ಶಾಸಕ ಗೋಪಾಲಕೃಷ್ಣ ಬೇಳೂರು  
ಶಿವಮೊಗ್ಗ

ಸಚಿವ ಸಂಪುಟ ವಿಸ್ತರಿಸದಿದ್ದರೆ ಕಠಿಣ ನಿರ್ಧಾರ | Cabinet expansion

ಪ್ರಮುಖ ಮುಖ್ಯಾಂಶಗಳು

  • 15 ದಿನದೊಳಗೆ ವಿಸ್ತರಣೆ ಮಾಡದಿದ್ದರೆ ಮುಂದಿನ ನಿರ್ಧಾರ ನಾವೇ ತೆಗೆದುಕೊಳ್ಳುತ್ತೇವೆ
  • ಮೇ 29ರೊಳಗೆ ದೆಹಲಿಗೆ ಹೋಗುತ್ತೇವೆ. ಈ ಸಲ ನಮಗೆ ಅವಕಾಶ ಕೊಡಬೇಕು
  • ಶಿವಮೊಗ್ಗದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
ಶಿವಮೊಗ್ಗ: ಹದಿನೈದು ದಿನದೊಳಗೆ ಸಚಿವ ಸಂಪುಟ ವಿಸ್ತರಣೆ(Cabinet expansion) ಮಾಡದಿದ್ದರೆ ಮುಂದಿನ ನಿರ್ಧಾರವನ್ನು ನಾವೇ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡದಿದ್ದರೆ ನಮ್ಮ ತೀರ್ಮಾನ ಬೇರೆಯೇ ಆಗಿರಲಿದೆ. ಮೇ 29ರೊಳಗೆ ದೆಹಲಿ(Delhi)ಗೆ ಹೋಗುತ್ತೇವೆ. ಈ ಸಲ ನಮಗೆ ಅವಕಾಶ ಕೊಡದಿದ್ದರೆ ಕಠಿಣ ತೀರ್ಮಾನ ಮಾಡುತ್ತೇವೆ ಎಂದರು.
ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಒತ್ತಾಯ. ಈ ಹಿಂದೆ ದೆಹಲಿಗೆ ಹೋಗುವುದನ್ನು ಕೇರಳದ ಸಿಎಂ ಆಯ್ಕೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇನ್ನೂ ಮೂರ್ನಾಲ್ಕು ದಿನದಲ್ಲಿ ಸಭೆ ಮಾಡಿ ದೆಹಲಿಗೆ ಹೋಗುತ್ತೇವೆ. ಈ ಬಾರಿ ಮಾಡು ಇಲ್ಲವೇ ಮಡಿ ಎನ್ನುವ ರೀತಿಯ ಹೋರಾಟ ಇದೆ ಎಂದು ಹೇಳಿದರು.
ಸರ್ಕಾರ ರಚನೆಯಾಗಿ ಮೂರು ವರ್ಷಗಳಾಗಿವೆ. ಸಚಿವ ಸಂಪುಟ ವಿಸ್ತರಣೆ ಆಗಿಯೂ ಮೂರು ವರ್ಷ ಆಗಿದೆ. ಆದರೂ ಸಂಪುಟ ವಿಸ್ತರಣೆ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಎರಡು ದಿನದ ಹಿಂದೆ ಸಿಎಂ ಸಿದ್ದರಾಮಯ್ಯ(CM Siddaramaiah) ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಕನಿಷ್ಠ 20 ಹೊಸಬರಿಗೆ ಸಚಿವ ಸ್ಥಾನ ನೀಡುವಂತೆ ನಾವು ಕೇಳಿದ್ದೇವೆ. ಹಿಂದೆ ಹೋಗಿರುವ ತಂಡದ ಜತೆಗೆ ಈ ಸಲ ಹೆಚ್ಚು ಶಾಸಕರು(MLA) ದೆಹಲಿಗೆ ಹೋಗುತ್ತೇವೆ. ಸಚಿವ ಸಂಪುಟ ಮರುರಚನೆ ಆಗಬೇಕು ಎಂದುಕೊಂಡಿದ್ದೇವೆ. ಹಳಬರೇ ಇರಬೇಕು ಅಂತೇನು  ಇಲ್ವಲ್ಲ ಎಂದು ಪ್ರಶ್ನಿಸಿದ ಅವರು, ಸಿಎಂ ಬದಲಾವಣೆ ಕುರಿತು ಹೈಕಮಾಂಡ್‌ಗೇ ಕೇಳಬೇಕು ಎಂದರು.
"

ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ. ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಮುಂದಾದರೆ ನಾನು ರಾಜೀನಾಮೆ ನೀಡಿ ಹೋರಾಟ ಮಾಡುತ್ತೇನೆ. ಈ ಯೋಜನೆಯನ್ನು ಸರ್ಕಾರ ಕೈಬಿಡಲಿದೆ.

— ಗೋಪಾಲಕೃಷ್ಣ ಬೇಳೂರು, ಶಾಸಕ