ ಈಗಾಗಲೇ ಆರಂಭಿಸಲಾಗಿದೆ. ಈ ಅಂಗನವಾಡಿಗಳ ಸನಿಹದಲ್ಲಿರುವ ಕೇಂದ್ರದ ಕಾರ್ಯಕರ್ತೆಯರನ್ನು ಇಲ್ಲಿಗೆ ಕರೆಯಿಸಿ ತರಬೇತಿ ನೀಡಲಾಗುವುದು.
ಸಿಒಇ ಆಸಕ್ತಿಯಿಂದ ಒಪ್ಪಂದ
ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ ಟಾಟಾ ಕಲಿಕಾ ಟ್ರಸ್ಟ್ ಇಂಥದ್ದೊಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿತ್ತು. ಅಲ್ಲಿ ಯಶಸ್ವಿ ಆಗಿರುವುದನ್ನು ಗಮನಿಸಿ ಜಿಪಂ ಸಿಇಒ ಎನ್.ಹೇಮಂತ್ ವಿಶೇಷ ಆಸಕ್ತಿ ವಹಿಸಿ ಟಾಟಾ ಟ್ರಸ್ಟ್ ಜತೆಗೆ ಮಾತುಕತೆ ನಡೆಸಿ ಶಿವಮೊಗ್ಗ ಜಿಲ್ಲೆಯಲ್ಲೂ ಕಾರ್ಯಕ್ರಮ ಅನುಷ್ಠಾನ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದರಲ್ಲಿ ಸರ್ಕಾರದ ಯಾವುದೇ ಅನುದಾನ ಇರುವುದಿಲ್ಲ. ಅಂತಿಮವಾಗಿ ಬೋಧನಾ-ಕಲಿಕಾ ಉಪಕರಣಗಳನ್ನು ಪೂರೈಕೆ ಮಾಡುವ ಜತೆಗೆ ಅಂಗನವಾಡಿ ಕಾರ್ಯಕರ್ತೆಯರ ತರಬೇತಿಗೆ ತಗುಲುವ ವೆಚ್ಚವನ್ನು ಟ್ರಸ್ಟ್ ಭರಿಸಲಿದೆ. ಇದಕ್ಕಾಗಿ ಸುಮಾರು 2.80 ಕೋಟಿ ರೂ. ಖರ್ಚು ಮಾಡಲಿದೆ. ಈ ಸಂಬಂಧ ಟ್ರಸ್ಟ್ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ. ಎಚ್.ಸಂತೋಷ್‌ಕುಮಾರ್ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಗುಣಮಟ್ಟ ಸುಧಾರಣೆ
ಈಗಾಗಲೇ ಚಿಲಿಪಿಲಿ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಜತೆಗೆ ಶಾಲಾಪೂರ್ವ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಟಾಟಾ ಟ್ರಸ್ಟ್ ಸಹಯೋಗದಲ್ಲಿ ರೂಪಿಸಿರುವ ಹೊಸ ಕಾರ್ಯಕ್ರಮ ಸಹಕಾರಿಯಾಗಲಿದೆ. ಮಕ್ಕಳು ಸ್ವಂತ ಅನುಭವದಿಂದ ಕಲಿಯುವುದರಿಂದ ಬೋಧನೆ ಜತೆಗೆ ಪ್ರಾಯೋಗಿಕ ವ್ಯವಸ್ಥೆ ಮೂಲಕ ವಿಷಯ ಸಂಪೂರ್ಣ ಮನದಟ್ಟಾಗುತ್ತದೆ. ಬಾಲ್ಯದಲ್ಲಿ ಕಲಿಕೆ ಪರಿಣಾಮಕಾರಿ ಆಗುವುದರಿಂದ ಮಗುವಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಲೆಕ್ಕಾಚಾರ. ಹೊಸ ವ್ಯವಸ್ಥೆಯಿಂದ ಕಲಿಕೆ ಇನ್ನಷ್ಟು ಆಸಕ್ತಿಕರವಾಗಲಿದೆ. ಮಗು ಹೆಚ್ಚು ಸಂಭ್ರಮದಿಂದ ಅಂಗನವಾಡಿಯತ್ತ ಬರುತ್ತದೆ. ಶಿಕ್ಷಣ ವ್ಯವಸ್ಥೆಯ ಜತೆಗೆ ಮಗುವಿನ ಬಾಂಧವ್ಯ ಹೆಚ್ಚುತ್ತದೆ. ಭವಿಷ್ಯದಲ್ಲಿ ಇದರಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುವ ಜತೆಗೆ ಸಾಕ್ಷರತೆ ಪ್ರಮಾಣವೂ ಹೆಚ್ಚುತ್ತದೆ ಎಂಬ ನಿರೀಕ್ಷೆಯಿದೆ.
ಲಭ್ಯ ಸಂಪನ್ಮೂಲಗಳ ಬಳಕೆ
ತರಬೇತಿ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿ ಬೋಧನಾ ಉಪಕರಣ ಸಿದ್ಧಪಡಿಸುವುದು, ಅದನ್ನು ಬಳಸಿಕೊಂಡು ಮಕ್ಕಳಿಗೆ ಪರಿಣಾಮಕಾರಿಯಾಗಿ ವಿಷಯ ತಿಳಿಸುವುದನ್ನು ಕಲಿಸಿಕೊಡಲಾಗುತ್ತದೆ. ಶಿಕ್ಷಣದ ಬಗ್ಗೆ ಮಗುವಿನಲ್ಲಿ ಆಸಕ್ತಿ ಬೆಳೆಸುವ ಜತೆಗೆ ಅದು ರಚನಾತ್ಮಕವಾಗಿ ಯೋಚಿಸುವಂತೆ ಬೋಧನಾ ಕ್ರಮ ರೂಪಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಮಗು ಕಲಿಕೆ ಅವಧಿಯಲ್ಲಿ ಹಾಡು, ನೃತ್ಯದ ಮೂಲಕ ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವುದಕ್ಕೆ ಒತ್ತು ನೀಡಲಾಗುತ್ತದೆ. ಮಗು ಸರ್ವಾಂಗೀಣವಾಗಿ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಸುತ್ತಲಿನ ಪರಿಸರವನ್ನು ಗಮನಿಸಿ, ಯಾವುದಾದರೂ ವಸ್ತುವಿನ ಸ್ಪರ್ಶಜ್ಞಾನದಿಂದ ಕೆಲ ವಿಷಯಗಳನ್ನು ಗ್ರಹಿಸುವಂತೆ ಮಾಡುವುದು ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ.
ಕೊಪ್ಪಳದ ಅಂಗನವಾಡಿಗಳನ್ನು ದೇಶದ ಅತ್ಯುತ್ತಮ ಅಂಗನವಾಗಡಿಗಳೆಂದು ಗುರುತಿಸಲಾಗಿದೆ. ಇದಕ್ಕೆ ಕಾರಣ ಟಾಟಾ ಕಲಿಕಾ ಟ್ರಸ್ಟ್. ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ತರಬೇತಿಗಳು. ಈಗ ಅದೇ ಟ್ರಸ್ಟ್ ನಮ್ಮ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೂ ತರಬೇತಿ ನೀಡುತ್ತಿದೆ. ಹೊಸ ವ್ಯವಸ್ಥೆ ಅಳವಡಿಕೆಯಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ. ಕಲಿಕೆಯ ಆಸಕ್ತಿ ಬೆಳೆಯುತ್ತದೆ.