ಶಿವಮೊಗ್ಗ ತಾಲೂಕಿನ ಚಾಮೇನಹಳ್ಳಿಯ ಹೊಲವೊಂದರಲ್ಲಿ ಮೆಕ್ಕೆಜೋಳ ಬೆಳೆ ನಾಶವಾಗಿರುವುದನ್ನು ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಸುನಿಲ್ ಕುಮಾರ್, ಎಸ್.ಎನ್.ಚನ್ನಬಸಪ್ಪ, ಗುರುರಾಜ ಗಂಟಿಹೊಳಿ ಪರಿಶೀಲಿಸಿದರು. ಎನ್.ಕೆ.ಜಗದೀಶ್, ಸಿದ್ದಲಿಂಗಪ್ಪ, ತಮ್ಮಡಿಹಳ್ಳಿ ನಾಗರಾಜ್ ಇದ್ದರು.
- ಆರಗ ಜ್ಞಾನೇಂದ್ರ ವ್ಯಂಗ್ಯ
- ಬರ ಪರಿಶೀಲನಾ ಸಮಿತಿಯಿಂದ ಸಮೀಕ್ಷೆ
- ಮುಂದಿನ ವರದಿ ಸಿದ್ಧವಾಗಲಿದೆ ವರದಿ
ಶಿವಮೊಗ್ಗ: ಮಳೆ ಕೈಕೊಟ್ಟ ಕಾರಣದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಇದಕ್ಕೆ ಸ್ಪಂದಿಸಲು ರಾಜ್ಯದಲ್ಲಿ ಕೃಷಿ (agriculture) ಹಾಗೂ ತೋಟಗಾರಿಕೆ (horticulture) ಸಚಿವರೇ ಇಲ್ಲ. ನೀರಾವರಿ ಖಾತೆಯನ್ನು ನಿರಾಕರಿಸಿದವರಿಗೇ ಆ ಖಾತೆ ನೀಡಿದ್ದಾರೆ. ಇನ್ನು ರೈತರ ಅಳಲನ್ನು ಕೇಳುವವರಾರು? ಎಂದು ಶಾಸಕ ಆರಗ ಜ್ಞಾನೇಂದ್ರ (jnanendra) ಪ್ರಶ್ನಿಸಿದರು.
ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನಲ್ಲಿ ಗುರುವಾರ ಬರ ಅಧ್ಯಯನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಲ್ಲಿ ವಿಶ್ವಾಸ ತುಂಬಬೇಕಿದ್ದ ಸರ್ಕಾರದ ಶಾಸಕರೆಲ್ಲರೂ ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದಲ್ಲಿ ನಮ್ಮ ರಾಜ್ಯಕ್ಕೆ ಹಿನ್ನಡೆಯಾಗಿದೆ. ಸರ್ಕಾರದ ವೈಫಲ್ಯದಿಂದ ಕೃಷಿಕರು ಪರಿತಪಿಸುವಂತಾಗಿದೆ ಎಂದು ದೂರಿದರು.
ಸರ್ಕಾರ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತ ಪರ ನಿಲುವು ಪ್ರದರ್ಶಿಸಬೇಕಿತ್ತು. ಆದರೆ ಸಚಿವರು, ಶಾಸಕರು, ಅಧಿಕಾರಿಗಳು ಜನರ ಬಳಿ ಹೋಗುತ್ತಿಲ್ಲ. ರಾಜ್ಯ ಸರ್ಕಾರ ಮಾತೆತ್ತಿದರೆ ಕೇಂದ್ರದತ್ತ ಬೊಟ್ಟು ಮಾಡುತ್ತದೆಯೇ ಹೊರತು ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿಲ್ಲ ಎಂದು ಕಿಡಿಕಾರಿದರು.
ಮುಂದಿನ ವಾರ ವರದಿ ಸಲ್ಲಿಕೆ
ರೈತರ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಲು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬರ ಅಧ್ಯಯನ ಸಮಿತಿಗೆಂದು ಆರು ತಂಡಗಳನ್ನು ರಚಿಸಿದ್ದರು. ಇನ್ನೊಂದೆಡೆ ನಮ್ಮ ಪಕ್ಷದ ಕಾರ್ಯಕರ್ತರು ಅವರ ಭಾಗದಲ್ಲಿನ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಇದೆಲ್ಲವನ್ನೂ ಕ್ರೋಢಿಕರಿಸಿ ಆ.6ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಲ್ಲ ಕಡೆಯ ಸಮಸ್ಯೆಗಳ ಸಾರಾಂಶವನ್ನು ವರದಿ ರೂಪದಲ್ಲಿ ಸಿದ್ಧಪಡಿಸಲಾಗುವುದು ಎಂದು ಆರಗ ಜ್ಞಾನೇಂದ್ರ ಹೇಳಿದರು.
ವರದಿಯ ಒಂದು ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಇನ್ನೊಂದು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು. ವಿಧಾನ ಮಂಡಲದ ಅಧಿವೇಶನದಲ್ಲಿ ರೈತರ ಸಮಸ್ಯೆ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು. ರಾಜಕೀಯ ಕಾರಣಗಳಿಗಾಗಿ ಬರ ಅಧ್ಯಯನ ಸಮಿತಿ ರಚನೆಯಾಗಿಲ್ಲ. ರೈತರ ವಿಷಯದಲ್ಲಿ ರಾಜಕಾರಣ ಮಾಡುವ ಅನಿವಾರ್ಯತೆಯೂ ಬಿಜೆಪಿಗಿಲ್ಲ ಎಂದು ಸ್ಪಷ್ಟಪಡಿಸಿದರು.