- ‘ಕಾಮಧೇನು’ವನ್ನೂ ಮರೆತ ಆಡಳಿತ ಯಂತ್ರ
- ಜಾನುವಾರು ಕಳೆದುಕೊಂಡವರಿಗಿಲ್ಲ ಪರಿಹಾರ
- ಬಾಕಿ ಪರಿಹಾರ ಬಿಡುಗಡೆ ವಿಳಂಬ
- ಸರ್ಕಾರದಿಂದ ಮೀನಮೇಷ
ಹೈನುಗಾರರು ಜಾನುವಾರು ಕಳೆದುಕೊಂಡು ಸಂಕಷ್ಟದಲ್ಲಿರುವ ಸಂದರ್ಭ ಅವರ ಕಣ್ಣೊರೆಸಲು ರಾಜ್ಯ ಸರ್ಕಾರ (goverment) ಜಾರಿಗೆ ತಂದಿದ್ದ ಅನುಗ್ರಹ (anugraha) ಹಾಗೂ ಕಾಮಧೇನು (kamddhenu) ಯೋಜನೆ ಸಂಪೂರ್ಣ ಹಳಿ ತಪ್ಪಿದೆ. ಸರ್ಕಾರ ಸಕಾಲದಲ್ಲಿ ಪರಿಹಾರ ಬಿಡುಗಡೆ ಮಾಡದೆ ಅರ್ಹರು ಪರಿತಪಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಅನುಗ್ರಹ ಯೋಜನೆಯಡಿ ಕಳೆದ ಅಕ್ಟೋಬರ್‌ನಿಂದ ಇದುವರೆಗೆ ಮತ್ತು ಕಾಮಧೇನು ಯೋಜನೆಯಡಿ 2025ರ ಏಪ್ರಿಲ್‌ನಿಂದ ಈವರೆಗೂ ಪರಿಹಾರ ವಿತರಣೆಯಾಗಿಲ್ಲ. ಹೀಗಾಗಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಈ ಎರಡೂ ಯೋಜನೆಗಳಿಗೆ ಅನುದಾನದ ಕೊರತೆಯಿಂದ ಹಣ ಬಿಡುಗಡೆಯಾಗಿಲ್ಲ. ಎರಡೂ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ತನ್ನದೇ ಯೋಜನೆಗಳನ್ನು ಈಗ ತಾತ್ಸಾರ ಮಾಡುತ್ತಿರುವುದು ಹೈನುಗಾರರರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಯೋಜನೆಗಳಿಂದ ಸಿಗುವ ಪರಿಹಾರ ಹೈನುಗಾರರಿಗೆ ಉಂಟಾಗುವ ನಷ್ಟವನ್ನು ಸಂಪೂರ್ಣವಾಗಿ ತುಂಬಿಕೊಡುವುದಿಲ್ಲ. ಜಾನುವಾರುಗಳ ಅಂತ್ಯಕ್ರಿಯೆ ಮಾಡಿದ ಬಳಿಕ ನಾಲ್ಕು ಕಾಸು ಉಳಿಯಬಹುದಷ್ಟೆ. ದೊಡ್ಡ ದೊಡ್ಡ ಯೋಜನೆಗಳ ಅನುದಾನ ಬಿಡುಗಡೆಗೆ ವಿಳಂಬ ಮಾಡದ ಸರ್ಕಾರ ಬಡ ಹೈನುಗಾರರನ್ನು ಕಡೆಗಣಿಸುತ್ತಿರುವುದು ವಿಪರ್ಯಾಸ.
ಜಾನುವಾರುಗಳ ವಿಮೆ ಮಾಡಿಸಿಕೊಂಡಿವರಿಗೆ ಅನುಗ್ರಹ ಹಾಗೂ ಕಾಮಧೇನು ಮೂಲಕ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಈ ಯೋಜನೆಗಳ ಮಾರ್ಗಸೂಚಿ ಪ್ರಕಟಿಸುವ ಸಂದರ್ಭವೇ ಸರ್ಕಾರ ಸ್ಪಷ್ಟಪಡಿಸಿದೆ. ಅನುಗ್ರಹ ಯೋಜನೆ ಆರಂಭದಲ್ಲಿ ಅನರ್ಹರೂ ಕೂಡ ಪರಿಹಾರ ಪಡೆದದ್ದು ಬೆಳಕಿಗೆ ಬಂದ ಬಳಿಕ ಮಾರ್ಗಸೂಚಿಯನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಯೋಜನೆ ಹಳಿಗೆ ಬಂದಿತು ಎನ್ನುವಾಗಲೇ ಅನುದಾನ ಬಿಡುಗಡೆ ಸ್ಥಗಿತಗೊಳಿಸಲಾಗಿದೆ.
ಹಲವು ಹಂತದ ಪ್ರಕ್ರಿಯೆ
ಈ ಯೋಜನೆಗಳಲ್ಲಿ ಸಲೀಸಾಗಿ ಪರಿಹಾರ ನೀಡುವುದಿಲ್ಲ. ಜಾನುವಾರುಗಳು ಮೃತಪಟ್ಟ ಬಳಿಕ ಸ್ಥಳೀಯ ಪಶು ವೈದ್ಯರಿಗೆ ಮಾಹಿತಿ ನೀಡಬೇಕು. ವೈದ್ಯರು, ಫಲಾನುಭವಿ ಹಾಗೂ ಮೃತ ಜಾನುವಾರು ಇರುವ ಒಂದು ಫೋಟೋವನ್ನು ಜಿಪಿಎಸ್ ಸಹಿತ ದಾಖಲಿಸಬೇಕು. ಬಳಿಕ ಮೃತ ಜಾನುವಾರನ್ನು ಪಶುವೈದ್ಯರು ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕು. ಇದರ ಫೋಟೋವನ್ನೂ ಜಿಪಿಎಸ್‌ನೊಂದಿಗೆ ಅಪ್‌ಲೋಡ್ ಮಾಡಬೇಕು. ಇದೆಲ್ಲ ಪ್ರಕ್ರಿಯೆ ಆದ ಬಳಿಕ ಪಶುಪಾಲನ ಇಲಾಖೆ ತಾಲೂಕು ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು. ನಂತರ ಪರಿಶೀಲನಾ ಸಮಿತಿಯಲ್ಲಿ ಅರ್ಜಿ ಪರಿಶೀಲನೆ ನಡೆದು ಪ್ರತಿ ತಿಂಗಳು ನಿಗದಿತ ದಿನಾಂಕದಂದರು ಒಂದೇ ಬಾರಿಗೆ ಅಷ್ಟೂ ಅರ್ಜಿಗಳನ್ನು ಸರ್ಕಾರಕ್ಕೆ ಕಳಿಸಲಾಗುತ್ತದೆ.
ಅನುಗ್ರಹಕ್ಕೆ ಬಾಲಗ್ರಹ
ಅನುಗ್ರಹ ಯೋಜನೆ ಬಾಲಗ್ರಹದಿಂದ ಹೊರಗೆ ಬಂದಿಲ್ಲ. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ಈ ಯೋಜನೆ ಜಾರಿಗೆ ತಂದರು. ಅಂದಿನಿಂದಲೂ ತೆವಳುತ್ತಲೇ ಸಾಗಿದ ಯೋಜನೆಯನ್ನು 2019ರಲ್ಲಿ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು. 2023ರಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆದ ಮೇಲೆ ಈ ಯೋಜನೆಗೆ ಮರು ಚಾಲನೆ ನೀಡಿದರು. ಇದರ ಜತೆಗೆ ಹಸು, ಎಮ್ಮೆ ಸಾಕುವವರ ಅನುಕೂಲಕ್ಕಾಗಿ ಕಾಮಧೇನು ಯೋಜನೆಯನ್ನೂ ಜಾರಿಗೊಳಿಸಿದರು.
ಅಧಿಕಾರಿಗಳಿಗೆ ಪೀಕಲಾಟ
ಈ ಎರಡೂ ಯೋಜನೆಗಳಲ್ಲಿ ಪ್ರಥಮ ಪ್ರಾಶಸ್ತ್ಯ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ. ವರ್ಷಕ್ಕೆ ಇಲ್ಲವೇ ಎರಡು ವರ್ಷಕ್ಕೊಮ್ಮೆ ಬಿಡುಗಡೆಯಾಗುವ ಅನುದಾನದಲ್ಲಿ ಮೊದಲ ಎಸ್ಸಿ, ಎಸ್ಟಿ ಅರ್ಜಿದಾರರಿಗೆ ಪರಿಹಾರ ನೀಡಬೇಕು. ಬಳಿಕ ಹಣ ಉಳಿದರೆ ಅದನ್ನು ಬೇರೆ ಸಂತ್ರಸ್ತರಿಗೆ ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಇದೀಗ ಅನುಗ್ರಹ ಹಾಗೂ ಕಾಮಧೇನು ಯೋಜನೆಯ ಪರಿಹಾರಕ್ಕಾಗಿ ಕಾಯುತ್ತಿರುವವರೆಲ್ಲರೂ ಬಹುತೇಕ ಸಾಮಾನ್ಯ ವರ್ಗದವರೇ ಆಗಿದ್ದಾರೆ. ಅರ್ಜಿ ಸಲ್ಲಿಸಿದವರಿಗೆ ಉತ್ತರ ಹೇಳುವುದು ಅಧಿಕಾರಿಗಳಿಗೆ ತಲೆನೋವಾಗಿದೆ.
ಹೀಗಿರಲಿದೆ ಪರಿಹಾರ
3ರಿಂದ 6 ತಿಂಗಳೊಳಗಿನ ಕುರಿ, ಮೇಕೆಗೆ- 5 ಸಾವಿರ ರೂ.
6 ತಿಂಗಳು ಮೇಲ್ಪಟ್ಟ ಕುರಿ, ಮೇಕೆಗೆ- 7,500 ರೂ.
ದನ, ಎಮ್ಮೆಗಳಿಗೆ-15 ಸಾವಿರ ರೂ.
ಕರುಗಳಿಗೆ ಕನಿಷ್ಠ-5 ಸಾವಿರ ರೂ.
ಯಾವ ಯೋಜನೆಯಲ್ಲಿ, ಎಷ್ಟು ಬಾಕಿ?
ಜಿಲ್ಲೆಯಲ್ಲಿ 2025ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಮೃತಪಟ್ಟ ಕುರಿ, ಮೇಕೆಗಳ 1,096 ಸಾಕಣೆದಾರರಿಗೆ ಅನುಗ್ರಹ ಯೋಜನೆ ಮೂಲಕ 75.07 ಲಕ್ಷ ರೂ. ಪರಿಹಾರ ನೀಡಲಾಗಿದೆ. 2025ರ ಅಕ್ಟೋಬರ್‌ನಿಂದ ಇದುವರೆಗೂ ಪರಿಹಾರ ಮಂಜೂರಾಗಿಲ್ಲ. ಜೂನ್ ಅಂತ್ಯಕ್ಕೆ ಸರ್ಕಾರದಿಂದ ಬಿಡುಗಡೆ ಆಗಬೇಕಿರುವ ಮೊತ್ತ 67,19,500 ರೂಪಾಯಿ. ಈ ಅವಧಿಯಲ್ಲಿ ಮೃತಪಟ್ಟ ಜಾನುವಾರುಗಳ ಸಂಖ್ಯೆ 954. ಕಾಮಧೇನು ಯೋಜನೆಯಲ್ಲಿ 2025ರ ಏಪ್ರಿಲ್‌ನಿಂದ 2026ರ ಮಾರ್ಚ್ ಅಂತ್ಯದವರೆಗೆ 1,191 ಫಲಾನುಭವಿಗಳಿಗೆ 1.78 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಈ ವರ್ಷ ಏಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ 242 ಫಲಾನುಭವಿಗಳಿಗೆ 36.30 ಲಕ್ಷ ರೂ. ಬಿಡುಗಡೆ ಆಗಬೇಕು. 1,433 ಫಲಾನುಭವಿಗಳಿಗೆ 2,14,95,000 ರೂ. ಬಿಡುಗಡೆ ಆಗಬೇಕಿದೆ.
ಸರ್ಕಾರದಿಂದ ಅನುಗ್ರಹ ಹಾಗೂ ಕಾಮಧೇನು ಯೋಜನೆ ಮೂಲಕ ಅನುದಾನ ಬಿಡುಗಡೆಯಾದ ಕೂಡಲೇ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆಯಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಬಾಕಿ ಇರುವ ಮೊತ್ತ ಬಿಡುಗಡೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
— ಡಾ. ಕೆ.ಎಂ.ನಾಗರಾಜ ಪಶುಪಾಲನಾ ಇಲಾಖೆ ಉಪನಿರ್ದೇಶಕ