ಸಾಗರದ ಶಾಂತವೇರಿ ಗೋಪಾಲ ಗೌಡ ಕ್ರೀಡಾಂಗಣದಲ್ಲಿ ಶುಕ್ರವಾರ ಹೆಲಿ ಟೂರಿಸಂಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಶ್ರೀನಿವಾಸ್, ಕಿರಣ್ ದೊಡ್ಮನಿ, ರಾಜೀವ್ ಪೈಲೆಟ್ ಇತರರಿದ್ದರು. 
ಶಿವಮೊಗ್ಗ

ಪ್ರವಾಸೋದ್ಯಮಕ್ಕಿದೆ ವಿಪುಲ ಅವಕಾಶ | Heli Tourism

ಸಾಗರ: ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಅದನ್ನು ನಾವು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು. ಪ್ರತಿ ಬಜೆಟ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕನಿಷ್ಠ 10 ಸಾವಿರ ಕೋಟಿ ರೂ. ಮೀಸಲು ಇರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದ ಶಾಂತವೇರಿ ಗೋಪಾಲ ಗೌಡ ಕ್ರೀಡಾಂಗಣದಲ್ಲಿ ಶುಕ್ರವಾರ ಹೆಲಿ ಟೂರಿಸಂಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರವಾಸೋದ್ಯಮ ಆರ್ಥಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತದೆ. ಹಿಂದಿನ ಸರ್ಕಾರಗಳು ಪ್ರವಾಸೋದ್ಯಮ ಕಡೆಗಣಿಸಿ ಬಜೆಟ್‌ನಲ್ಲಿ ಕಡಿಮೆ ಅನುದಾನ ನೀಡುತ್ತಿದ್ದವು. ನಮ್ಮ ಸರ್ಕಾರ ಅದನ್ನು ಹೆಚ್ಚಿಸಿದೆ ಎಂದರು.
ಜೋಗ ಜಲಪಾತವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 180 ಕೋಟಿ ರೂ. ವಿನಿಯೋಗಿಸುತ್ತಿದೆ. ತ್ರಿಸ್ಟಾರ್ ಹೋಟೆಲ್, ರೋಪ್‌ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಏಪ್ರಿಲ್ನಲ್ಲಿ ಜೋಗ ಜಲಪಾತ ಪ್ರದೇಶದಲ್ಲಿ ಕಾಮಗಾರಿ ಪೂರ್ಣ ಅಭಿವೃದ್ಧಿ ಆಗಿದ್ದನ್ನು ಮತ್ತು ಹಸಿರುಮಕ್ಕಿ ಸೇತುವೆಯನ್ನು ಮುಖ್ಯಮಂತ್ರಿಗಳಿಂದಲೇ ಉದ್ಘಾಟಿಸುವ ಆಲೋಚನೆ ಇದೆ ಎಂದು ತಿಳಿಸಿದರು.
ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಹೆಲಿ ಟೂರಿಸಂ ಪ್ರಖ್ಯಾತಿ ಗಳಿಸಿದೆ. ಜೋಗ ಜಲಪಾತ ಅಭಿವೃದ್ಧಿ ನಂತರ ಸಾಧ್ಯವಾದರೆ ಅಲ್ಲಿಯೂ ಹೆಲಿ ಟೂರಿಸಂಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ಜನರಿಗೆ ಹೊಸಹೊಸ ಅವಕಾಶಗಳು ಸಿಗಬೇಕು. ಜನರ ಸಹಕಾರವೂ ಮುಖ್ಯ ಎಂದು ಹೇಳಿದರು.
ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್, ಕಿರಣ್ ದೊಡ್ಮನಿ, ರಾಜೀವ್ ಪೈಲೆಟ್, ಸುಂದರ ಸಿಂಗ್, ಟಿ.ವಿ.ಪಾಂಡುರಂಗ, ಚೇತನರಾಜ್ ಕಣ್ಣೂರು, ಟಿ.ಪಿ.ರಮೇಶ್ , ಗಣಪತಿ ಮಂಡಗಳಲೆ ಇತರರಿದ್ದರು.