ಶಿಕಾರಿಪುರದಲ್ಲಿ ನಿವೇಶನ ರಹಿತರಿಗೆ ಶಾಸಕ ಬಿ.ವೈ.ವಿಜಯೇಂದ್ರ ಹಕ್ಕುಪತ್ರ ವಿತರಿಸಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ್ ಗೌಡ, ತಹಸೀಲ್ದಾರ್ ವಾಣಿ, ತಾಪಂ ಇಒ ನಾಗರಾಜ್ ಇದ್ದರು.
ಶಿಕಾರಿಪುರ: ಮನೆ ಇಲ್ಲದವರು, ನಿವೇಶನ ರಹಿತರ ಸಂಕಷ್ಟಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಿರಾಶ್ರಿತರಿಗೆ ನಿವೇಶನ ದೊರಕಿಸುವುದು ಕಷ್ಟದ ಕೆಲಸವಾಗುತ್ತಿತ್ತು. ಆದರೀಗ ಸರ್ಕಾರಿ ಜಾಗಗಳನ್ನು ಗುರುತಿಸಿ ಸರ್ಕಾರದಿಂದ ಅರ್ಹರಿಗೆ ನಿವೇಶನ ಕೊಡಿಸುವ ಕೆಲಸವಾಗುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಪಂ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಂದಾಯ ಗ್ರಾಮ, ಉಪ ಗ್ರಾಮಗಳ ಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಲವಾರು ಮಂದಿ ನಿವೇಶನ ಇಲ್ಲದವರಿದ್ದಾರೆ. ನಿವೇಶನ ಇದ್ದರೂ ಹಕ್ಕುಪತ್ರ ದೊರಕಿಸಿ ಕೊಡುವುದು ಸುಲಭವಿರಲಿಲ್ಲ. ಇದೀಗ ನಿವೇಶನ ಕೊಡುವುದಲ್ಲದೆ ಅವರಿಗೆ ಹಕ್ಕುಪತ್ರ ಕೊಡುವ ಕೆಲಸವೂ ಆಗುತ್ತಿದೆ. ತಾಲೂಕಿನ ಕಲ್ಮನೆ, ತರಲಘಟ್ಟ, ಜಕ್ಕಿನಕೊಪ್ಪ ಗ್ರಾಮ ಪಂಚಾಯಿತಿ ಮತ್ತಿತರ ಗ್ರಾಮಗಳ 400ಕ್ಕೂ ಹೆಚ್ಚು ಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ನಿವೇಶನಗಳ ಹಕ್ಕುಪತ್ರ ಪಡೆದ ಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ್ ಗೌಡ ಮಾತನಾಡಿ, ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಹಾವೇರಿ ಜಿಲ್ಲೆಯಲ್ಲಿ ರಾಜ್ಯದ ಎಲ್ಲ ತಾಲೂಕಿನ ಬಗರ್‌ಹುಕುಂ ರೈತರು, ನಿವೇಶನ ರಹಿತರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಹಕ್ಕುಪತ್ರ ನೀಡಲಾಗಿತ್ತು ಎಂದರು.
ಇಂದು ಸರ್ಕಾರದಿಂದ ನೀಡುತ್ತಿರುವ ನಿವೇಶನಗಳ ಹಕ್ಕುಪತ್ರ ಪಡೆಯುತ್ತಿರುವ ಲಾನುಭವಿಗಳು ಮನೆಯಲ್ಲಿ ಇಟ್ಟರೆ ಸಾಲದು. ನಿಮ್ಮ ನಿವೇಶನ ಖಾತ್ರಿಪಡಿಸಿಕೊಂಡು ಗ್ರಾಪಂಗಳಲ್ಲಿ ಕಂದಾಯ ಕಟ್ಟಿ. ಇ-ಸ್ವತ್ತು, ಖಾತೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ತಹಸೀಲ್ದಾರ್ ವಾಣಿ, ತಾಪಂ ಇಒ ನಾಗರಾಜ್, ವಿವಿಧ ಗ್ರಾಪಂಗಳ ಪಿಡಿಒ, ಕಾರ್ಯದರ್ಶಿಗಳು ಇದ್ದರು.