ಶಿವಮೊಗ್ಗ: ಒಂದು ಮಗುವಿಗೆ ಕುಟುಂಬದ ಪ್ರೀತಿ ಸಿಕ್ಕರೆ, ಒಂದು ಬದುಕಿಗೆ ಹೊಸ ಭರವಸೆ ಸಿಕ್ಕಂತೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ನ್ಯಾಯಪೀಠ) ಅಧ್ಯಕ್ಷ ತಾಜುದ್ದೀನ್ ಖಾನ್ ಹೇಳಿದರು.
ನಗರದ ಮೈತ್ರಿ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ಪ್ರಸಕ್ತ ಸಾಲಿನ ದತ್ತು ಮಾಸಾಚರಣೆ ಅಂಗವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಕಾನೂನುಬದ್ಧ ದತ್ತು ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪೋಷಕರಾಗಲು ಅಡ್ಡದಾರಿಗಳಿಲ್ಲ, ಕಾನೂನುಬದ್ಧ ದತ್ತು ಸ್ವೀಕಾರವೊಂದೇ ಸರಿಯಾದ ಮಾರ್ಗವಾಗಿದೆ. ಆಸ್ಪತ್ರೆಯಿಂದ ನೇರವಾಗಿ ಮಗು ಪಡೆಯುವುದು, ಮಧ್ಯವರ್ತಿಗಳ ಮೂಲಕ ಹಣ ನೀಡಿ ಮಗು ಪಡೆಯುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿದರು.
ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ(ಕಾರಾ)ದ ಮಗು ದತ್ತು ಸ್ವೀಕಾರ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ ಪೋರ್ಟಲ್ ಮೂಲಕ ನೋಂದಣಿ, ಮನೆ ಅಧ್ಯಯನ, ಮಗುವಿನ ಪರಿಚಯ, ಪೂರ್ವ-ದತ್ತು ಪಾಲನೆ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ದತ್ತು ಆದೇಶದ ಮೂಲಕ ಮಾತ್ರ ದತ್ತು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ವಿವರಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಪರಿತ್ಯಕ್ತ ಮಗು ಕಂಡುಬಂದರೆ, ಕಾನೂನುಬಾಹಿರವಾಗಿ ಯಾರಿಗೂ ಒಪ್ಪಿಸದೆ ತಕ್ಷಣ ಮಕ್ಕಳ ಸಹಾಯವಾಣಿ 1098, ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ದತ್ತು ಮಾಸಾಚರಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾಲೇಜಿನ ಪ್ರಾಚಾರ್ಯೆ ಎಂ.ಎಸ್.ವಸುಧಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಶಾಂತಾಬಾಯಿ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಅಭಿಷೇಕ್ ಉಪಸ್ಥಿತರಿದ್ದರು.