ಶಿಕಾರಿಪುರದ ಸರ್ಕಾರಿ ಆಸ್ಪತ್ರೆ.
- ರೋಗಿಗಳ ಸಂಖ್ಯೆ ಹೆಚ್ಚಿದ್ದರೂ ಸೌಲಭ್ಯವಿಲ್ಲ
- ಪ್ರತಿದಿನ ಬೇಕಿದೆ 10 ಯೂನಿಟ್ ರಕ್ತ
- ತಾಲೂಕು ಆಸ್ಪತ್ರೆಗಿಲ್ಲ ಬ್ಲಡ್ ಬ್ಯಾಂಕ್
- 150 ಬೆಡ್ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆ
- ಪ್ರತಿದಿನ ಸಹಸ್ರಾರು ರೋಗಿಗಳ ತಪಾಸಣೆ
ಶಿಕಾರಿಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆ ತಾಲೂಕಿನ ಜನರಿಗಷ್ಟೇ ಅಲ್ಲದೆ ಸುತ್ತಮುತ್ತ ತಾಲೂಕಿನ ರೋಗಿಗಳಿಗೂ ಆಸರೆಯಾಗಿದೆ. ಆದರೆ ಬ್ಲಡ್ಬ್ಯಾಂಕ್ ಕೊರತೆಯೊಂದು ಎಲ್ಲ ಸೌಲಭ್ಯಗಳನ್ನು ಗೌಣವಾಗಿಸಿದೆ.
ನೂತನವಾಗಿ ನಿರ್ಮಿಸಿರುವ ತಾಯಿ&ಮಕ್ಕಳ ಆಸ್ಪತ್ರೆ ಸಹ ಸುಸಜ್ಜಿತವಾಗಿದೆ. ತಜ್ಞ ವೈದ್ಯರು ಇರುವುದರಿಂದ ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹಿರೇಕೆರೂರು, ರಟ್ಟಿಹಳ್ಳಿ, ನ್ಯಾಮತಿ, ಹೊನ್ನಾಳಿ, ಸೊರಬ ತಾಲೂಕಿನ ಬಹುತೇಕ ರೋಗಿಗಳು ಆಗಮಿಸುತ್ತಾರೆ. ಪ್ರತಿದಿನ ಸರ್ಕಾರಿ ಆಸ್ಪತ್ರೆಯಲ್ಲಿ 800ಕ್ಕೂ ಅಧಿಕ ಹೊರ ರೋಗಿಗಳು, ತಾಯಿ&ಮಕ್ಕಳ ಆಸ್ಪತ್ರೆಯಲ್ಲಿ 400ಕ್ಕೂ ಹೆಚ್ಚು ರೋಗಿಗಳು ಆಗಮಿಸುತ್ತಾರೆ. ಆದರೆ ಅಗತ್ಯವಿರುವ ಬ್ಲಡ್ ಬ್ಯಾಂಕ್ ಇಲ್ಲದಿರುವುದು ರೋಗಿಗಳಿಗೆ ತೊಂದರೆಯಾಗಿದೆ.
150 ಬೆಡ್ ವ್ಯವಸ್ಥೆ ಹೊಂದಿರುವ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ&ಮಕ್ಕಳ ಆಸ್ಪತ್ರೆ ಸೇರಿ ಪ್ರತಿದಿನ ಕನಿಷ್ಠ 10 ಯೂನಿಟ್ ರಕ್ತದ ತುರ್ತು ಅಗತ್ಯವಿರುತ್ತದೆ. ಆದ್ದರಿಂದ ಇಲ್ಲಿ ರಕ್ತನಿಧಿ ಕೇಂದ್ರ ಸ್ಥಾಪನೆ ಆಗುವುದು ತುಂಬ ತುರ್ತಿದೆ.
ಶಿಕಾರಿಪುರ ತಾಯಿ&ಮಕ್ಕಳ ಆಸ್ಪತ್ರೆಯಲ್ಲಿ ಪ್ರಸವಕ್ಕೆ ದಾಖಲಾಗುವ ಗರ್ಭಿಣಿಯರು, ತೀವ್ರ ರಕ್ತಹಿನತೆಯಿಂದ ಬಳಲುವವರು ಬರುತ್ತಾರೆ. ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ರಕ್ತ ನೀಡಬೇಕಾದ ಸಂದರ್ಭಗಳು ನಿರಂತರವಾಗಿ ಎದುರಾಗುತ್ತವೆ. ಇವುಗಳ ಜತೆಗೆ ರಸ್ತೆ ಅಪಘಾತಗಳಲ್ಲಿ ತೀವ್ರ ಗಾಯಗೊಂಡವರು, ತುರ್ತು ಶಸಚಿಕಿತ್ಸೆಗೆ ಒಳಗಾಗುವ ರೋಗಿಗಳು, ಡಯಾಲಿಸಿಸ್ ಪಡೆಯುವ ರೋಗಿಗಳಿಗೆ ರಕ್ತದ ಅಗತ್ಯ ಬಹಳಷ್ಟಿದೆ. ಈ ಆಸ್ಪತ್ರೆಗಳ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿದಿನ ಕನಿಷ್ಠ 10 ಯೂನಿಟ್ ರಕ್ತದ ಬೇಡಿಕೆ ಇದ್ದೇ ಇರುತ್ತದೆ. ಈ ಎಲ್ಲ ಕಾರಣಗಳಿಂದ ಶ್ರೀವಾಗಿ ರಕ್ತನಿಧಿ ಸ್ಥಾಪಿಸಬೇಕಿದೆ.
ಮಂಜೂರಾದರೂ ಅರ್ಧಕ್ಕೆ ಸ್ಥಗಿತ
ಶಿಕಾರಿಪುರಕ್ಕೆ ರಕ್ತನಿಧಿ ಕೇಂದ್ರ (ಬ್ಲಡ್ಬ್ಯಾಂಕ್) ಈಗಾಗಲೇ ಮಂಜೂರಾಗಿದೆ. ಸರ್ಕಾರದಿಂದ 1.25 ಕೋಟಿ ರೂ.ಮೌಲ್ಯದ ರಕ್ತ ಸಂಗ್ರಹ ಉಪಕರಣಗಳು, ಕೂಲಿಂಗ್ ವ್ಯವಸ್ಥೆ ಹಾಗೂ ತಾಂತ್ರಿಕ ಸಾಮಗ್ರಿ ಆಸ್ಪತ್ರೆಗೆ ಸರಬರಾಜಾಗಿವೆ. ಆದರೆ ಇವುಗಳನ್ನು ಅಳವಡಿಸಿ, ಪೂರ್ಣಪ್ರಮಾಣದ ರಕ್ತನಿಧಿ ಕೇಂದ್ರ ಆರಂಭಿಸಲು ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ಯೋಜನೆ ಸ್ಥಗಿತಗೊಂಡಿದೆ.
ರಕ್ತನಿಧಿ ಕೇಂದ್ರ ಇಲ್ಲದ ಕಾರಣ ತುರ್ತು ಸಮಯದಲ್ಲಿ ರೋಗಿಗಳ ಸಂಬಂಧಿಕರು ಶಿವಮೊಗ್ಗ ಅಥವಾ ಹತ್ತಿರದ ನಗರಗಳಿಗೆ ಓಡಾಡಬೇಕಾದ ದುಸ್ಥಿತಿ ಇದೆ. ಶಿವಮೊಗ್ಗಕ್ಕೆ ತೆರಳಿ ರಕ್ತ ತರುವುದರೊಳಗೆ ಸಮಯ ವ್ಯರ್ಥವಾಗಿ ರೋಗಿಯ ಜೀವಕ್ಕೆ ಅಪಾಯ ಒದಗುವ ಸಂಭವ ಇರುತ್ತದೆ. ಬಡ ಹಾಗೂ ಗ್ರಾಮೀಣ ಭಾಗದ ಕುಟುಂಬಗಳಿಗೆ ಇದು ಆರ್ಥಿಕವಾಗಿ, ಮಾನಸಿಕವಾಗಿ ದೊಡ್ಡ ಹೊರೆಯಾಗಿದೆ. ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು, ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಆಸ್ಪತ್ರೆ ಅಭಿವೃದ್ಧಿ ಸಮಿತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಾರ್ವಜನಿಕರ ಹಿತದೃಷ್ಟಿ, ಗರ್ಭಿಣಿಯರು, ಮಕ್ಕಳ ಸುರತೆಯ ಕಾರಣದಿಂದ ಆದಷ್ಟು ಬೇಗ ಬ್ಲಡ್ಬ್ಯಾಂಕ್ಗೆ ಸೂಕ್ತ ಸ್ಥಳ ಒದಗಿಸಬೇಕಿದೆ.
ಶಿಕಾರಿಪುರದಲ್ಲಿ ಈಗ ಜಿಲ್ಲಾ ಮಟ್ಟದ ಸೌಲಭ್ಯವುಳ್ಳ 150 ಹಾಸಿಗೆಯ ಆಸ್ಪತ್ರೆಯಿದೆ. ಆಸ್ಪತ್ರೆಗಾಗಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಹೊಸಕಟ್ಟಡ ಲೋಕಾರ್ಪಣೆಯಾದ ನಂತರ ಹಳೆಯ ಆಸ್ಪತ್ರೆಯ ಹಲವು ಟಕಗಳು ಅಲ್ಲಿಗೆ ವರ್ಗಾವಣೆ ಆಗುತ್ತವೆ. ಈಗಾಗಲೇ ಬ್ಲಡ್ಬ್ಯಾಂಕ್ಗಾಗಿ ಉಪಕರಣಗಳು ಬಂದಾಗಿದೆ. ಶಿವಮೊಗ್ಗ ರಸ್ತೆಯಲ್ಲಿ 150 ಹಾಸಿಗೆಯ ತಾಯಿ&ಮಕ್ಕಳ ಸುಸಜ್ಜಿತ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಶ್ರೀದಲ್ಲಿ ಬ್ಲಡ್ಬ್ಯಾಂಕ್ ನಿರ್ಮಾಣ ಆಗಲಿದೆ.
ಸರ್ಕಾರಿ ಆಸ್ಪತ್ರೆಗೆ ನಮ್ಮ ತಾಲೂಕು ಮಾತ್ರವಲ್ಲದೆ ಬೇರೆ ಬೇರೆ ತಾಲೂಕುಗಳಿಂದ ರೋಗಿಗಳು ಬರುತ್ತಾರೆ. ತಾಯಿ&ಮಕ್ಕಳ ಆಸ್ಪತ್ರೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಆಗಮಿಸುತ್ತಿದ್ದಾರೆ. ಆದ್ದರಿಂದ ಎರಡೂ ಆಸ್ಪತ್ರೆಗಳಿಗೆ ದಿನಕ್ಕೆ ಸುಮಾರು 10 ಯೂನಿಟ್ ರಕ್ತದ ಅಗತ್ಯವಿದೆ. ಜಾಗದ ಕೊರತೆಯಿಂದ ಸಮಸ್ಯೆಯಾಗಿದೆ. ಶ್ರೀದಲ್ಲಿ ಹೊಸಕಟ್ಟಡಕ್ಕೆ ಆಸ್ಪತ್ರೆಯ ಪ್ರಮುಖ ಟಕಗಳು ಸ್ಥಳಾಂತರವಾದ ನಂತರ ಬ್ಲಡ್ಬ್ಯಾಂಕ್ ಸ್ಥಾಪಿಸಲಾಗುವುದು.
ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ, 1ಎಸ್ಕೆಪಿ ಡಾ.ನಿರಂಜನ್
ಪ್ರತಿ ತಿಂಗಳು 300&350 ಹೆರಿಗೆಗಳಾಗುತ್ತವೆ . ಇದರಲ್ಲಿ ಬಹುಪಾಲು ಸಿಸೇರಿಯನ್ ಇರುವುದರಿಂದ ರಕ್ತದ ಅಗತ್ಯತೆ ಜಾಸ್ತಿ ಇರುತ್ತದೆ. ಆದಷ್ಟು ಬೇಗ ಬ್ಲಡ್ಬ್ಯಾಂಕ್ ಆರಂಭವಾದರೆ ಈ ಭಾಗದ ಮಹಿಳೆಯರು&ಮಕ್ಕಳಿಗೆ ಅನುಕೂಲವಾಗುತ್ತದೆ.
> ಡಾ. ಶಿವಾನಂದ್, ತಾಯಿ&ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ
ಪೆಥಾಲಜಿಸ್ಟ್ ಒಬ್ಬರನ್ನು ಸರ್ಕಾರ ಬ್ಲಡ್ ಬ್ಯಾಂಕ್ಗೆ ಪೂರಕವಾಗಿ (ಬ್ಲಡ್ ಬ್ಯಾಂಕ್ ಆಫೀಸರ್) ಹಾವೇರಿಯಿಂದ ವರ್ಗಾವಣೆ ಮಾಡಿದೆ. ಆದರೆ ಬ್ಲಡ್ಬ್ಯಾಂಕ್ ನಿರ್ಮಾಣ ಕುಂಟುತ್ತ ಸಾಗಿದೆ. ಈ ಬಗ್ಗೆ ಶಾಸಕ ಬಿ.ವೈ.ವಿಜಯೇಂದ್ರ ಅವರು ಶ್ರೀವಾಗಿ ಬ್ಲಡ್ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.