ಕೆ.ಜೆ.ಜಾರ್ಜ್, ಇಂಧನ ಸಚಿವ 
ಶಿವಮೊಗ್ಗ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಬಲವಂತವಿಲ್ಲ I sharavti pumped

ಪ್ರಮುಖ ಮುಖ್ಯಾಂಶಗಳು

  • ನಿಯಮಾನುಸಾರ ಅನುಮತಿ ದೊರೆತ ಬಳಿಕವೇ ಜಾರಿ
  • ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ
ಶಿವಮೊಗ್ಗ: ಶರಾವತಿ (Sharavati) ಪಂಪ್ಡ್ ಸ್ಟೋರೇಜ್ (pumped storage) ಯೋಜನೆ ರಾಜ್ಯದ ಜನರಿಗೆ ಪ್ರಯೋಜನವಾಗಲಿದೆ. ಇದರಿಂದ ಎರಡು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯಾಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ (georje) ಪುನರುಚ್ಚರಿಸಿದ್ದಾರೆ.
ಆರಂಭದಿಂದಲೂ ಯೋಜನೆಗೆ ಒಲವು ಹೊಂದಿರುವ ಜಾರ್ಜ್, ಮಲೆನಾಡಿನ ಜನರ ತೀವ್ರ ಪ್ರತಿರೋಧದ ಬಳಿಕವೂ ಈ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಾವತಿ ಪಂಪ್ ಹೌಸ್ ಪ್ರಾಜೆಕ್ಟ್‌ನಲ್ಲಿ ಪಂಪ್ ಹೌಸ್‌ಗೆ 25 ಎಕರೆ ಭೂಮಿ ಬಳಕೆಯಾಗಲಿದೆ. ನೀರನ್ನು ಮೇಲಕ್ಕೆತ್ತಲು ಪೈಪ್‌ಲೈನ್ ಅಳವಡಿಸಿ ಮಣ್ಣು ಮುಚ್ಚಲಾಗುತ್ತದೆ. ಬಳಿಕ ಮತ್ತೆ ಅಲ್ಲಿ ಅರಣ್ಯ ಬೆಳೆಸಲಾಗುತ್ತದೆ ಎಂದರು.
ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ವಿದ್ಯುತ್ ಉತ್ಪಾದನೆಯಾದ ಬಳಿಕ ನೀರು ಸಮುದ್ರಕ್ಕೆ ಹರಿದುಹೋಗುತ್ತದೆ. ಆ ನೀರನ್ನು ಪಂಪ್ ಮಾಡಿ ವಾಪಸ್ ಅಣೆಕಟ್ಟಿಗೆ ತಂದು ಕೆಲವೇ ನಿಮಿಷಗಳಲ್ಲಿ ವಿದ್ಯುತ್ ಉತ್ಪಾದಿಸುವುದೇ ಪಂಪ್ಡ್ ಸ್ಟೋರೇಜ್ ಯೋಜನೆ. ಆಂಧ್ರಪ್ರದೇಶದಲ್ಲಿ ಗ್ರೀನ್ ಕೋ ಸಂಸ್ಥೆ ಕೈಗೊಂಡಿರುವ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರದೇಶಕ್ಕೆ ಭೇಟಿ ಮಾಡಿ ಪರಿಶೀಲಿಸಿದ್ದೇನೆ. ಅಲ್ಲಿ ಅತ್ಯುತ್ತಮ ರೀತಿಯಲ್ಲಿ ಯೋಜನೆ ಜಾರಿಯಾಗಿದೆ ಎಂದು ಹೇಳಿದರು.
ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ನಲ್ಲಿ ನೀರಿನ ಆವಿ ಪ್ರಮಾಣ ಕೇವಲ ಶೇ.5ರಷ್ಟು. ನಿರಂತರವಾಗಿ ನೀರು ಬಳಸಿಕೊಂಡು ವಿದ್ಯುತ್ ಉತ್ಪಾದಿಸಬಹುದು. ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸುರಂಗ ಕಾಮಗಾರಿಗಳು ಪರಿಸರ ನಿಯಮಗಳ ಪ್ರಕಾರವೇ ನಡೆಯುತ್ತಿವೆ. ಅದೇ ರೀತಿ ಈ ಯೋಜನೆಯಲ್ಲೂ ಎಲ್ಲ ನಿಯಮ ಪಾಲಿಸಲಾಗುವುದು ಎಂದು ತಿಳಿಸಿದರು.
ಯೋಜನೆ ಆರಂಭಿಸುವ ಮೊದಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಸೇರಿದಂತೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆಯಬೇಕಾಗುತ್ತದೆ. ರಾಷ್ಟ್ರೀಯ ಮಟ್ಟದ ತಜ್ಞರ ಸಮಿತಿಯೂ ಅಧ್ಯಯನ ನಡೆಸಿ ಅನುಮೋದನೆ ನೀಡಿದ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
"

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಯೋಜನೆಯ ಸಂಪೂರ್ಣ ಮಾಹಿತಿ ತಿಳಿದರೆ ವಿರೋಧಿಸುವ ಅಗತ್ಯವಿಲ್ಲ. ಸರ್ಕಾರ ಯಾರ ಮೇಲೂ ಬಲವಂತವಾಗಿ ಯೋಜನೆ ಹೇರಲು ಮುಂದಾಗಿಲ್ಲ. ನಿಯಮಾನುಸಾರ ಅನುಮತಿ ದೊರೆತ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.

— -ಕೆ.ಜೆ.ಜಾರ್ಜ್, ಇಂಧನ ಸಚಿವ