ಸೊರಬ ತಾಲೂಕಿನ ಕ್ಯಾಸನೂರು ಖೇಚರಯೋಗಿ ಗುರುಬಸವದೇವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಗುರುಬಸವ ಸ್ವಾಮಿಗಳ ಕರ್ತೃಗದ್ದುಗೆ ಅಡಿಗಲ್ಲು ಸಮಾರಂಭದಲ್ಲಿ ಶ್ರೀಶೈಲ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಹಾಂತ ಶ್ರೀಗಳು, ಶ್ರೀ ಸಂಗಮೇಶ್ವರ ಶಿವಾಚಾರ್ಯರು, ಘನಬಸವ ಅಮರೇಶ್ವರ ಶ್ರೀಗಳು ಮತ್ತಿತರರು ಇದ್ದರು.
ಸೊರಬ: ವೀರಶೈವ ಎಂದರೆ ಪ್ರತಿದಿನ ಇಷ್ಟಲಿಂಗ ಪೂಜಿಸುವವರು ಎಂಬರ್ಥವಿದೆ. ಕೇವಲ ಲಿಂಗ ಧಾರಣೆ ಮಾಡಿದರೆ ಸಾಲದು. ನಿತ್ಯ ಪೂಜೆ ಮಾಡುವ ಆಚಾರ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಶ್ರೀಶೈಲ ಮಠದ ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕ್ಯಾಸನೂರು ಖೇಚರಯೋಗಿ ಗುರುಬಸವ ದೇವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಗುರುಬಸವ ಸ್ವಾಮಿಗಳ ಕರ್ತೃ ಗದ್ದುಗೆ, ಚೌಡೇಶ್ಚರಿ ದೇವಿ ಹಾಗೂ ಶ್ರೀ ಪಂಡಿತಾರಾಧ್ಯರ ಶಿಲಾಮಂಟಪದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಂದಿನ ಪೀಳಿಗೆಗೆ ಸಂಸ್ಕಾರ ನೀಡಿ, ಧರ್ಮವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಪ್ರಸ್ತುತ ಧಾರ್ಮಿಕ ಪರಂಪರೆ ಕುರಿತು ಅರಿವು ಮೂಡಿಸುವ ಅನಿವಾರ್ಯತೆ ಎದುರಾಗಿದೆ. ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸಿ ಸುಭಿಕ್ಷೆಯಿಂದ ಜೀವನ ನಡೆಸಲು ದಾರಿದೀಪವಾಗಲಿದೆ. ಧರ್ಮದ ನೆಲೆಗಟ್ಟು ಅರಿತು ಸುಚಿತ್ತ ಮನಸ್ಸಿನಿಂದ ಧಾರ್ಮಿಕ ಚಟುವಟಿಕೆಗಳು ಹೆಚ್ಚಾದರೆ ಸುಭಿಕ್ಷೆ ನಿರೀಕ್ಷಿಸಲು ಸಾಧ್ಯವಿದೆ ಎಂದರು.
ಶಿಲಾಮಂಟಪಕ್ಕೆ ಅಡಿಗಲ್ಲು ಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎಸ್.ಮಧು ಬಂಗಾರಪ್ಪ, ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವುದು ಸಹ ಭಗವಂತನ ಸೇವೆಯಾಗಿದೆ. ಸರ್ಕಾರ ಶಿಕ್ಷಣ ಇಲಾಖೆಯಂತಹ ಜವಾಬ್ದಾರಿಯುತ ಇಲಾಖೆಯನ್ನು ನೀಡಿದ್ದು, ಪ್ರಾಮಾಣಿಕವಾಗಿ ಮಕ್ಕಳ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ತೃಪ್ತಿ ಇದೆ ಎಂದರು.
ತೊಗರ್ಸಿ ಶ್ರೀ ಮಹಾಂತ ಸ್ವಾಮೀಜಿ, ಗೊಗ್ಗಿಹಳ್ಳಿ ಮಠದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ಹಿರೆಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಶ್ರೀ ಗುರುಬಸವೇಶ್ವರ ಸ್ವಾಮೀಜಿ, ಗುಬ್ಬಮಠದ ಶ್ರೀ ನಂಜುಂಡ ಶಿವಾಚಾರ್ಯ ಸ್ವಾಮೀಜಿ, ಕೋಣದೂರು ಶ್ರೀಗಳು, ನಂದಿಪುರ ಮಠದ ನಂದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಂಕುಶ ದೊಡ್ಡಿಮಠದ ವಾನದೇವ ಶಿವಾಚಾರ್ಯ ಸ್ವಾಮೀಜಿ, ಎಚ್.ಗಣಪತಿ, ಕೆ.ವಿಗೌಡ, ಸಿ.ಪಿ.ವೀರೇಶ್ ಗೌಡ, ಹೇಮರಾಜ್ ಪಾಟೀಲ್, ನಾಗರಾಜ್ ಗುತ್ತಿ, ಡಾ. ಜ್ಞಾನೇಶ್ ಇತರರಿದ್ದರು.