ಸಾಗರದಲ್ಲಿ ಹೆದ್ದಾರಿ ಪ್ರಾಧಿಕಾರ, ನಗರಸಭೆ, ಪಿಡಬ್ಲುೃಡಿ ಮತ್ತು ಮೆಸ್ಕಾಂ ಅಧಿಕಾರಿಗಳ ಜತೆ ಶಾಸಕ ಗೋಪಾಲಕೃಷ್ಣ ಬೇಳೂರು ಸಭೆ ನಡೆಸಿದರು. ವಿರೇಶ್ ಕುಮಾರ್, ಎಚ್.ಕೆ.ನಾಗಪ್ಪ, ಲೋಕೇಶ್ ಇತರರಿದ್ದರು. 
ಶಿವಮೊಗ್ಗ

ಭೂಮಿ ವಾಪಸ್ ಕೊಡುವ ಪ್ರಸ್ತಾವನೆ ಸದ್ಯಕ್ಕಿಲ್ಲ

ಪ್ರಮುಖ ಮುಖ್ಯಾಂಶಗಳು

  • ಜನರಿಂದ ಹಣ ವಸೂಲಿ
  • ಭೂಮಿ ಮಂಜೂರು ವದಂತಿ
  • ಬ್ರೋಕರ್‌ಗಳಿಂದ ಜನರಿಗೆ ವಂಚನೆ
ಸಾಗರ: ಕೆಲವರು ಕೆಪಿಸಿ ಜಾಗವನ್ನು ನಿಮ್ಮ ಹೆಸರಿಗೆ ಮಂಜೂರು ಮಾಡಿಸಿಕೊಡುತ್ತೇವೆ ಎಂದು ರೈತರಿಂದ ಹಣ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕುಂದಾಪುರ ಮೂಲದ ವ್ಯಕ್ತಿಯೊಬ್ಬ ಜನರಿಂದ ಹಣ ವಸೂಲಿ ಮಾಡುತ್ತಿದ್ದು, ಸಾರ್ವಜನಿಕರು ಹಣ ಕೊಟ್ಟು ಮೋಸ ಹೋಗಬೇಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ಉಪವಿಭಾಗಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಹೆದ್ದಾರಿ ಪ್ರಾಧಿಕಾರ, ನಗರಸಭೆ, ಪಿಡಬ್ಲುೃಡಿ ಮತ್ತು ಮೆಸ್ಕಾಂ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಕೆಪಿಸಿ ವಶದಲ್ಲಿರುವ ಭೂಮಿಯನ್ನು ಮಂಜೂರು ಮಾಡುತ್ತಿದ್ದಾರೆ ಎನ್ನುವ ವದಂತಿ ಹಬ್ಬಿಸುತ್ತಿದ್ದು, ಇದು ಸಂಪೂರ್ಣ ಸುಳ್ಳು ಎಂದರು.
ಅಣೆಕಟ್ಟು ನಿರ್ಮಾಣ ಸಂದರ್ಭ ಕೆಪಿಸಿ ಒಂದಷ್ಟು ಭೂಮಿ ವಶಪಡಿಸಿಕೊಂಡಿದೆ. ಅದನ್ನು ಪುನಃ ಸಂತ್ರಸ್ತರಿಗೆ ಕೊಡುವ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಈ ಬಗ್ಗೆ ಮುಂದೆ ನಾನು ಪ್ರಯತ್ನ ಮಾಡುತ್ತೇನೆ. ಆದರೆ ಕೆಲವು ಬ್ರೋಕರ್‌ಗಳು ಹುಟ್ಟಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಿ ಎಂದು ತಿಳಿಸಿದರು.
ಕೆಪಿಸಿ ವಶದಲ್ಲಿರುವ ಭೂಮಿಯನ್ನು ಸಂತ್ರಸ್ತರಿಗೆ ಹಿಂದಿರುಗಿಸಿ ಎಂದು ತೀ.ನ.ಶ್ರೀನಿವಾಸ್ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ತುಮರಿ ಭಾಗದಲ್ಲಿ ಹೋಗಿ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಸುಳ್ಳು ಸುದ್ದಿಯನ್ನು ನಂಬಬಾರದು. ಕುಂದಾಪುರ ಮೂಲದ ವ್ಯಕ್ತಿ ತುಮರಿ ಭಾಗದಲ್ಲಿ ಕಂಡುಬಂದರೆ, ಹಣ ವಸೂಲಿ ಮಾಡುತ್ತಿದ್ದರೆ, ಅವನನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ನಿಧಾನವಾಗಿದೆ. ಈ ಬಗ್ಗೆ ಸಂಬಂಧಿಸಿದ ಸಚಿವರನ್ನು ಭೇಟಿಯಾಗಲು ಸಿದ್ಧತೆ ನಡೆಸಿದ್ದೇವೆ. ಮುಂದಿನ ಎರಡು ತಿಂಗಳಿನಲ್ಲಿ ರಸ್ತೆ ಕಾಮಗಾರಿ ಮುಗಿಸಬೇಕು. ಪೊಲೀಸ್ ಸ್ಟೇಷನ್ ಸ್ಥಳಾಂತರಿಸಿ ರಸ್ತೆ ಅಗಲೀಕರಣ ಮಾಡಲು ತಿಳಿಸಿದೆ. ಇದರ ಜತೆಗೆ ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಸಹ ನಿಗಾವಹಿಸಿದೆ. ರೈಲ್ವೆ ನಿಲ್ದಾಣ ರಸ್ತೆಯನ್ನು ದ್ವಿಪಥವಾಗಿವುದು, ಅಗ್ರಹಾರ, ಶಿವಪ್ಪನಾಯಕ, ಪೊಲೀಸ್ ಠಾಣೆ ವೃತ್ತಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೋಕೇಶ್, ರಾಕೇಶ್, ದೇವರಾಜ್, ಗೋಪಿನಾಥ್, ರಮೇಶ್ ಇತರರಿದ್ದರು.