ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿರುವ ಬಸ್‌ಗಳು. 
ಶಿವಮೊಗ್ಗ

363 ಗ್ರಾಮಕ್ಕಿಲ್ಲ ಸರ್ಕಾರಿ ಬಸ್ । KSRTC BUS

ಪ್ರಮುಖ ಮುಖ್ಯಾಂಶಗಳು

  • ತೀರ್ಥಹಳ್ಳಿ, ಹೊಸನಗರದಲ್ಲೇ ಹೆಚ್ಚು, ಹೆಚ್ಚುವರಿ ಬಸ್‌ಗೆ ಬೇಡಿಕೆ
  • ಶಿವಮೊಗ್ಗ ಜಿಲ್ಲೆಯಲ್ಲೂ ನಾಲ್ಕು ಡಿಪೋಗಳಲ್ಲಿವೆ 339 ವಾಹನ
  • ಶಕ್ತಿ ಯೋಜನೆ ಜಾರಿಯಾದ ಬಳಿಕ ನಾರಿಯರ ಓಡಾಟ ಹೆಚ್ಚಳ
ನವೀನ್ ಬಿಲ್ಗುಣಿ ಶಿವಮೊಗ್ಗ
ಶಕ್ತಿ ಯೋಜನೆ ಜಾರಿಯಾದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲೂ ಕೆಎಸ್‌ಆರ್‌ಟಿಸಿ(Ksrtc) ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಲೆನಾಡಿನ 300ಕ್ಕೂ ಅಧಿಕ ಗ್ರಾಮಗಳು ಸರ್ಕಾರಿ ಬಸ್ ಸೇವೆ ನಿರೀಕ್ಷೆಯಲ್ಲಿವೆ. ಆದರೆ ಸಮರ್ಪಕ ರಸ್ತೆ ಸಮಸ್ಯೆ ಒಳಗೊಂಡಂತೆ ನಾನಾ ಕಾರಣಗಳಿಂದ ಗ್ರಾಮೀಣ ಭಾಗದ ಜನರು ಸರ್ಕಾರಿ ಬಸ್(Govt bus) ಸೇವೆಯಿಂದ ವಂಚಿತರಾಗಿದ್ದಾರೆ.
ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗವು ಮಧ್ಯ ಕರ್ನಾಟಕ(karnataka) ಭಾಗಕ್ಕೆ ಸಂಪರ್ಕ ಸೇತುವೆಯಾಗಿದೆ. ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುತ್ತಿದೆ. ಶಕ್ತಿ ಯೋಜನೆ(Shakti yojane) ಬಳಿಕ ನಾರಿಯರ ಓಡಾಟ ಹೆಚ್ಚಾಗಿದೆ. ಆದರೆ ಜಿಲ್ಲೆಯ 363 ಹಳ್ಳಿಗಳಿಗೆ ಸರ್ಕಾರಿ ಬಸ್ ಸೇವೆ ಮರೀಚಿಕೆಯಾಗಿದೆ.
ಶಿವಮೊಗ್ಗ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ ಮತ್ತು ಸಾಗರ ಡಿಪೋಗಳಿವೆ. ನಿತ್ಯವೂ ಸಾವಿರಕ್ಕೂ ಅಧಿಕ ಟ್ರಿಪ್‌(More trip)ಗಳು ಸಂಚರಿಸುತ್ತಿವೆ. ಜಿಲ್ಲೆಯಲ್ಲಿ 1,496 ಗ್ರಾಮಗಳಿದ್ದು, ಪ್ರಸ್ತುತ 1133 ಗ್ರಾಮಗಳಿಗೆ ಸರ್ಕಾರಿ ಬಸ್‌ಗಳ ಸಂಪರ್ಕವಿದೆ. ಆದರೂ ಬೇಡಿಕೆ ಇರುವ ಹಳ್ಳಿಗಳಿಗೂ ಸದ್ಯಕ್ಕೆ ಬಸ್ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.
ಖಾಸಗಿ ಜತೆಗೆ ಪೈಪೋಟಿ: ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳು ಖಾಸಗಿ ಬಸ್‌ಗಳ ಜತೆ ಪೈಪೋಟಿ ನಡೆಸುವಂತಾಗಿದೆ. ಮಲೆನಾಡು ಭಾಗದಲ್ಲಿ ಕೆಎಸ್‌ಆರ್‌ಟಿಸಿಗಿಂತ ಖಾಸಗಿ ಬಸ್‌ಗಳ ಸಂಪರ್ಕ ದೊಡ್ಡಮಟ್ಟದಲ್ಲಿದೆ. ಸರ್ಕಾರಿ ಬಸ್‌ಗಳು ತೆರಳದ ಬಹಳಷ್ಟು ಹಳ್ಳಿಗಳಿಗೆ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಆದರೆ ಇದೀಗ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಳಿಕ ಖಾಸಗಿ ಬಸ್‌ಗಳ ಸಂಪರ್ಕಜಾಲ ಇರುವ ಕಡೆಗೂ ಸರ್ಕಾರಿ ಬಸ್‌ಗಳನ್ನು ಓಡಿಸುವಂತೆ ವಿಭಾಗಕ್ಕೆ ಗ್ರಾಮಸ್ಥರು ಮೊರೆ ಹೋಗುತ್ತಿದ್ದಾರೆ.

ಭದ್ರಾವತಿ, ಶಿಕಾರಿಪುರಕ್ಕೆ ಹೆಚ್ಚು ಸಂಪರ್ಕ

ಭದ್ರಾವತಿ ತಾಲೂಕಿನಲ್ಲಿ 140ಕ್ಕೂ ಅಧಿಕ ಮತ್ತು ಶಿಕಾರಿಪುರ ತಾಲೂಕಿನಲ್ಲಿ 170ಕ್ಕೂ ಹಳ್ಳಿಗಳಿವೆ. ಕ್ರಮವಾಗಿ 9 ಮತ್ತು 6 ಹಳ್ಳಿಗಳಿಗೆ ಸರ್ಕಾರಿ ಬಸ್ ಸಂಪರ್ಕವಿಲ್ಲ. ಉಳಿದ ಹಳ್ಳಿಗಳಲ್ಲಿ ಸಾರಿಗೆ ಸಂಪರ್ಕ ಜಾಲವಿದೆ. ತೀರ್ಥಹಳ್ಳಿಯಲ್ಲಿ 133, ಹೊಸನಗರದಲ್ಲಿ 94, ಸಾಗರದಲ್ಲಿ 63, ಸೊರಬದಲ್ಲಿ 34, ಶಿವಮೊಗ್ಗದಲ್ಲಿ 24 ಗ್ರಾಮಗಳಿಗೆ ಸರ್ಕಾರಿ ಬಸ್‌ಗಳ ಸಂಪರ್ಕವಿಲ್ಲ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ 240ಕ್ಕೂ ಅಧಿಕ ಮತ್ತು ಹೊಸನಗರ ತಾಲೂಕು 200ಕ್ಕೂ ಅಧಿಕ ಹಳ್ಳಿಗಳನ್ನು ಒಳಗೊಂಡಿವೆ. ಬಹಳಷ್ಟು ಗ್ರಾಮಗಳಲ್ಲಿ ಸರಿಯಾದ ರಸ್ತೆ ಸರಿಯಿಲ್ಲದ್ದರಿಂದ ಸರ್ಕಾರಿ ಸಾರಿಗೆ ಸೇವೆ ಪಡೆಯಲು ಜನರು ಪರದಾಡುವಂತಾಗಿದೆ. ಈ ನಡುವೆ ಈಗಾಗಲೇ ಓಡಾಡುತ್ತಿರುವ ಹಳ್ಳಿಗಳಲ್ಲೇ ಹೆಚ್ಚುವರಿ ಸರ್ಕಾರಿ ಬಸ್‌ಗಳನ್ನು ಓಡಿಸುವಂತೆ ಶಿವಮೊಗ್ಗ ವಿಭಾಗಕ್ಕೆ ಗ್ರಾಮಸ್ಥರು ಒತ್ತಡ ಹಾಕುತ್ತಿದ್ದಾರೆ.

44 ಹೊಸ ಬಸ್‌ಗಳ ಸಂಚಾರ

ಜಿಲ್ಲೆಯಲ್ಲಿ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಮತ್ತು ವೇಗದೂತ ಸೇರಿ 350ಕ್ಕೂ ಅಧಿಕ ಬಸ್‌ಗಳು ಶಕ್ತಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ. ನಾರಿಯರ ಉಚಿತ ಪ್ರಯಾಣ ಎಲ್ಲ ಮಾರ್ಗಗಳಲ್ಲೂ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಶಿವಮೊಗ್ಗ-ಭದ್ರಾವತಿ, ಶಿವಮೊಗ್ಗ-ಚಿತ್ರದುರ್ಗ ಮತ್ತು ಶಿವಮೊಗ್ಗ-ದಾವಣಗೆರೆ, ಶಿವಮೊಗ್ಗ-ಸಾಗರ ಮಾರ್ಗಗಳಲ್ಲಿ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದು ನಾರಿಯರಿಂದಲೇ ಭರ್ತಿ ಆಗುತ್ತಿವೆ. ಶಿವಮೊಗ್ಗ ವಿಭಾಗದಲ್ಲಿ ಶಕ್ತಿ ಯೋಜನೆ ಪರಿಣಾಮ ಅಶ್ವಮೇಧ ಸೇರಿ ಹೊಸದಾಗಿ 44 ಬಸ್‌ಗಳನ್ನು ಓಡಿಸಲಾಗುತ್ತಿದೆ.

6.73 ಕೋಟಿ ನಾರಿಯರ ಪ್ರಯಾಣ

2023ರ ಜೂ.11ರಂದು ಶಿವಮೊಗ್ಗ ವಿಭಾಗದಲ್ಲೂ ಶಕ್ತಿ ಯೋಜನೆ ಜಾರಿಗೊಂಡಿತ್ತು. ಅಲ್ಲಿಂದ ಭಾನುವಾರ(ಫೆ.15)ದವರೆಗೆ ಐದು ಡಿಪೋಗಳ ವ್ಯಾಪ್ತಿಯಲ್ಲಿ 6,73,42,644 ನಾರಿಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಮೂಲಕ ಸಾರಿಗೆ ನಿಗಮಕ್ಕೆ 254.38 ಕೋಟಿ ರೂ. ಆದಾಯ ಸಂದಾಯವಾಗಿದೆ.
"

ಶಿವಮೊಗ್ಗ ವಿಭಾಗದ ನಾಲ್ಕು ಡಿಪೋಗಳ ವ್ಯಾಪ್ತಿಯಲ್ಲಿ 363 ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಇಲ್ಲ. ಅದರಲ್ಲಿ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಜಾಲವಿಲ್ಲ. ಶಕ್ತಿ ಯೋಜನೆ ಬಳಿಕ ಸಾಕಷ್ಟು ಗ್ರಾಮಗಳಿಗೆ ಬಸ್ ಓಡಿಸುವಂತೆ ಬೇಡಿಕೆ ಬರುತ್ತಿದೆ. ಸಂಪರ್ಕ ಜಾಲ ನೋಡಿಕೊಂಡು ತೀರ್ಮಾನಿಸಲಾಗುವುದು.