ಶಿಕಾರಿಪುರದ ತೊಗರ್ಸಿಯಲ್ಲಿ ನೂತನ ತಹಸೀಲ್ದಾರ್ ವಾಣಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಶ್ರೀ ಮಹಂತ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಅಭಿನವ ಮಹಂತ ದೇಶಿಕೇಂದ್ರ ಸ್ವಾಮೀಜಿ ಇತರರಿದ್ದರು.
ಶಿಕಾರಿಪುರ: ತೊಗರ್ಸಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ತೊಂದರೆ ಆಗದಂತೆ, ಅದ್ದೂರಿಯಾಗಿ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಮಳೆಹಿರೇಮಠದ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೋತ್ಸವಕ್ಕೆ ಪೂರಕವಾಗಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಹಿಂದಿನ ಸಭೆಯ ತೀರ್ಮಾನದಂತೆ ಮಳೆಹಿರೇಮಠದಿಂದ ರಥೋತ್ಸವ ದಿನಗಳಲ್ಲಿ ದಾಸೋಹ ವ್ಯವಸ್ಥೆಗೆ ತೀರ್ಮಾನ ಆಗಿದೆ. ನಿತ್ಯ ವಿಶೇಷ ಪೂಜೆ ಅಲಂಕಾರಗಳು ನಡೆಯುತ್ತಿವೆ ಎಂದು ತಿಳಿಸಿದರು.
ತಹಸೀಲ್ದಾರ್ ವಾಣಿ ಮಾತನಾಡಿ, ಸಭೆ ನಿರ್ಣಯದಂತೆ ಜಾತ್ರೋತ್ಸವ ನಡೆಯಲಿದೆ. ಲಕ್ಷಾಂತರ ಭಕ್ತರು ಸೇರುವ ಜಾತ್ರೆ ಯಶಸ್ಸಿಗೆ ಭಕ್ತರ ಸಹಕಾರ ಮತ್ತು ಮಾರ್ಗದರ್ಶನ ಅಗತ್ಯ. ಮೂಲ ಸೌಕರ್ಯ ಕೊರತೆ ಆಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಕೊಳಗಿ ರೇವಣಪ್ಪ ಮಾತನಾಡಿ, ಜಾತ್ರೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಹಿಂದಿನ ವರ್ಷದಂತೆ ಎಲ್ಲ ಕಾರ್ಯಕ್ರಮ ನಡೆಯಬೇಕು. ಜಾತ್ರೆಗೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ನೂತನ ತಹಸೀಲ್ದಾರ್ ವಾಣಿ ಅವರನ್ನು ತೊಗರ್ಸಿ ಮಠದ ಶ್ರೀಗಳು ಸನ್ಮಾನಿಸಿದರು. ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಕಿರಿಯ ಶ್ರೀ ಅಭಿನವ ಮಹಂತ ದೇಶಿಕೇಂದ್ರ ಸ್ವಾಮೀಜಿ, ತಾಪಂ ಮಾಜಿ ಅಧ್ಯಕ್ಷ ಕವಲಿ ಸುಬ್ರಹ್ಮಣ್ಯ, ಎಸ್.ಎನ್.ಜನ್ನುಜಿ, ಪರಮೇಶಪ್ಪ, ರಾಮನಗೌಡ , ಶಿರಸ್ತೇದಾರ್ ವಿನಯ್ ಆರಾಧ್ಯ, ನಾಡಕಚೇರಿ ಉಪತಹಸೀಲ್ದಾರ್ ಮಂಜುನಾಥ್, ಪಿಡಿಒ ನಾಗರಾಜ್, ದರ್ಶನ್ ಇತರರಿದ್ದರು.