ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೋತ್ಸವದ ಕುರಿತು ಚರ್ಚಿಸುವ ಸಂಬಂಧ ಆಗಮಿಸಿದ್ದ ಮಹಂತ ದೇಶೀಕೇಂದ್ರ ಶ್ರೀ, ಚನ್ನವೀರ ದೇಶೀಕೇಂದ್ರ ಶ್ರೀ, ಮಳೆಹಿರೇಮಠದ ಕಿರಿಯ ಶ್ರೀಗಳನ್ನು ಸಂಸದ ರಾಘವೇಂದ್ರ ಗೌರವಿಸಿದರು. ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ ಇತರರಿದ್ದರು. 
ಶಿವಮೊಗ್ಗ

ತೊಗರ್ಸಿ ಜಾತ್ರೆಗೆ ಸಹಕಾರ ನೀಡುವೆ | Fair

ಶಿವಕುಮಾರ ಎಸ್.ಪಿ.
ಶಿಕಾರಿಪುರ: ತೊಗರ್ಸಿ ಜಾತ್ರೆ ಮಲೆನಾಡು ಹಾಗೂ ಬಯಲುನಾಡಿನ ಜನರ ಬಾಂಧವ್ಯವನ್ನು ಬೆಸೆಯುತ್ತದೆ. ಎಲ್ಲರೂ ಒಂದಾಗಿ ಅತ್ಯಂತ ಸಡಗರದಿಂದ ಆಚರಿಸಬೇಕು. ಅಧಿಕಾರಿಗಳು ಜಾತ್ರೆಯ ಯಶಸ್ಸಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಫೆಬ್ರವರಿಯಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಪೂರಕವಾಗಿ ತೊಗರ್ಸಿ ಪೂಜ್ಯತ್ರಯರ ನೇತೃತ್ವದಲ್ಲಿ ಬಂದ ನಿಯೋಗದ ಜತೆಗೆ ಮಾತನಾಡಿದ ಅವರು, ತೊಗರ್ಸಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆ ತನ್ನ ಹಿಂದಿನ ವೈಭವವನ್ನು ಉಳಿಸಿಕೊಳ್ಳಬೇಕು. ಕಳೆದ ವರ್ಷದ ಕಹಿ ಘಟನೆಗಳು ಮರುಕಳಿಸಬಾರದು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದರು.
ಹಿಂದಿನಿಂದಲೂ ನಡೆದುಕೊಂಡು ಬಂದಂತೆ ತೊಗರ್ಸಿ ಪೂಜ್ಯರ ಸಲಹೆ, ಮಾರ್ಗದರ್ಶನ ಪಡೆದು ಗ್ರಾಮಸ್ಥರು ಮತ್ತು ಅಧಿಕಾರಿಗಳು ಜಾತ್ರೆಯನ್ನು ಮುನ್ನಡೆಸಬೇಕು. ಜಾತ್ರೆ ಮುಗಿಯುವವರೆಗೆ ಶ್ರೀಗಳು, ಅಧಿಕಾರಿಗಳು, ಗ್ರಾಮದ ಗಣ್ಯರ ಜತೆಗೆ ನಾನು ಸಂಪರ್ಕದಲ್ಲಿ ಇರುತ್ತೇನೆ. ಯಾವ ಕಾರಣಕ್ಕೂ ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಕಳಾಹೀನವಾಗದಂತೆ ಎಚ್ಚರವಹಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ್ವಾಮೀಜಿ, ಮಳೆಹಿರೇಮಠದ ಕಿರಿಯ ಶ್ರೀಗಳು, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ, ಕೌಲಿ ಸುಬ್ರಹ್ಮಣ್ಯ, ತೊಗರ್ಸಿ ಸಣ್ಣಹನುಮಂತಪ್ಪ, ಪರಮೇಶ್ವರಪ್ಪ, ಶಿವಯೋಗಿ ಗೌಡ, ಸೋಮೇಶ್ವರ ಇದ್ದರು.