ಹೊಳೆಹೊನ್ನೂರಿನ ಪಿಯು ಕಾಲೇಜು ಆವರಣದಲ್ಲಿ ಬಿಜೆಪಿಯಿಂದ ವನಮಹೋತ್ಸವ ಆಚರಿಸಲಾಯಿತು. ಕೆ.ಬಿ.ಅಶೋಕ್ ನಾಯ್ಕ, ಮಲ್ಲೇಶಪ್ಪ, ಡಿ.ಮಂಜುನಾಥ್, ಎಸ್.ಶ್ರೀನಿವಾಸ್ ಇತರರಿದ್ದರು. 
ಶಿವಮೊಗ್ಗ

ಕಾರ್ಯಕರ್ತರ ಶ್ರಮದಿಂದ ಕೇಂದ್ರದಲ್ಲಿ ಮೂರನೇ ಬಾರಿ ಆಡಳಿತ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಹೇಳಿಕೆ
  • ಆನವೇರಿಯಲ್ಲಿ ಗ್ರಾಮ ವಾಸ್ತವ್ಯ, ಕಾರ್ಯಕರ್ತರೊಂದಿಗೆ ಸಭೆ
  • ಕೇಂದ್ರದಿಂದ ಜನಪರ ಯೋಜನೆಗಳ ಅನುಷ್ಠಾನ
ಹೊಳೆಹೊನ್ನೂರು: ಹಿರಿಯರ ಶ್ರಮ, ಸಂಘಟನಾ ಶಕ್ತಿಯಿಂದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಹೇಳಿದರು.
ಸಮೀಪದ ಆನವೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜನಸಂಘದ ಕಾಲದಿಂದ ಈವರೆಗೂ ಪಕ್ಷದ ಸಂಘಟನೆಗೆ ಅನೇಕ ಮಹನೀಯ ನಾಯಕರು ಕೊಡುಗೆ ನೀಡಿದ್ದಾರೆ. ಎಲ್ಲ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಕೇಂದ್ರದಲ್ಲಿ ಸತತ ಮೂರನೇ ಬಾರಿ ಅಧಿಕಾರ ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಆರ್ಟಿಕಲ್ 370, ಆಯುಷ್ಮಾನ್ ಯೋಜನೆ, ಪಡಿತರ ವಿತರಣೆ ಸೇರಿ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ದೇಶ ಆರ್ಥಿಕವಾಗಿ ಪ್ರಬಲವಾಗುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಮುಂದಿನ ಬಾರಿ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲಿದೆ ಎಂದರು.
ದೇವಸ್ಥಾನದಲ್ಲಿ ಪೂಜೆ: ಹೊಳೆಹೊನ್ನೂರಿನಲ್ಲಿ ಹೊಸ ಸೇತುವೆ ಸೇರಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ವೀಕ್ಷಿಸಿದರು. ಹೊಳೆಹೊನ್ನೂರಿನಲ್ಲಿ ಚಿಂತಕರ ಸಭೆ ನಡೆಸಿ ನಂತರ ಆನವೇರಿ ಬಿಜೆಪಿ ಮುಖಂಡ ರಮೇಶ್ ಗೌಡ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದರು. ಆನವೇರಿಯ ಹಿರಿಮಾವುರದಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆರ್‌ಎಸ್‌ಎಸ್ ಮುಖಂಡ ಎನ್.ಎಚ್ ಮಂಜುನಾಥ್ ಅವರ ಮನೆಯಲ್ಲಿ ಸಂಘ ಪರಿವಾರದ ಸಭೆಯಲ್ಲಿ ಪಾಲ್ಗೊಂಡರು. ದಾನವಾಡಿಯ ಗಿರಿರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕಾಂಪೌಂಡ್ ಕಾಮಗಾರಿ ವೀಕ್ಷಿಸಿದರು. ಹನುಮಂತಾಪುರ ಹಾಗೂ ಅರಹತೊಳಲಿನ ಶಕ್ತಿಕೇಂದ್ರಗಳಿಗೆ ಭೇಟಿ ನೀಡಿದರು. ಸಂಜೆ ಮಾರಶೆಟ್ಟಿಹಳ್ಳಿಯಲ್ಲಿ ಕೀ ವೋಟರ್ಸ್‌ ಸಭೆ ನಡೆಸಿದರು.
ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ನಿಕಟಪೂರ್ವ ಅಧ್ಯಕ್ಷ ಮಂಜುನಾಥ್, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್, ಎಸ್.ಶ್ರೀನಿವಾಸ್, ಸಿದ್ದಪ್ಪ, ರಾಜೇಶ್, ಎ.ಕೆ.ರಮೇಶ್, ಸುಬ್ರಮಣಿ, ರಾಧಕೃಷ್ಣ, ನಾಗೇಶ್ವರ ರಾವ್ ಇತರರಿದ್ದರು.