ಮಾರಿಕಾಂಬಾ ಜಾತ್ರೆ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನೀಡಿದ ತ್ರಿಧಾತ್ ಸಾಗರ ಹಾಗೂ ಕಲಾವಿದರನ್ನು ಸಮಿತಿ ಪರವಾಗಿ ಪ್ರಚಾರ ಸಮಿತಿ ಸಂಚಾಲಕ ರವಿ ನಾಯ್ಡು ಅಭಿನಂದಿಸಿದರು. ಗಿರೀಶ್ ಮತ್ತಿತರರಿದ್ದರು.
- ಪ್ರತಿದಿನ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ
- ಭರತನಾಟ್ಯ, ನೃತ್ಯ ಪ್ರದರ್ಶನ
ಸಾಗರ: ನಗರದ ಶ್ರೀ ಮಾರಿಕಾಂಬಾ ಜಾತ್ರೋತ್ಸವ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆದರು. ರಾಜ್ಯ, ಹೊರರಾಜ್ಯಗಳಿಂದ ಸಹ ಭಕ್ತರು ಆಗಮಿಸಿದ್ದರು.
ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆಗಳು ಮಜ್ಜಿಗೆ, ಕೋಸಂಬರಿ, ಪಾನಕ ವಿತರಿಸಿದರು. ಸ್ನೇಹಿತರ ಬಳಗದಿಂದ ನಗರಸಭೆ ಕಾಂಪ್ಲೆಕ್ಸ್‌ನಲ್ಲಿ ಹಾಗೂ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಾವಿರಾರು ಜನರು ಭಾಗಿಯಾಗಿದ್ದರು.
ಜಾತ್ರೆ ಹಿನ್ನೆಲೆಯಲ್ಲಿ ನಗರಸಭೆ ಆವರಣದ ಗಾಂಧಿ ಮೈದಾನದ ಮಾರಿಕಾಂಬಾ ವೇದಿಕೆಯಲ್ಲಿ ಪ್ರತಿದಿನ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯುತ್ತಿದ್ದು ಜನರ ಗಮನ ಸೆಳೆಯುತ್ತಿದೆ. ಶುಕ್ರವಾರ ವಾರಿಧಿ ನೃತ್ಯ ತಂಡದಿಂದ ನೃತ್ಯ, ದೈವಜ್ಞ ಸಾಂಸ್ಕೃತಿಕ ಬಳಗದಿಂದ ದೇವಿ ನೃತ್ಯ, ತ್ರಿಧಾತ್ ಸಾಗರ ಅವರಿಂದ ಸ್ಯಾಕ್ಸೋಫೋನ್ ವಾದನ, ಸಿಗ್ತಾಂವ್ ನಟರಾಜ ನಾಟ್ಯ ತಂಡದಿಂದ ಭರತನಾಟ್ಯ, ಶ್ರೀಶ ಪ್ರಭು ಅವರಿಂದ ನೃತ್ಯ ಪ್ರದರ್ಶನ ಹಾಗೂ ಗಾಯಕಿ ಸುರೇಖಾ ಹೆಗಡೆ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಮಿತಿ ಸಂಚಾಲಕ ರಾಮು, ಸಹ ಸಂಚಾಲಕ ಲೋಕೇಶಕುಮಾರ್, ಗಂಗಾಧರ ಜಂಬಿಗೆ ಇತರರಿದ್ದರು.