ಹೊಳೆಹೊನ್ನೂರಿನ ಸಮೀಪದ ಭದ್ರಾಪುರ ಗ್ರಾಮದಲ್ಲಿ ನದಿಯಲ್ಲಿ ಅಳವಡಿಸಿದ್ದ ಪಂಪ್‌ಸೆಟ್‌ನ ಕೇಬಲ್ ಕಳವು ಮಾಡಿರುವುದು.
ಹೊಳೆಹೊನ್ನೂರು: ಸಮೀಪದ ಭದ್ರಾಪುರ, ಕೂಡ್ಲಿ, ಅಬ್ಬರಘಟ್ಟ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ತುಂಗಾ ನದಿಯಲ್ಲಿ ಅಳವಡಿಸಿದ್ದ ಪಂಪ್‌ಸೆಟ್‌ಗಳ ಕೇಬಲ್ ಕಳ್ಳತನವಾಗಿದೆ.
ತುಂಗಾ ಹಾಗೂ ಭದ್ರಾ ನದಿಯ ದಂಡೆ ಮೇಲಿರುವ ಜಮೀನಿಗಳಿಗೆ ಪರವಾನಗಿ ಪಡೆದು ರೈತರು ಪಂಪ್‌ಸೆಟ್‌ಗಳನ್ನು ಅಳವಡಿಸಿ ಉಳಿಮೆ ಮಾಡುತ್ತಾರೆ. ಮೂರು ಗ್ರಾಮಗಳ 40ಕ್ಕೂ ಹೆಚ್ಚು ಪಂಪ್‌ಸೆಟ್‌ಗಳ ಕೇಬಲ್ ಕಳವು ಮಾಡಿದ್ದು, ಗುರುವಾರ ಬೆಳಕಿಗೆ ಬಂದಿದೆ.
40ಕ್ಕೂ ಹೆಚ್ಚು ಕೇಬಲ್ಗಳನ್ನು ಕಳವು ಮಾಡುವುದು ಒಬ್ಬರಿಂದ ಅಸಾಧ್ಯ. 10ರಿಂದ 15 ಜನರ ತಂಡ ಇರಬಹುದು. ಇವರು ಮೇನ್ ಫ್ಯೂಜ್ ತೆಗೆಯದೆ ವಿದ್ಯುತ್ ಇಲ್ಲದ ಸಮಯದಲ್ಲಿ ಕೇಬಲ್ ಕಳವು ಮಾಡಿದ್ದಾರೆ. ತುಂಡಾದ ಕೇಬಲ್‌ನಿಂದ ವಿದ್ಯುತ್ ಪ್ರವಹಿಸಿದರೆ ಸಾವು ನಿಶ್ಚಿತ. ಕೇಬಲ್ ಕಳ್ಳತನ ಹೆಚ್ಚಾಗಿ ಹೊನ್ನಾಳಿ ತಾಲೂಕಿನಲ್ಲಿ ನಡೆಯುತ್ತಿದ್ದು, ಇದೀಗ ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನಲ್ಲಿ ಪ್ರಕರಣಗಳು ಬಯಲಿಗೆ ಬರುತ್ತಿವೆ. ಅಧಿಕಾರಿಗಳು ತಕ್ಷಣ ಕಡಿವಾಣ ಹಾಕಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರೈತರ ಪಂಪ್‌ಸೆಟ್‌ಗಳು ನದಿ ತೀರದಲ್ಲಿರುವುದರಿಂದ ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಅಲ್ಲದೆ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಪಿಐ ಶಿವಪ್ರಸಾದ್ ಭರವಸೆ ನೀಡಿದರು.