ಶಿಕಾರಿಪುರದಲ್ಲಿ ಸ್ವಾತಂತ್ರೃದ ಓಟ ನಾಟಕ ಪ್ರದರ್ಶನಕ್ಕೆ ತಹಸೀಲ್ದಾರ್ ಯು.ವಾಣಿ ಚಾಲನೆ ನೀಡಿದರು. ಪ್ರಸನ್ನ ಸಾಗರ, ಇಕ್ಬಾಲ್ ಅಹ್ಮದ್, ಕೆ.ಎಸ್.ಹುಚ್ರಾಯಪ್ಪ ಇತರರಿದ್ದರು.
ಶಿಕಾರಿಪುರ: ರಂಗಕಲೆ ಜತೆಗೆ ಪ್ರಾಯೋಗಿಕ ನಾಟಕಗಳು ಹೊಸ ರಂಗಾಸಕ್ತರನ್ನು ಆಕರ್ಷಿಸುತ್ತಿವೆ ಎಂದು ತಹಸೀಲ್ದಾರ್ ಯು.ವಾಣಿ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶಿವಮೊಗ್ಗ ರಂಗಾಯಣ, ಗುಡಿ ಸಾಂಸ್ಕೃತಿಕ ಕೇಂದ್ರ, ಸ್ನೇಹ ರಂಗ, ಪುರಸಭೆ, ಜೀವ ವಿಮಾ ನಿಗಮದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಾತಂತ್ರೃದ ಓಟ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ರಂಗಭೂಮಿಗೆ ಅನೇಕ ಮಹಾನ್ ಕಲಾವಿದರ ಕೊಡುಗೆ ಇದೆ ಎಂದು ತಿಳಿಸಿದರು.
ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣ ಮಾಧ್ಯಮಗಳು ಜನರನ್ನು ಕಲೆ ಸಂಸ್ಕೃತಿಗಳಿಂದ ದೂರ ಮಾಡುತ್ತಿವೆ. ಹೆಸರಾಂತ ಕಾದಂಬರಿಗಳನ್ನು ನಾಟಕ ರೂಪಕ್ಕೆ ತರುವ ಮೂಲಕ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ರಂಗಭೂಮಿ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು.
ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಸಾಗರ ಮಾತನಾಡಿ, ಮಹಮದ್ ಕುಂಞ ಅವರ ಕಾದಂಬರಿಯನ್ನು ನಟರಾಜ್ ಹೊನ್ನವಳ್ಳಿ ನಿರ್ದೇಶನದಲ್ಲಿ ನಾಟಕವಾಗಿ ರೂಪುಗೊಂಡಿದೆ. ಇಂತಹ ಪ್ರಯತ್ನಗಳಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಪರಸ್ಪರ ಸೌಹಾರ್ದ ಹಾಗೂ ಸಾಮರಸ್ಯ ಸಾರುವ ಅಂಶಗಳು ನಾಟಕದಲ್ಲಿದೆ. ಇಂತಹ ನಾಟಕಗಳನ್ನು ಜನರು ಹೆಚ್ಚು ವೀಕ್ಷಿಸಬೇಕು ಎಂದು ಹೇಳಿದರು.
ಗುಡಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ ಇಕ್ಬಾಲ್ ಅಹ್ಮದ್, ಸಂಚಾಲಕ ಕೆ.ಎಸ್.ಹುಚ್ರಾಯಪ್ಪ, ತಾಲೂಕು ಹಿಂದುಳಿದ ಕಲ್ಯಾಣ ಅಧಿಕಾರಿ ಉಮೇಶ್, ಎಲ್‌ಐಸಿ ಶಾಖೆ ವ್ಯವಸ್ಥಾಪಕ ಸುಬ್ರಹ್ಮಣ್ಯ ಭೂತಾಲ್, ಸ್ನೇಹರಂಗದ ಎಚ್.ಎಸ್.ಮಂಜುನಾಥ್, ಅಬ್ದುಲ್ ವಾಜಿದ್, ರಾಮಕೃಷ್ಣಪ್ಪ ಇತರರಿದ್ದರು.