ಹೊಸನಗರ: ರಕ್ತದಾನ ಮಾಡುವುದರಿಂದ ರಕ್ತ ಶುದ್ಧೀಕರಣ ಆಗುವ ಜತೆಗೆ ಆರೋಗ್ಯ ಸುಸ್ಥಿತವಾಗಿರಲು ನೆರವಾಗುತ್ತದೆ. ಹಾಗಾಗಿ ರಕ್ತದಾನದ ಬಗ್ಗೆ ಯಾವುದೇ ಹಿಂಜರಿಕೆ ಬೇಡ ಎಂದು ಶಿವಮೊಗ್ಗ ರೆಡ್‌ಕ್ರಾಸ್ ಸಂಜೀವಿನಿ ರಕ್ತಕೇಂದ್ರದ ಹಿರಿಯ ಸಮಾಲೋಚಕ ಧರಣೇಂದ್ರ ದಿನಕರ್ ಹೇಳಿದರು.
ತಾಲೂಕಿನ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿರೀಶ್ ದೊಡ್ಡಿನಮನೆ ಸ್ಮರಣಾರ್ಥ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತದಾನ ಮಾಡಲು ಬಹಳಷ್ಟು ಜನರು ಹಿಂದೇಟು ಹಾಕುತ್ತಾರೆ. ಒಬ್ಬರ ಜೀವ ಉಳಿಸುವ ಶಕ್ತಿ ಇರುವ ರಕ್ತವನ್ನು ದಾನ ಮಾಡಲು ಯಾವುದೇ ಸಂಪ್ರದಾಯ ಅಡ್ಡಿ ಬರಬಾರದು ಎಂದು ತಿಳಿಸಿದರು.
ಡಾ. ಪ್ರದೀಪ್ ಡಿಮೆಲ್ಲೋ ಮಾತನಾಡಿ, ರಕ್ತದಾನದಿಂದ ಆರೋಗ್ಯ ಹದಗೆಡುತ್ತದೆ ಎಂಬುದು ಹಲವರ ಅನಿಸಿಕೆ. ಹೀಗಾಗಿ ಇಂದಿನ ಯುವಜನರು ರಕ್ತ ಕೊಡಲು ಮೀನಮೇಷ ಎಣಿಸುತ್ತಾರೆ. ರಕ್ತದಾನದ ನಂತರ ಹೊಸ ರಕ್ತ ಉತ್ಪಾದನೆ ಮೂಲಕ ದೈಹಿಕವಾಗಿ ಕ್ರಿಯಾಶೀಲತೆ ಹೆಚ್ಚುತ್ತದೆ. ಹಾಗಾಗಿ ಪೂರ್ವಗ್ರಹ ಪೀಡಿತರಾಗಿ ಯೋಚಿಸಬಾರದು ಎಂದರು.
121 ಬಾರಿ ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್, 55 ಬಾರಿ ರಕ್ತದಾನ ಮಾಡಿದ ರವಿ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 50 ಜನ ರಕ್ತದಾನ ಮಾಡಿದರು. ರೆಡ್‌ಕ್ರಾಸ್ ವೈದ್ಯಾಧಿಕಾರಿ ಡಾ. ದಿನಕರ್, ಪರೀಕ್ಷಾ ತಂತ್ರಜ್ಞರಾದ ಲಕ್ಷ್ಮೀ, ಸೌಮ್ಯಾ, ಲತಾ, ಪಲ್ಲವಿ, ಸುಧೀಂದ್ರ ಭಂಡಾರಕರ್, ಸಂತೋಷ್, ಅಬೂಬಕರ್, ದೇವಪ್ಪ, ನಿತಿನ್, ರಾಜೇಶ್, ಪಾಂಡು ಗೌಡ, ಕರುಣಾಕರ ಶೆಟ್ಟಿ, ಹರೀಶ್ ರಾವ್, ಶಿಕ್ಷಕ ಆಶಿಕ್, ಮಂಜುನಾಥ್ ಇದ್ದರು.