ಭದ್ರಾವತಿ ರೈಲ್ವೆ ನಿಲ್ದಾಣದ ಎದುರು ಉಂಟಾಗಿರುವ ಜನದಟ್ಟಣೆ.
ಭದ್ರಾವತಿ: ಬಸ್ ಪ್ರಯಾಣಿಕರಿಗಿಂತ ರೈಲಿನಲ್ಲೇ ಸಂಚರಿಸುವವ ಸಂಖ್ಯೆಯೇ ಹೆಚ್ಚು. ಬೇರೆ ನಗರಗಳಿಗೆ ತೆರಳಲು ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹಾಗೂ ರೈಲಿನಿಂದ ಇಳಿದು ಹೊರಬರುವವರಿಗೆ ನಿಲ್ದಾಣದ ಎದುರು ನಿಲ್ಲುವ ವಾಹನಗಳಿಂದ ಕಿರಿಕಿರಿ ಉಂಟಾಗುತ್ತಿದೆ.
ರಸ್ತೆಯಲ್ಲೇ ಅಡ್ಡಲಾಗಿ ನಿಲ್ಲುವ ಆಟೋ ರಿಕ್ಷಾಗಳು, ಸಂಬಂಧಿಗಳನ್ನು ಕರೆದೊಯ್ಯಲು ಬರುವ ನಾಗರಿಕರ ದ್ವಿಚಕ್ರ ಹಾಗೂ ಕಾರುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ತೀವ್ರ ಸಮಸ್ಯೆ ಎದುರಾಗಿದೆ.
ರೈಲುಗಳ ಸಂಚಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅದರಂತೆ ಶಿವಮೊಗ್ಗ-ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು ಸೇರಿ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗೂ ಸಂಪರ್ಕ ಕೊಂಡಿಯಾಗಿ ನಿತ್ಯ 10ಕ್ಕೂ ಹೆಚ್ಚು ಪ್ಯಾಸೆಂಜರ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಶತಾಬ್ದಿ ರೈಲುಗಳು ಭದ್ರಾವತಿ ಮಾರ್ಗದಲ್ಲಿ ಸಂಚರಿಸುತ್ತವೆ. ಸಾವಿರಾರು ಸಂಖ್ಯೆಯ ಪ್ರಯಾಣಿಕರು ರೈಲಿನಿಂದ ಇಳಿಯುತ್ತಾರೆ ಹಾಗೂ ಹತ್ತುತ್ತಾರೆ. ಇಳಿಯುವ ಹಾಗೂ ಹತ್ತುವ ಪ್ರಯಾಣಿಕರ ಸಂಖ್ಯೆ ಶಿವಮೊಗ್ಗಕ್ಕಿಂತಲೂ ಭದ್ರಾವತಿಯಲ್ಲಿಯೇ ಹೆಚ್ಚು ಎನ್ನಲಾಗಿದೆ. ಹೀಗಿದ್ದಾಗ ಪ್ರಯಾಣಿಕರಿಗೆ ಕಿರಿಕಿರಿಯಾಗದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ರೈಲ್ವೆ ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳ ಕರ್ತವ್ಯ. ಆದರೆ ಈ ಬಗ್ಗೆ ನಿರ್ಲಕ್ಷೃ ತೋರಿದಂತಿದೆ.
ತಿಂಡಿ ಅಂಗಡಿಗಳಿಂದ ಅಡ್ಡಿ: ನಗರದ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ತುಂಬ ಸಣ್ಣದಾದರೂ ಯಾವಾಗಲೂ ಸ್ವಚ್ಛವಾಗಿರುತ್ತದೆ. ಆದರೆ ಬಿ.ಎಚ್.ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ರೈಲ್ವೆ ನಿಲ್ದಾಣದ ಮುಂಭಾಗ ಚಹಾ, ತಿಂಡಿ ಅಂಗಡಿಗಳಿಂದ ಸಮಸ್ಯೆ ಎದುರಾಗಿದೆ. ಅಲ್ಲಿಯೇ ನಗರಸಭೆಯ ಸ್ವಸಹಾಯ ಸಂಘಗಳ ಮಳಿಗೆಗಳಿದ್ದರೂ ಆ ಮಳಿಗೆಯೊಳಗೆ ವ್ಯವಹರಿಸದೆ ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದರಿಂದ. ಇದರಿಂದ ರಸ್ತೆಯಲ್ಲಿ ವಾಹನಗಳು ಸಂಚರಿಸುವುದು ದುಸ್ತರವಾಗಿದೆ.
ತಿಂಡಿ ತಿನ್ನಲು ಬರುವ ದ್ವಿಚಕ್ರ ವಾಹನ ಸವಾರರು ಬೈಕ್‌ಗಳನ್ನು ಸಹ ಅದೇ ಸ್ಥಳದಲ್ಲಿ ನಿಲ್ಲಿಸಿ ಜನದಟ್ಟಣೆ ಹೆಚ್ಚುವಂತೆ ಮಾಡುತ್ತಾರೆ. ಇದರಿಂದಾಗಿ ರೈಲಿನಿಂದ ಇಳಿಯುವ ಹಾಗೂ ರೈಲಿಗೆ ಹತ್ತಿಸಲು ಬರುವ ಸಂಬಂಧಿಕರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಕರೆದೊಯ್ಯುಲು ಹರಸಾಹಸ ಮಾಡಬೇಕು. ಲಗೇಜುಗಳೊಂದಿಗೆ ರೈಲು ನಿಲ್ದಾಣದಿಂದ ಹೊರಬರುವ ಪ್ರಯಾಣಿಕರಿಗೆ ಉಸಿರುಗಟ್ಟವ ವಾತಾವರಣ ಸೃಷ್ಟಿಯಾಗುತ್ತದೆ.
ಅಡ್ಡಲಾಗಿ ನಿಲ್ಲುವ ಆಟೋರಿಕ್ಷಾ: ಪ್ರಯಾಣಿಕರನ್ನು ಕರೆದೊಯ್ಯುವ ಭರದಲ್ಲಿ ಆಟೋ ಚಾಲಕರು ನಾಮುಂದು, ತಾಮುಂದು ಎಂದು ಪ್ರಯಾಣಿಕರನ್ನು ಸುತ್ತುವರಿಯುತ್ತಾರೆ. ಆಟೋ ಚಾಲಕರು ಸರದಿ ಸಾಲಿನಲ್ಲಿ ನಿಂತು ಬರುವ ಪ್ರಯಾಣಿಕರನ್ನು ಡ್ರಾಪ್ ಮಾಡಲು ಮುಂದಾದರೆ ಯಾವುದೇ ಸಮಸ್ಯೆ ಎದುರಾಗದು. ಸಂಬಂಧಿಗಳನ್ನು ಕರೆದೊಯ್ಯಲು ಬರುವ ಕಾರು, ಬೈಕುಗಳು, ಬಾಡಿಗೆಗಾಗಿ ನಿಲ್ಲುವ ಆಟೋರಿಕ್ಷಾಗಳು ಎಲ್ಲವೂ ನಿಲ್ದಾಣದ ಮುಂಭಾಗದಲ್ಲೇ ನಿಲ್ಲುವುದರಿಂದ ಬೇರೆ ಊರುಗಳಿಂದ ನಗರಕ್ಕೆ ಬರುವ ಪ್ರಯಾಣಿಕರು ಅವ್ಯವಸ್ಥೆಗಳ ಬಗ್ಗೆ ದೂರುತ್ತಾರೆ.
ಪಾರ್ಕಿಂಗ್ ಸಮಸ್ಯೆ: ಭದ್ರಾವತಿ ರೈಲ್ವೆ ನಿಲ್ದಾಣದ ಎದುರು ಸ್ವಲ್ಪವೇ ಜಾಗವಿದ್ದು ಪಾರ್ಕಿಂಗ್ ಸಮಸ್ಯೆ ತೀವ್ರವಾಗಿದೆ. ಅದರಲ್ಲಿಯೇ ಒಂದೆಡೆ ಖಾಸಗಿಯಾಗಿ ದ್ವಿಚಕ್ರ ವಾಹನ ನಿಲ್ದಾಣಕ್ಕೆ ಟೆಂಡರ್ ನೀಡಲಾಗಿದೆ. ಉಳಿದ ಒಂದಷ್ಟು ಜಾಗದಲ್ಲಿ ಕೆಲವರು ಅನಧಿಕೃತವಾಗಿ ಕಾರುಗಳನ್ನು ಪಾರ್ಕಿಂಗ್ ಮಾಡಿ ಹೋಗುತ್ತಿದ್ದಾರೆ. ಸಂಬಂಧಿಗಳನ್ನು ಕರೆದುಕೊಂಡು ನಿಲ್ದಾಣಕ್ಕೆ ಬರುವವರು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸುವುದು ಎಂದು ತಿಳಿಯದೆ ರಸ್ತೆ ಮಧ್ಯದಲ್ಲೇ ನಿಲ್ಲಿಸಿಕೊಂಡು ಬರುವ ರೈಲಿಗಾಗಿ ಕಾಯುತ್ತಿರುತ್ತಾರೆ.
ವಸತಿಗೃಹ ಕಾಂಪೌಂಡ್ ತಲೆಬಿಸಿ: ನಗರದ ಬಿ.ಎಚ್.ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಬರಲು ಮೊದಲು ಮೂರು ಮಾರ್ಗಗಳಿದ್ದವು. ಹಾಲಪ್ಪ ವೃತ್ತದ ಗಣಪತಿ ದೇವಸ್ಥಾನದ ಮುಂಭಾಗ ಹಾಗೂ ತಿಮ್ಮಯ್ಯ ಮಾರುಕಟ್ಟೆಯ ಬಲ ಹಾಗೂ ಎಡ ಭಾಗದಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸರಾಗವಾಗಿ ಬರಬಹುದಾಗಿತ್ತು. ಆದರೆ ಕೆಲ ವರ್ಷಗಳಿಂದ ನಿಲ್ದಾಣದ ಎಡಭಾಗದಲ್ಲಿರುವ ರೈಲ್ವೆ ಕ್ವಾರ್ಟರ್ಸ್‌ಗೆ ಕಾಂಪೌಂಡ್ ನಿರ್ಮಿಸಿ, ಗೇಟ್ ಅಳವಡಿಸುವ ಮೂಲಕ ರಸ್ತೆಯನ್ನೇ ಬಂದ್ ಮಾಡಲಾಗಿದೆ. ಇರುವ 8-10 ಇಲಾಖೆಯ ವಸತಿ ನಿಲಯಗಳ ಭದ್ರತೆಗಾಗಿ ಕಾಂಪೌಂಡ್ ನಿರ್ಮಿಸಿ ರಸ್ತೆಯನ್ನೇ ಮುಚ್ಚಲಾಗಿದೆ. ಹಾಗಾಗಿ ಪ್ರಯಾಣಿಕರು ರೈಲ್ವೆ ನಿಲ್ದಾಣ ಮುಂದಿರುವ ಮಾರುಕಟ್ಟೆಯ ಎಡ ಹಾಗೂ ಬಲಭಾಗದ ರಸ್ತೆಯಲ್ಲಿಯೇ ಬಂದು ಮುಖ್ಯರಸ್ತೆಯನ್ನು ಸೇರಬೇಕಾಗಿದೆ. ಇದೀಗ ಬಿ.ಎಚ್.ರಸ್ತೆಯ ಮಧ್ಯಭಾಗದಲ್ಲಿ ಡಿವೈಡರ್ ಅಳವಡಿಸುತ್ತಿರುವುದರಿಂದ ರಸ್ತೆ ಕಿರಿದಾಗುವ ಮೂಲಕ ರೈಲು ಬರುವ ಹಾಗೂ ಹೋಗುವ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಎದುರು ಮಾರುಕಟ್ಟೆ ಬಳಿ ಜನದಟ್ಟಣೆ ಸಮಸ್ಯೆ ಇನ್ನಷ್ಟು ತೀವ್ರವಾಗಲಿದೆ. ನಾಗರಿಕರ ಅನುಕೂಲಕ್ಕಾಗಿ ಕಾಂಪೌಂಡ್ ತೆರವುಗೊಳಿಸಿದರೆ ಸಮಸ್ಯೆಗೆ ಪರಿಹಾರ ಸಾಧ್ಯವಾಗಬಹುದು.